ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಖಾಸಗಿ ಶಾಲೆ ವ್ಯಾಮೋಹ ಸಲ್ಲ: ಬಿಇಒ

Lingaraj Badiger
Updated On : 11 Mar 2014, 11:12 am

ಕ.ಪ್ರ.ವಾರ್ತೆ, ಬೀರೂರು, ಮಾ.10
ಪಟ್ಟಣದ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಲಾಗಿದ್ದ ವಿಜ್ಞಾನ ಆವಿಷ್ಕಾರಗಳ ಮಾಹಿತಿ ಹಾಗೂ ಮಕ್ಕಳಿಂದ ಕ್ರಿಯಾತ್ಮಕವಾಗಿ ರೂಪುಗೊಂಡ ವಿಜ್ಞಾನ ವಿಷಯಗಳನ್ನೊಳಗೊಂಡ ವಸ್ತು ಪ್ರದರ್ಶನ ಮಕ್ಕಳ ಹಾಗೂ ಪೋಷಕರ ಮನ ಸೆಳೆಯಿತು.
ಶಿಕ್ಷಣಾಧಿಕಾರಿ ಮೋಹನ್‌ಕುಮಾರ್ ವಸ್ತು ಪ್ರದರ್ಶನ ವೀಕ್ಷಿಸಿ ಮಾತನಾಡಿ, ಸ್ಪರ್ಧಾತ್ಮಕ ಜಗತ್ತಿನ ಮಕ್ಕಳಿಗೆ ಅನುಕೂಲವಾಗುವಂತೆ ಸರಳ ವಸ್ತುಗಳಲ್ಲಿ ವಿಜ್ಞಾನ ಶಿಕ್ಷಣ ಪಡೆಯುವಂತಾಗಬೇಕು ಎಂದರು.
ಮಕ್ಕಳನ್ನು ಸೃಜನಾತ್ಮಕ ಕ್ರಿಯೆಗಳ ಮೂಲಕ ಅನುಪಯುಕ್ತ ವಸ್ತುಬಳಸಿ ಉಪಯುಕ್ತವಾದ ವಿಜ್ಞಾನ ಮಾದರಿ ತಯಾರಿಸುವ ಮೂಲಕ ಶಿಕ್ಷಣದಲ್ಲಿ ತೊಡಗಿಸಿಕೊಳ್ಳುವಂತೆ ಪ್ರೇರೇಪಿಸುವಲ್ಲಿ ಮುಖ್ಯ ಶಿಕ್ಷಕ ಹಾಗೂ ಶಿಕ್ಷಕರಿಗೆ ಇರುವ ಕಾಳಜಿ ಪ್ರಶಂಸಿಸಿದ ಅವರು, ಜಗತ್ತಿನ ಪ್ರತಿಯೊಂದು ವಿಸ್ಮಯಗಳ ಹಿಂದೆ ಒಂದೊಂದು ವಿಜ್ಞಾನದ ಪ್ರಯೋಗಗಳಿವೆ ಎಂದರು.
ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣಕ್ಕಾಗಿ ಸಕಲ ಸವಲತ್ತು ನೀಡುತ್ತಿದ್ದು, ಪೋಷಕರು ಖಾಸಗಿ ಶಾಲೆಗಳ ವ್ಯಾಮೋಹ ತೊರೆದು ಇಂತಹ ಶಾಲೆಗಳಲ್ಲಿ ಶಿಕ್ಷಣ ಪಡೆದು ಉನ್ನತ ಹುದ್ದೆ ಹೊಂದಬಹುದು. ಈ ರೀತಿಯ ವಿಜ್ಞಾನ ಪ್ರದರ್ಶನಗಳು ಇತರೆ ಶಾಲೆಗಳಿಗೂ ಮಾದರಿಯಾಲಿ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಶಾಲೆಯ ಮುಖ್ಯ ಶಿಕ್ಷಕ ಜಯಣ್ಣ, ರಾಷ್ಟ್ರಿಯ ವಿಜ್ಞಾನ ದಿನದ ಅಂಗವಾಗಿ ಶಾಲೆಯಲ್ಲಿ ಸರಳ ವಸ್ತುಗಳಿಂದ ಸುಮಾರು 40ಕ್ಕೂ ಹೆಚ್ಚು ವಿಜ್ಞಾನ ಮಾದರಿಗಳ ಪ್ರದರ್ಶನ ಏರ್ಪಡಿಸಲಾಗಿದೆ. ನಮ್ಮ ಶಾಲೆಯಲ್ಲಿ ವ್ಯಾಸಂಗ ಮಾಡಿ ಇಂದು ನಾಸಾದಲ್ಲಿ ವಿಜ್ಞಾನಿಯಾಗಿರುವ ನಮ್ಮ ಡಾ. ಗಜಾನನ ಮತ್ತು ಡಾ. ದೀಲಿಪ್ ಅವರು ನಮ್ಮ ಶಾಲೆಗೆ ಹೆಚ್ಚು ಸಹಕರಿಸಿ ಶಾಲಾ ಮಕ್ಕಳು ಗರಿಷ್ಠ ಪ್ರಗತಿಯತ್ತ ಸಾಗಲು ಕಾರಣಕರ್ತರಾಗಿದ್ದಾರೆ ಎಂದು ಸ್ಮರಿಸಿದರು.
ಕ್ಷೇತ್ರ ಸಂಪನ್ಮೂಲಾಧಿಕಾರಿ ಪ್ರಕಾಶ್, ಅಕ್ಷರ ದಾಸೋಹ ಸಹಾಯಕ ನಿರ್ದೇಶಕರಾದ ಸುರೇಂದ್ರನಾಥ್, ಲೋಕೇಶಪ್ಪ, ಸತೀಶ್ ಹಾಜರಿದ್ದರು. ವಿಜ್ಞಾನ ವಸ್ತು ಪ್ರದರ್ಶದಲ್ಲಿ ಉತ್ತಮ ಸಾಧನೆ ತೋರಿದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ನೀಡಿ ಅಭಿನಂದಿಸಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement