ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಸಮಾನತೆ ಬದುಕಿಗೆ ಕಾನೂನು ಅರಿವು ಅಗತ್ಯ

Rashmi Kasaragodu
Updated On : 10 Mar 2014, 11:41 am

ನ್ಯಾಯಾಲಯದ ಸಹಾಯಕ ಸರ್ಕಾರಿ ಅಭಿಯೋಜಕರಾದ ಪಾರ್ವತಿ ಅಭಿಮತ

ಕ.ಪ್ರ.ವಾರ್ತೆ, ಕಡೂರು, ಮಾ.9
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಮಹಿಳೆ ಕೂಡಾ ಎಲ್ಲರಂತೆ ಸಮಾನತೆಯಿಂದ ಸಮಾಜದಲ್ಲಿ ಬದುಕಿ ಬಾಳಬೇಕಾದರೆ ಕಾನೂನಿನ ತಿಳಿವಳಿಕೆ ಹಾಗೂ ಸಮಾಜದ ಜಾಗೃತಿ ಬಹುಮುಖ್ಯ ಎಂದು ಕಡೂರು ನ್ಯಾಯಾಲಯದ ಸಹಾಯಕ ಸರ್ಕಾರಿ ಅಭಿಯೋಜಕರಾದ ಪಾರ್ವತಿ ಹೇಳಿದರು.
ಅವರು ಕಡೂರು ತಾಲೂಕಿನ ಅಣ್ಣೇಗೆರೆಯ ಸ.ಹಿ.ಪ್ರಾ. ಶಾಲಾ ಅವರಣದಲ್ಲಿ ವಿಕಸನ ಸಂಸ್ಥೆ, ನವಚೇತನ ಮಹಿಳಾ ಒಕ್ಕೂಟ ಹಾಗೂ ತಾಲೂಕು ಕಾನೂನು ಸೇವಾ ಪ್ರಾಧಿಕಾರದ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಅಂತಾರಾಷ್ಟೀಯ ಮಹಿಳಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ಚೌಕಟ್ಟು ಸಲ್ಲ: ಮಹಿಳೆ ನಾಲ್ಕು ಗೋಡೆಯ ಚೌಕಟ್ಟಿಗೆ ಸೀಮಿತವಾಗದೆ ಹೊರಬಂದು ಆಧುನಿಕ ಪ್ರಪಂಚದಲ್ಲಿ ತನ್ನದೇ ಆದ ಹಕ್ಕು ಹಾಗೂ ತನಗೆ ಸಿಗಬೇಕಾಗಿರುವ ಸಾಮಾಜಿಕ, ಸಾಂವಿಧಾನಿಕ ಹಕ್ಕುಗಳನ್ನು ಪಡೆಯಲು ಸ್ವತಂತ್ರಳಾಗಿದ್ದಾಳೆ ಎಂದರು.
ದೇಶದ ಕಾನೂನು ಮಹಿಳೆ ಪರವಾಗಿ ವಿಶೇಷ ಒಲವು ತೋರುವ ಮೂಲಕ ಮಹಿಳೆ ಕೂಡ ಪುರುಷರಂತೆ ಸಾಮಾಜಿಕವಾಗಿ ರಾಜಕೀಯವಾಗಿ ಎಲ್ಲಾ ರೀತಿಯ ಸಮಾನ ಹಕ್ಕು ಪಡೆಯಲು ಅರ್ಹಳು ಎಂಬುದನ್ನು ಈಗಾಗಲೇ ಸಾಬೀತುಪಡಿಸಿದ್ದಾಳೆ ಎಂದವರು ಹೇಳಿದರು.
ಪಟ್ಟಣ ಪ್ರದೇಶ ಅಲ್ಲದೆ ಗ್ರಾಮಾಂತರ ಪ್ರದೇಶದ ಹೆಣ್ಣು ಮಕ್ಕಳೂ ಕೂಡ ತಮಗೆ ಸಿಗಬೇಕಾದ ಸಾಮಾಜಿಕ ಮೂಲ ಹಕ್ಕು ಹಾಗೂ ಸವಲತ್ತು ಪಡೆಯಲು ಹೋರಾಟ ನಡೆಸುವ ನಿಟ್ಟಿನಲ್ಲಿ ಜಾಗೃತಳಾಗಬೇಕು. ಈ ನಿಟ್ಟಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಂತಹ ಕಾರ್ಯಕ್ರಮ ಮಹಿಳೆಯರ ಪ್ರಗತಿಗೆ ಪೂರಕವಾಗಿವೆ ಎಂದರು.
