ಅಕ್ರಮ ಮದ್ಯ ಮಾರಾಟಕ್ಕೆ ವಿರೋಧ
ನರಸಿಂಹರಾಜಪುರ: ಹೊನ್ನೇಕೊಡಿಗೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಬಿಳಾಲುಕೊಪ್ಪ ಗ್ರಾಮದ ಹಂದೂರು, ಬಿದರಮನೆ ಬಿ. ಕಾಲೋನಿಯಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದು, ಇದರಿಂದ ಗ್ರಾಮದಲ್ಲಿ ಅಶಾಂತಿ ನೆಲಸಿದೆ ಎಂದು ಆರೋಪಿಸಿ ಗ್ರಾಮದ ಮಹಿಳೆಯರು ಸೋಮವಾರ ತಾಲೂಕು ಕಚೇರಿ ಎದರು ಧರಣಿ ನಡೆಸಿದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಮುಖಂಡರಾದ ಗೋಪಾಲ್, ಶಿವಕುಮಾರ್ ನೇತೃತ್ವದಲ್ಲಿ ನಡೆದ ಧರಣಿಯಲ್ಲಿ ಗ್ರಾಮದ ಮಹಿಳೆಯರು ಪಾಲ್ಗೊಂಡಿದ್ದರು. ನಂತರ ಅಬಕಾರಿ ಇಲಾಖೆಗೆ ತೆರಳಿ ಇಲಾಖೆಯ ಉಪ ಅಧೀಕ್ಷಕ ತೊಳಚನಾಯಕ್ ಅವರಿಗೆ ಮನವಿ ಪತ್ರ ನೀಡಲಾಯಿತು.
ಮನವಿ ಪತ್ರದಲ್ಲಿ, ಹಂದೂರು, ಬಿದರಮನೆ ಬಿ. ಕಾಲೋನಿಯ ಹಲವಾರು ಮನೆ, ಅಂಗಡಿಗಳಲ್ಲಿ ಅಕ್ರಮ ಮದ್ಯ ದಾಸ್ತಾನು ಇಟ್ಟುಕೊಂಡು ಕಾನೂನು ಬಾಹಿರವಾಗಿ ಅಕ್ರಮ ಮಾರಾಟ ಮಾಡುತ್ತಿದ್ದಾರೆ.
ಈ ಗ್ರಾಮಗಳಲ್ಲಿ ಬಹುತೇಕ ಪ.ವರ್ಗ, ಪ.ಜಾತಿ, ಕೂಲಿ ಕಾರ್ಮಿಕರು, ಬಡವರೇ ವಾಸವಾಗಿದ್ದಾರೆ. ಕೂಲಿಯಿಂದ ಬಂದ ಹಣವನ್ನು ಮದ್ಯಕ್ಕಾಗಿ ವ್ಯಯ ಮಾಡುತ್ತಿದ್ದಾರೆ. ಇದರಿಂದ ಮನೆಗಳಲ್ಲಿ ನೆಮ್ಮದಿಯಿಂದ ಬದಕಲು ಸಾಧ್ಯವಾಗುತ್ತಿಲ್ಲ. ಮಕ್ಕಳಿಗೆ ಶಿಕ್ಷಣ ನೀಡಲು ಸಾಧ್ಯವಾಗುತ್ತಿಲ್ಲ. ಕೆಲವರು ಮದ್ಯಪಾನ ಮಾಡಿಕೊಂಡು ಬಂದು ಗಲಾಟೆ ಮಾಡಿ ಗ್ರಾಮದಲ್ಲಿ ಶಾಂತಿ ಭಂಗ ಉಂಟು ಮಾಡುತ್ತಿದ್ದಾರೆ. ಆದ್ದರಿಂದ ಸಂಬಂಧಪಟ್ಟ ಇಲಾಖೆಯವರು ಕಾನೂನಿನಂತೆ ಕ್ರಮ ಜರುಗಿಸುವಂತೆ ಮಹಿಳೆಯರು ಆಗ್ರಹಿಸಿದ್ದಾರೆ.