ಸೀಟು ಮಾರಾಟ ಮಾಡಿರುವ ಕಾಲೇಜು ವಿರುದ್ಧ ಕ್ರಮಕ್ಕೆ ಆಗ್ರಹ
ಚಿಕ್ಕಮಗಳೂರು: ರಾಜ್ಯದ ಸಮುದಾಯದ ಮೀಸಲು ಸೀಟುಗಳನ್ನು ಮಾರಿಕೊಂಡಿರುವ ಭಾಷಾ, ಧಾರ್ಮಿಕ ಅಲ್ಪಸಂಖ್ಯಾತ ಕಾಲೇಜುಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಎಬಿವಿಪಿ ಆಗ್ರಹಿಸಿದೆ. ರಾಜ್ಯದಲ್ಲಿ ಹಲವಾರು ಭಾಷಾ ಹಾಗೂ ಧಾರ್ಮಿಕ ಅಲ್ಪಸಂಖ್ಯಾತ ಕಾಲೇಜುಗಳಿದ್ದು, ಈ ಕಾಲೇಜುಗಳಲ್ಲಿ ಭಾಷಾ ಹಾಗೂ ಧಾರ್ಮಿಕ ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳಿಗೆ ಅನುಕೂಲವಾಗಲೆಂದೇ ಸೀಟು ಹಂಚಿಕೆಯಲ್ಲಿ ಕಾಲೇಜುಗಳಿಗೆ ಹೆಚ್ಚಿನ ಅನುಪಾತದ ಮೌಲ್ಯಯುತ ವೃತ್ತಿಪರ ಸೀಟುಗಳನ್ನು ನಿಯಮಾನುಸಾರ ಆಡಳಿತ ಮಂಡಳಿಗೆ ಮೀಸಲಿಡಲಾಗಿದೆ. ಆದರೆ, ಈ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ, ಸಮುದಾಯದ ಹಿತ ಕಡೆಗಣಿಸಿ, ದುಬಾರಿ ಬೆಲೆಗೆ ವೈದ್ಯಕೀಯ, ದಂತ ವೈದ್ಯಕೀಯ ಸೀಟುಗಳನ್ನು ಕಾಲೇಜುಗಳು ಮಾರಿಕೊಂಡಿವೆ ಎಂದು ಎಬಿವಿಪಿ ಜಿಲ್ಲಾ ಸಂಚಾಲಕ ಸಂತೋಷ್ ಕೋಟ್ಯಾನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಭಾರತೀಯ ವೈದ್ಯ ಪರಿಷತ್ತು(ಎಂಸಿಐ), ರಾಷ್ಟ್ರೀಯ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳ ಆಯೋಗ ಷರತ್ತುಗಳನ್ನು ವಿಧಿಸಿದ್ದು, ಷರತ್ತುಗಳ ಪ್ರಕಾರ ಸ್ಥಳೀಯವಾಗಿ ಭಾಷಾ ಹಾಗೂ ಧಾರ್ಮಿಕ ಅಲ್ಪಸಂಖ್ಯಾತ ಜನಾಂಗದ ವಿದ್ಯಾರ್ಥಿಗಳಿಗೆ ಕಾಲೇಜುಗಳಲ್ಲಿ ನಿರ್ದಿಷ್ಟ ಸೀಟುಗಳನ್ನು ಮೀಸಲಿರಿಸಲಾಗಿದೆ. ಸರ್ಕಾರಿ ಮತ್ತು ಖಾಸಗಿ ಸೀಟು ಹಂಚಿಕೆ ಸಂದರ್ಭದಲ್ಲಿ ಹೆಚ್ಚುವರಿಯಾಗಿ ಸೀಟುಗಳನ್ನು ಪಡೆದಿರುವ ಕಾಲೇಜುಗಳು ಸೀಟುಗಳನ್ನು ಅಕ್ರಮವಾಗಿ ಮಾರಿಕೊಂಡಿರುವುದು ರಾಜ್ಯದ ಬಡ ವಿದ್ಯಾರ್ಥಿಗಳಿಗೆ ಮೋಸ ಮಾಡಿದಂತಾಗಿದೆ ಎಂದು ತಿಳಿಸಿದ್ದಾರೆ.