ಮರೆಯುವಂತಿಲ್ಲ: ಅತಿಥಿಗಳಾಗಿದ್ದ ಸಹಾಯಕ ಕೃಷಿ ಅಧಿಕಾರಿ ಎಸ್.ಕೆ. ಕಲ್ಲೇಶಪ್ಪ ಮಾತನಾಡಿ, 12ನೇ ಶತಮಾನದಲ್ಲಿ ಶರಣರು ಮಹಿಳೆಯರಿಗೆ ಸಮಾನತೆ ನೀಡುವ ನಿಟ್ಟಿನಲ್ಲಿ ಅನುಭವ ಮಂಟಪದಲ್ಲಿ ಬಸವಣ್ಣನವರು ಚಿಂತಿಸಿದ್ದನ್ನು ಮರೆಯುವಂತಿಲ್ಲ. ಮಹಿಳೆ ಕುಟುಂಬದ ಪೋಷಣೆ ಜೊತೆ ಸಾಮಾಜಿಕ ಜವಬ್ದಾರಿ ಕೂಡಾ  ಹೊರಬಲ್ಲಳು ಎಂಬುದನ್ನು ಈ ಜಾಗತೀಕರಣ ಆಧುನೀಕರಣದಲ್ಲಿ ಸಾಬೀತುಪಡಿಸಿದ್ದಾಳೆ ಎಂದರು.
ಅಧ್ಯಕ್ಷತೆ ವಹಿಸಿದ್ದ ವಿಕಸನ ಸಂಸ್ಥೆ ಅಧ್ಯಕ್ಷ ಎ.ಎಂ.ವರ್ಗೀಸ್ ಕ್ಲೀಟಸ್ ಮಾತನಾಡಿ, ಪುರುಷರಂತೆ ಸ್ತ್ರೀ ಕೂಡ ಸಮಾಜದ ಒಂದು ಘಟಕ ಎಂದರು.
ಮಹಿಳೆಗೆ ಮಾತೆಯಂತಹ ಪವಿತ್ರ ಸ್ಥಾನ ನೀಡಿದ್ದರೂ, ಆಕೆಯ ಮೇಲಿನ ಶೋಷಣೆ ಮಾತ್ರ ತಪ್ಪಿಲ್ಲ. ಕೌಟುಂಬಿಕ ದೌರ್ಜನ್ಯ ಸೇರಿದಂತೆ ಎಲ್ಲಾ ರೀತಿಯ ಶೋಷಣೆಯಿಂದ ಹೊರಬರಲು ಮಹಿಳೆಯರನ್ನು ಜಾಗೃತಗೊಳಿಸಲು ಕರ್ನಾಟಕದಲ್ಲಿ 300ಕ್ಕೂ ಹೆಚ್ಚು ಸ್ವಯಂಸೇವಾ ಸಂಸ್ಥೆಗಳು ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡು ಕೆಲಸ ಮಾಡುತ್ತಿವೆ ಎಂದವರು ಹೇಳಿದರು.
ಕಾನೂನು ಸೇವಾ ಪ್ರಾಧಿಕಾರದ ವಕೀಲ ಎನ್. ಶೇಖರ್, ಯಗಟಿ ಕಾರ್ಪೋರೇಶನ್ ಬ್ಯಾಂಕ್ ವ್ಯವಸ್ಥಾಪಕ ಎಸ್.ಎನ್. ಚಂದ್ರಶೇಖರ್, ಕಡೂರಿನ ನವಚೇತನ ಜಾಗೃತಿ ಸಂಸ್ಥೆಯ ಎಲ್.ಸಿ. ವಸಂತ ಕುಮಾರಿ, ಸಾಂತ್ವನ ಮಹಿಳಾ ಕೇಂದ್ರದ ಎಚ್.ಡಿ. ಗೀತಾ, ನಿವೃತ್ತ ಶಿಕ್ಷಕ ತ್ಯಾಗದಕಟ್ಟೆ ತಿಪ್ಪೇಶಪ್ಪ, ವಿಕಸನ ಸಂಸ್ಥೆಯ ಸಂಯೋಜಕ ಮುಕುಂದ್, ಶ್ರೀನಿವಾಸ್ ಸೇರಿದಂತೆ ಒಕ್ಟೂದ ಮಹಿಳೆಯರು ಮಾತನಾಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement