ಕೃಷಿಯಲ್ಲಿ ಹೊಸ ಆವಿಷ್ಕಾರ ಅಳವಡಿಸಿ
ಕ.ಪ್ರ.ವಾರ್ತೆ ತರೀಕೆರೆ ಮಾ.10
ರೈತರು ಕೃಷಿಯ ಆವಿಷ್ಕಾರಗಳನ್ನು ತೊಡಗಿಸಿಕೊಳ್ಳಬೇಕು ಎಂದು ನಬಾರ್ಡ್ ಚಿಕ್ಕಮಗಳೂರು ಜಿಲ್ಲಾ ಅಭಿವೃದ್ಧಿ ವ್ಯವಸ್ಥಾಪಕರಾದ ಅನುರಾಧ ನರಹರಿ ತಿಳಿಸಿದರು.
ಇಲ್ಲಿನ ಬುಕ್ಕಾಂಬುದಿ ವಿರೂಪಾಕ್ಷೇಶ್ವರ ಸಮುದಾಯ ಭವನದಲ್ಲಿ ನಬಾರ್ಡ್, ಜನಚಿಂತನ ಸಂಸ್ಥೆ ವತಿಯಿಂದ ಬುಕ್ಕಾಂಬುದಿ ವಿರೂಪಾಕ್ಷೇಶ್ವರ, ಶಿರಿಗಲಿಪುರದ ಬಾಳೆಕಲ್ಲು ಸಿದ್ದೇಶ್ವರ, ಕೆಂಚಾಪುರ ಆಂಜನೇಯ ಸ್ವಾಮಿ, ಅತ್ತಿಗಟ್ಟೆಯ ಮೈಲಾರಲಿಂಗೇಶ್ವರ, ಮಾಕನಹಳ್ಳಿ ಜುಂಜಪ್ಪಸ್ವಾಮಿ ರೈತಕೂಟಗಳ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ರೈತಕೂಟಗಳ ಮೂಲಕ ರೈತರು ಮಾಹಿತಿ, ಮುಂದಾಳತ್ವ ತರಬೇತಿ, ಹೆಚ್ಚಿನ ಮಾಹಿತಿಗಾಗಿ ರಾಜ್ಯ ಮತ್ತು ಅಂತರ ರಾಜ್ಯ ಕಲಿಕಾ ಪ್ರವಾಸಗಳನ್ನು ನಬಾರ್ಡ್ ಆರ್ಥಿಕ ಸಹಾಯದೊಂದಿಗೆ ಮಾಡಬಹುದು.
ಇಂತಹ ಯೋಜನೆ ಕಾರ್ಯಕ್ರಮಗಳನ್ನು ಮಂಜೂರಾತಿ ಪಡೆದು ನಡೆಸಬಹುದು ಎಂದು ತಿಳಿಸಿದರು.
ಹೊಸ ಆವಿಷ್ಕಾರ: ರೈತರು ರೈತಕೂಟದ ಸಭೆ, ಮಾಹಿತಿ ಕೂಟ, ಜಾಗೃತಿ ಸಭೆ, ಕೃಷಿತಜ್ಞರ ಭೇಟಿಗಳಿಗಾಗಿ ತಗುಲುವ ಮೊತ್ತವನ್ನು ನಬಾರ್ಡ್ ಅನುದಾನವಾಗಿ ನೀಡಲಿದೆ ಎಂದವರು ಈ ಸಂದರ್ಭದಲ್ಲಿ ತಿಳಿಸಿದರು.
ರೈತರು ಇದರ ಸದುಪಯೋಗ ಪಡೆದು, ರೈತರು ಕೃಷಿಯ ಹೊಸ ಆವಿಷ್ಕಾರಗಳಿಗೆ ತಮ್ಮನ್ನು ತೊಡಗಿಸಿಕೊಳ್ಳಲು ಪ್ರಯತ್ನಶೀಲರಾಗಬೇಕು ಎಂದು ತಿಳಿಸಿದರು.
ಸೌಲಭ್ಯ ಉಪಯೋಗಿಸಿ: ಜನಚಿಂತನ ಸಂಸ್ಥೆ ಅಧ್ಯಕ್ಷ ಎನ್.ವೀರಭದ್ರಪ್ಪ ಮಾತನಾಡಿ, ರೈತಕೂಟಗಳಿಂದ ರೈತರಿಗೆ ಕೃಷಿಗೆ ಸಂಬಂದಿಸಿದ ಅವಶ್ಯಕತೆಯ ಮಾಹಿತಿಯನ್ನು ನಬಾರ್ಡ್ ಸಹಕಾರದೊಂದಿಗೆ ಪಡೆಯಬಹುದು. ಎಲ್ಲಾ ರೈತರಿಗೆ ಕೃಷಿಯ ಹೊಸ ಆವಿಷ್ಕಾರಗಳನ್ನು ತಿಳಿಸಬಹುದು ಎಂದವರು ಈ ಸಂದರ್ಭದಲ್ಲಿ ಹೇಳಿದರು.
ನಬಾರ್ಡ್ನಿಂದ ದೊರೆಯುವ ಸೌಲಭ್ಯಗಳನ್ನು ರೈತರು ಉಪಯೋಗಿಸಿಕೊಳ್ಳಬೇಕೆಂದು ತಿಳಿಸಿದರು.
ಬುಕ್ಕಾಂಬುದಿ ಕಾರ್ಪೋರೇಶನ್ ಬ್ಯಾಂಕ್ನ ಕ್ಷೇತ್ರಾಧಿಕಾರಿ ಸುರೇಶ್ ಅಧ್ಯಕ್ಷತೆ ವಹಿಸಿ ಮಾತನಾಡಿ, ರೈತರು ಬ್ಯಾಂಕ್ನಿಂದ ಪಡೆಯುವ ಸಾಮಾನ್ಯ ಸಾಲಗಳಲ್ಲದೆ, ಇತರ ಸವಲತ್ತುಗಳಾದ ಸೌರ ವಿದ್ಯುತ್ಗೂ ಸಾಲ ಪಡೆದು ವಿದ್ಯುತ್ ಸಮಸ್ಯೆ ಕಡಿಮೆ ಮಾಡಿಕೊಳ್ಳಬಹುದು ಎಂದು ತಿಳಿಸಿದರು.
ರೈತಕೂಟಗಳ ಅಧ್ಯಕ್ಷರಾದ ಬಿ.ಓ.ಮಹೇಂದ್ರ, ಕುಮಾರಪ್ಪ, ಗಂಗಾಧರಪ್ಪ, ರಾಜಪ್ಪ, ತಾ.ಪಂ. ಸದಸ್ಯೆ ಶಾಂತ ಗುರುಮೂರ್ತಿ, ಗ್ರಾ.ಪಂ. ಅಧ್ಯಕ್ಷೆ ಸೂಪಿಯಾ, ಡಿ.ವಿ. ಗಂಗಾಧರಪ್ಪ, ಮಲ್ಲಿಕಾರ್ಜುನ್, ವಿನಯ್ ಸೇರಿದಂತೆ ಹಲವರು ಈ ಸಂದರ್ಭದಲ್ಲಿ ಸಮಾರಂಭದಲ್ಲಿ ಉಪಸ್ಥಿತರಿದ್ದರು.