ಚುನಾವಣೆಗೆ ಸಕಲ ಸಿದ್ಧತೆ
ಚಿಕ್ಕಮಗಳೂರು: ಲೋಕಸಭಾ ಚುನಾವಣೆಯ ಅಧಿಸೂಚನೆ ಹೊರ ಬೀಳುತ್ತಿದ್ದಂತೆ ಜಿಲ್ಲಾಡಳಿತ ಚುನಾವಣಾ ಸಿದ್ಧತಾ ಪೂರ್ವ ತಯಾರಿಯಲ್ಲಿ ಪೂರ್ಣ ಪ್ರಮಾಣದಲ್ಲಿ ತೊಡಗಿದೆ.
ರಜೆ ದಿನಗಳಲ್ಲೂ ಜಿಲ್ಲಾಧಿಕಾರಿ ಶೇಖರಪ್ಪ ಅವರು ಉಪ ವಿಭಾಗಾಧಿಕಾರಿಗಳ ಹಾಗೂ ತಹಸೀಲ್ದಾರ್ ಸೇರಿದಂತೆ ಚುನಾವಣಾಧಿಕಾರಿಗಳ ಸಭೆ ನಡೆಸುತ್ತಿದ್ದಾರೆ. ಈವರೆಗೆ ನಾಲ್ಕು ಭಾರಿ ಅಧಿಕಾರಿಗಳ ಸಭೆ ನಡೆಸಲಾಗಿದೆ.
ಮತದಾರರ ಪಟ್ಟಿಯಲ್ಲಿ ಹೆಸರು ಇರುವ ಬಗ್ಗೆ ಖಾತ್ರಿ ಪಡಿಸಿಕೊಳ್ಳಲು ಬೂತ್‌ಗಳಲ್ಲಿ ಪರಿಶೀಲನಾ ವ್ಯವಸ್ಥೆ ಮಾಡಲಾಗಿತ್ತು. ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಸಿರುವ ಜಿಲ್ಲಾಧಿಕಾರಿಯವರು ಸೋಮವಾರ ತಮ್ಮ ಕಚೇರಿಯ ಸಿಬ್ಬಂದಿ ಸಭೆ ನಡೆಸಿದರು.
ಗಮನಹರಿಸಿ: ಇದೇ ಸಂದರ್ಭದಲ್ಲಿ ಮಾತನಾಡಿದ ಅವರು, ಮತದಾನದ ದಿನಾಂಕ ಸಮೀಪಿಸುತ್ತಿದೆ. ಇದಕ್ಕೆ ಬೇಕಾದ ಸಿದ್ಧತೆಯನ್ನು ಜರೂರಾಗಿ ಮಾಡಿಕೊಳ್ಳಬೇಕಾಗಿರುವುದರಿಂದ ಸಿಬ್ಬಂದಿ ಕಚೇರಿಯ ಇತರೆ ಕೆಲಸಗಳಿಗಿಂತ ಚುನಾವಣಾ ಕೆಲಸಗಳಿಗೆ ಹೆಚ್ಚಿನ ಗಮನ ಹರಿಸಬೇಕು.
ಸಾರ್ವಜನಿಕರು ಕಚೇರಿಗೆ ಬಂದು ಚುನಾವಣೆಗೆ ಸಂಬಂಧಿಸಿದ ಮಾಹಿತಿ ಕೇಳಿದರೆ ತಕ್ಷಣಕ್ಕೆ ಸ್ಪಂದಿಸಬೇಕು ಎಂದು ಹೇಳಿದರು.
ಮತದಾರರ ಪಟ್ಟಿಯ ಪರಿಶೀಲನೆ, ಬ್ಯಾಲೆಟ್ ಯೂನಿಟ್, ಕಂಟ್ರೋಲ್ ಯೂನಿಟ್ ಪರಿಶೀಲಿಸಬೇಕು. ಮತದಾನ ದಿನದಂದು ಯಾವುದೇ ರೀತಿಯಲ್ಲಿ ತಾಂತ್ರಿಕ ದೋಷ, ಅಥವಾ ಗೊಂದಲಕ್ಕೆ ಅವಕಾಶವಾಗದಂತೆ ಸಿಬ್ಬಂದಿ ಕೆಲಸ ಮಾಡಬೇಕು ಎಂದು ಸೂಚನೆ ನೀಡಿದರು.
ಪರಿಶೀಲನೆ: ಚಿಕ್ಕಮಗಳೂರು ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನದಂದು 1340 ಕಂಟ್ರೋಲ್ ಯೂನಿಟ್, 1710 ಬ್ಯಾಲೆಟ್ ