ಮಹಿಳಾ ದೌರ್ಜನ್ಯ ತಡೆಗೆ ಸರ್ಕಾರ ವಿಫಲ
ಕ.ಪ್ರ. ವಾರ್ತೆ, ಚಿಕ್ಕಮಗಳೂರು, ಮಾ.9
ಮಹಿಳೆಯರ ಮೇಲಿನ ದೌರ್ಜನ್ಯ ಹಾಗೂ ಶೋಷಣೆ ತಡೆಗಟ್ಟುವಲ್ಲಿ ಈವರೆಗೆ ಆಡಳಿತ ನಡೆಸಿರುವ ಎಲ್ಲಾ ಸರ್ಕಾರಗಳು ವಿಫಲವಾಗಿವೆ ಎಂದು ಸಿಪಿಐ ಜಿಲ್ಲಾ ಕಾರ್ಯದರ್ಶಿ ಎಚ್.ಎಂ. ರೇಣುಕಾರಾಧ್ಯ ಆರೋಪಿಸಿದರು.
ನಗರದ ಎಂಇಎಸ್ ಕಾಲೇಜಿನ ಸಭಾಂಗಣದಲ್ಲಿ ಭಾನುವಾರ ನಡೆದ ಬಿಸಿಯೂಟ ಕಾರ್ಯಕರ್ತೆಯರ ಹಾಗೂ ಮಹಿಳಾ ಸಂಘಟನೆಯ ಸಮಾವೇಶ ಉದ್ಘಾಟಿಸಿ ಮಾತನಾಡಿ, ದೇಶದ ಹಲವೆಡೆ ಹೆಣ್ಣುಮಕ್ಕಳಿಗೆ ದೈಹಿಕ ಹಾಗೂ ಮಾನಸಿಕವಾಗಿ ಕಿರುಕುಳ ನೀಡಲಾಗುತ್ತಿದೆ. ಈ ರೀತಿಯ ದೌರ್ಜನ್ಯ ತಡೆಯುವಲ್ಲಿ ಸರ್ಕಾರಗಳು ವಿಫಲವಾಗಿವೆ ಎಂದು ಹೇಳಿದರು.
ಚುನಾವಣೆ ಸಂದರ್ಭದಲ್ಲಿ ಬಣ್ಣದ ಮಾತುಗಳನ್ನು ಆಡಿ, ಮತ ಪಡೆದು ಗೆದ್ದ ಮೇಲೆ ಮತದಾರರನ್ನು ಮರೆಯುವ ಗುಣಗಳನ್ನು ಹಿಂದೆ ಈ ದೇಶ ಮತ್ತು ರಾಜ್ಯವನ್ನು ಆಳಿದ ಪಕ್ಷಗಳು ಹೊಂದಿವೆ. ಮಹಿಳೆಯರ ಪರವಾಗಿ ಹಲವು ಹೋರಾಟ ನಡೆಸಿಕೊಂಡು ಬಂದಿರುವ ಸಿಪಿಐ ಪಕ್ಷದ ಅಭ್ಯರ್ಥಿಗೆ ಈ ಲೋಕಸಭಾ ಚುನಾವಣೆಯಲ್ಲಿ ಮತ ನೀಡಬೇಕೆಂದು ಮನವಿ ಮಾಡಿದರು.
ಜನಪರ ಕೆಲಸ ಮಾಡಿಲ್ಲ: ಬಿಸಿಯೂಟ ಫೆಡರೇಷನ್ನ ಜಿಲ್ಲಾಧ್ಯಕ್ಷ ಜಿ. ರಘು ಮಾತನಾಡಿ, ಬಿಜೆಪಿ ಸುಳ್ಳು ಹೇಳುವವರ ಪಕ್ಷ, ಕಾಂಗ್ರೆಸ್ ಪಕ್ಷಕ್ಕೆ ಸುಳ್ಳು ಹೇಳುವುದು ಗೊತ್ತಿಲ್ಲ. ಸತ್ಯ ಹೇಳುವುದು ಗೊತ್ತಿಲ್ಲ. ಜನಪರವಾಗಿ ಕೆಲಸ ಮಾಡದೆ ಇರುವ ಈ ಪಕ್ಷಗಳ ಅಭ್ಯರ್ಥಿಗಳು ಚುನಾವಣೆಯಲ್ಲಿ ಮತ ಕೇಳಲು ಬಂದರೆ ಅವರನ್ನು ಪ್ರಶ್ನಿಸುವ ಕೆಲಸವನ್ನು ಮಹಿಳೆಯರು ಮಾಡಬೇಕು ಎಂದು ಅವರು ಕರೆ ನೀಡಿದರು.
