ತಾತ್ಕಾಲಿಕ ತಡೆಯಾಜ್ಞೆ: ಚುನಾವಣೆ ಮುಂದೂಡಿಕೆ
ಕಡೂರು: ಕಡೂರು ಟೌನ್ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ನಡೆಯಬೇಕಿದ್ದ ಚುನಾವಣೆಗೆ ತಾತ್ಕಾಲಿಕ ತಡೆಯಾಜ್ಞೆ ತಂದಿರುವುದರಿಂದ ಚುನಾವಣೆ ಮುಂದೂಡಲಾಗಿದೆ ಎಂದು ತರೀಕೆರೆಯ ಅಸಿಸ್ಟೆಂಟ್ ರಿಜಿಸ್ಟ್ರಾರ್ ಹರೀಶ್ ಕುಮಾರ್ ತಿಳಿಸಿದ್ದಾರೆ.
ಈ ಬಗ್ಗೆ ಕಡೂರು ಟೌನ್ ಕೋ ಆಪರೇಟಿವ್ ಕಚೇರಿಯಲ್ಲಿ ಸೊಸೈಟಿಗೆ ಆಯ್ಕೆಯಾಗಿರುವ ನೂತನ ನಿರ್ದೇಶಕರ ಸಮ್ಮುಖದಲ್ಲಿ ಮಾಹಿತಿ ನೀಡಿ ಮಾತನಾಡಿದ ಅವರು, ಮೊಹಮದ್ ಆದಮ್ ಎಂಬುವರು ತಾವೂ ಸೇರಿದಂತೆ 11 ನಿರ್ದೇಶಕರ ಮೇಲೆ ಕಡೂರು ನ್ಯಾಯಾಲಯದಿಂದ ಕಡೂರು ಟೌನ್ ಕೋ ಆಪರೇಟೀವ್ ಸೊಸೈಟಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ನಡೆಯಬೇಕಿದ್ದ ಚುನಾವಣೆಯನ್ನು ರದ್ದುಪಡಿಬೇಕು ಎಂದು ಕೋರಿ ಮನವಿ ಸಲ್ಲಿಸಿದ್ದಾರೆ ಎಂದರು.
ಈ ಹಿನ್ನೆಲೆಯಲ್ಲಿ ನ್ಯಾಯಾಲಯ ತಾತ್ಕಾಲಿಕ ತಡೆ ನೀಡಿದೆ. ಕಳೆದ ನಿರ್ದೇಶಕರ ಚುನಾವಣೆಯಲ್ಲಿ ಸೊಸೈಟಿ ನಿಯಮಗಳಿಗಿಂತ ರು. 500 ಶೇರುಧನ ಇದ್ದರೂ, ಅದನ್ನು ಪರಿಪಾಲಿಸದೆ ಹಾಗೂ ಸಾಲ ಪಡೆದವರೂ ಕೂಡ ಚುನಾವಣೆಯಲ್ಲಿ ಮತ ಚಲಾಯಿಸಿದ್ದಾರೆ ಎಂದು ದೂರು ಸಲ್ಲಿಸಿದ ಹಿನ್ನೆಲೆಯಲ್ಲಿ ತಡೆಯಾಜ್ಞೆ ತರಲಾಗಿದೆ ಎಂದು ಹೇಳಿದರು.
ಹಾಜರಿದ್ದ ನೂತನ ನಿರ್ದೇಶಕರ ಪರವಾಗಿ ಸೊಸೈಟಿ ನಿರ್ದೇಶಕ ಸೋಮೇಶ್ ಮಾತನಾಡಿ, ಸೊಸೈಟಿ ನಿಯಮ ಉಲ್ಲಂಘಿಸಿ ಚುನಾವಣೆ ನಡೆಸಲಾಗಿದೆ ಎಂಬ ಆರೋಪ ಶುದ್ಧ ಸುಳ್ಳು. ಸೊಸೈಟಿ ನಿಯಮದಂತೆಯೇ ಮತದಾರರು ಮತದಾನ ಮಾಡುವ ಮೂಲಕ ನಿರ್ದೇಶಕರ ಚುನಾವಣೆ ನಡೆದಿದೆ. ಯಾವುದೇ ನಿಯಮಗಳನ್ನು ಮೀರಿಲ್ಲ ಎಂದರು.
ಕೆ.ಎಚ್. ರವಿ, ಕೆ.ಜಿ. ಶ್ರೀನಿವಾಸಮೂರ್ತಿ, ಮಂಜುನಾಥ್, ಶ್ರೀನಿವಾಸ್, ಪ್ರಸಾದ್, ಚನ್ನಕೇಶವ ಮೊದಲಾದವರು ಉಪಸ್ಥಿತರಿದ್ದರು.