ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಎನ್‌ಎಸ್‌ಎಸ್‌ನಿಂದ ಬದುಕಿನ ಪಾಠ

Rashmi Kasaragodu
Updated On : 10 Mar 2014, 11:41 am


ಚಿಕ್ಕಮಗಳೂರು:  ರಾಷ್ಟ್ರೀಯ ಸೇವಾ ಯೋಜನೆ ಬದುಕುವ ಕಲೆ ಕಲಿಸುತ್ತದೆ ಎಂದು ತರಳಬಾಳು ಜಗದ್ಗುರು ಮಹಿಳಾ ಪದವಿ ಕಾಲೇಜಿನ ಪ್ರಾಂಶುಪಾಲ ಕೆ.ಎನ್. ಶಿವಣ್ಣ ಹೇಳಿದರು.
ತಾಲೂಕಿನ ಅಲ್ಲಂಪುರದಲ್ಲಿ ನಗರದ ತರಳಬಾಳು ಜಗದ್ಗುರು ಮಹಿಳಾ ಪದವಿ ಕಾಲೇಜು ರಾಷ್ಟ್ರೀಯ ಸೇವಾ ಯೋಜನೆ ಘಟಕಗಳ ವಾರ್ಷಿಕ ವಿಶೇಷ ಶಿಬಿರ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಾತಿ, ಮತ, ಧರ್ಮ, ಪಂಥದ ಭೇದವಿಲ್ಲದೆ ಎಲ್ಲರೂ ಒಂದಾಗಿ ಬಾಳುವ ಪರಿಕಲ್ಪನೆ ರಾಷ್ಟ್ರೀಯ ಸೇವಾ ಯೋಜನೆಯಲ್ಲಿದೆ. ಕಷ್ಟ, ಸವಾಲುಗಳನ್ನು ಎದುರಿಸುವ ವಿಧಾನ, ಸೇವಾ ಮನೋಭಾವದಿಂದ ನಡೆದುಕೊಳ್ಳುವುದನ್ನು, ಗ್ರಾಮೀಣ ಜನಜೀವನ, ಸಂಸ್ಕೃತಿಯನ್ನು ವಿದ್ಯಾರ್ಥಿಗಳು ಅರಿಯಬೇಕು ಎಂದು ಸಲಹೆ ಮಾಡಿದರು.
ಅಸಮಾನತೆ: ಪತ್ರಕರ್ತ ಆರಗ ರವಿ ಮಾತನಾಡಿ, ಸಮಾಜದಲ್ಲಿ ಸ್ವಾರ್ಥ ಮನೋಭಾವ ಹೆಚ್ಚಾಗುತ್ತಿದೆ. ಹತ್ತಾರು ತಲೆಮಾರು ಕುಳಿತು ತಿಂದರೂ ಕರಗದಷ್ಟು ಸಂಪತ್ತನ್ನು ಕೆಲವರು ಗಳಿಸುತ್ತಿದ್ದಾರೆ. ಇದರಿಂದ ಸಮಾಜದಲ್ಲಿ ಅಸಮಾನತೆಯ ಪರಿಧಿ ದೊಡ್ಡದಾಗುತ್ತಿದೆ. ಮನುಷ್ಯನಲ್ಲಿ ನಿಸ್ವಾರ್ಥ ಮನೋಭಾವ ಬೆಳೆಯುವುದು ಅಗತ್ಯ. ಇದಕ್ಕೆ ಎನ್‌ಎಎಎಸ್ ಶಿಬಿರಗಳು ಪೂರಕವಾಗಿವೆ ಎಂದರು.
ಬದುಕುವ ಪಾಠ: ಎನ್‌ಎಸ್‌ಎಸ್ ಜೀವನದ ಪಾಠ ಕಲಿಸುವ ಜತೆಗೆ ಸೇವಾ ಮನೋಭಾವ ಬೆಳೆಸುತ್ತದೆ. ಶಿಬಿರದಲ್ಲಿ ಕಲಿತದ್ದನ್ನು ಜೀವನದಲ್ಲೂ ಅಳವಡಿಸಿಕೊಳ್ಳಬೇಕು. ಸಮಾಜಮುಖಿಯಾಗಿ ಬದುಕಬೇಕು. ಸಮಾಜಕ್ಕೆ ಉತ್ತಮ ಕೊಡುಗೆ ನೀಡುವ ತ್ಯಾಗಿಗಳ ಹೆಸರು ಮಾತ್ರ ಶಾಶ್ವತವಾಗಿರುತ್ತದೆ. ಸಮಾಜಕ್ಕೆ ಉಪಕಾರಿಯಾಗದೆ ಉಪದ್ರವಿಯಾಗುವುದು ವಿಕೃತ ಹಾಗೂ ಅಮಾನವೀಯ ಎಂದು ಹೇಳಿದರು.