ಬಿಸಿಯೂಟ ಕಾರ್ಯಕರ್ತೆಯರು ಅಲ್ಪ ಗೌರವಧನಕ್ಕೆ ಕೆಲಸ ಮಾಡುತ್ತಿದ್ದಾರೆ. ನಮಗೆ ಗೌರವಧನ ಬೇಡ. ಕನಿಷ್ಠ ವೇತನ ನೀಡಬೇಕೆಂದು ಕೇಳಬೇಕು ಎಂದ ಅವರು, ಉನ್ನತ ಶಿಕ್ಷಣ ಎಂಬುದು ದುಡಿಯುವ ವರ್ಗದ ಮಕ್ಕಳಿಗೆ ಮರೀಚಿಕೆಯಾಗಿದೆ. ಉಳ್ಳವರ ಮಕ್ಕಳು ಉನ್ನತ ವ್ಯಾಸಂಗ ಮಾಡಿ ಉನ್ನತ ಹುದ್ದೆ ಪಡೆಯುತ್ತಿದ್ದಾರೆ. ಈ ಬಗ್ಗೆ ದುಡಿಯುವ ವರ್ಗ ಎಚ್ಚೆತ್ತುಕೊಳ್ಳಬೇಕು ಎಂದು ಹೇಳಿದರು.
ಬಡವರ ಪರ ಹೋರಾಟ: ಎಐಟಿಯುಸಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿಜಯಕುಮಾರ್ ಮಾತನಾಡಿ, ಚಿಕ್ಕಮಗಳೂರು ಜಿಲ್ಲೆಯಲ್ಲಿ ಸಿಪಿಐ ಪಕ್ಷ ಬಡವರ ಪರವಾಗಿ ಹಲವು ಹಂತದಲ್ಲಿ ಹೋರಾಟ ನಡೆಸಿಕೊಂಡು ಬಂದಿದೆ ಎಂದರು.
ನಿವೇಶನರಹಿತರ ಪರವಾಗಿ ಹಲವು ಹಂತದಲ್ಲಿ ಹೋರಾಟ ನಡೆಸಿದ್ದರ ಫಲವಾಗಿ ಕೆಲವೆಡೆ ಬಡವರಿಗೆ ಜಿಲ್ಲಾಡಳಿತ ಖಾಲಿ ನಿವೇಶನ ನೀಡುವ ಪ್ರಯತ್ನ ಮಾಡಿತು. ಆದರೆ, ಕೆಲವೆಡೆ ಬಲಾಢ್ಯರು ಬಡವರಿಗೆ ನಿವೇಶನ ನೀಡದಂತೆ ತಕರಾರು ಎತ್ತಿದ್ದರು. ಇದನ್ನು ವಿರೋಧಿಸಿ ಸಿಪಿಐ ಹೋರಾಟ ನಡೆಸಿಕೊಂಡು ಬಂದಿದೆ. ಅದೇ ರೀತಿ ಬಿಸಿಯೂಟ ಕಾರ್ಯಕರ್ತರಿಗೆ ಗೌರವಧನ ಹೆಚ್ಚಳಕ್ಕಾಗಿ ಹೋರಾಟ ನಡೆಸಿಕೊಂಡು ಬಂದು ಯಶಸ್ಸು ಕಂಡಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಬಿಸಿಯೂಟ ಫೇಡರೇಷನ್ನ ತರೀಕೆರೆ ತಾಲೂಕು ಕಾರ್ಯದರ್ಶಿ ಶಿವಕುಮಾರ್, ಚಿಕ್ಕಮಗಳೂರು ತಾಲೂಕು ಕಾರ್ಯದರ್ಶಿ ಇಂಧುಮತಿ, ಕಡೂರು ತಾಲೂಕು ಅಧ್ಯಕ್ಷೆ ಪುಷ್ಪ, ಚಿಕ್ಕಮಗಳೂರು ತಾಲೂಕು ಸಹ ಕಾರ್ಯದರ್ಶಿ ಚಂದ್ರಕಲಾ ಉಪಸ್ಥಿತರಿದ್ದರು.