ಹೆಚ್ಚಿದ ದುರಾಸೆ: ಭೂಮಿಯ ಮೇಲಿರುವ ಹುಲಿ, ಸಿಂಹ, ಚಿರತೆ, ಆನೆಯಂತಹ ಪ್ರಾಣಿಗಳನ್ನು ಕ್ರೂರ ಎಂದು ತಿಳಿದಿದ್ದೇವೆ. ಆದರೆ, ಬೇಟೆಯಾಡಿ ಹೊಟ್ಟೆ ತುಂಬಿಸಿಕೊಳ್ಳುವುದು ಅವುಗಳ ಜೀವನಕ್ರಮ. ಹೊಟ್ಟೆ ತುಂಬಿದ ಮೇಲೆ ಮತ್ತೆ ಹಸಿವಾಗುವವರೆಗೂ ಆ ಪ್ರಾಣಿಗಳು ಅನಗತ್ಯವಾಗಿ ಬೇಟೆಯಾಡುವುದಿಲ್ಲ. ಆದರೆ, ಮನುಷ್ಯನಿಗೆ ಎಷ್ಟು ಗಳಿಸಿದರೂ ದಾಹ ತೀರುತ್ತಿಲ್ಲ. ಪ್ರಕೃತಿಯನ್ನೇ ನುಂಗಿ ಹಾಕುವ ಮಟ್ಟಕ್ಕೆ ಆತನ ದುರಾಸೆ ಹೆಚ್ಚಿದೆ. ನೆಲೆ ನೀಡಿದ ಪ್ರಕೃತಿಯ ಮೇಲೆ ದೌರ್ಜನ್ಯವೆಸಗುವ ಮನುಷ್ಯನೇ ಹೆಚ್ಚು ಕ್ರೂರಿಯಾಗುತ್ತಿದ್ದಾನೆ ಎಂದರು.
ಶಿಬಿರ ಉದ್ಘಾಟಿಸಿದ ದಾನಿ ಬಿ.ಎಚ್. ನರೇಂದ್ರ ಪೈ ಮಾತನಾಡಿ, ರಾಷ್ಟ್ರೀಯ ಸೇವಾ ಯೋಜನೆಯ ಆಶಯಗಳು ಈಡೇರಿದರೆ ದೇಶ ಸುಭಿಕ್ಷವಾಗುತ್ತದೆ. ಒಬ್ಬರನ್ನೊಬ್ಬರು ಅರಿತು ಪ್ರೀತಿ, ವಿಶ್ವಾಸದಿಂದ ಬದುಕುವುದನ್ನು ಎನ್‌ಎಸ್‌ಎಸ್ ಕಲಿಸುತ್ತದೆ. ವಿದ್ಯಾರ್ಥಿಗಳು ಗ್ರಾಮಸ್ಥರ ಪ್ರೀತಿ, ವಿಶ್ವಾಸ ಗಳಿಸಿಕೊಂಡು, ಗ್ರಾಮೀಣ ಜನಜೀವನ ಅರ್ಥ ಮಾಡಿಕೊಳ್ಳಬೇಕು. ಸಮಾಜದ ಅಶಕ್ತರು, ಅಬಲರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದು ಸಲಹೆ ಮಾಡಿದರು.
ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಹೊನ್ನಪ್ಪಶೆಟ್ಟಿ, ಕನ್ನಡ ಉಪನ್ಯಾಸಕ ಟಿ. ಸಂದೀಪ್, ಆಂಗ್ಲ ಉಪನ್ಯಾಸಕಿ ಸೌಮ್ಯ, ಶಿಬಿರಾಧಿಕಾರಿ ಎಚ್.ಎಂ. ಅಂಬುಜಾಕ್ಷಿ ಮಾತನಾಡಿದರು. ಶಿಬಿರಾಧಿಕಾರಿ ಜೆ.ಕೆ. ಭಾರತಿ ಪ್ರಾಸ್ತಾವಿಕವಾಗಿ ಮಾತನಾಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement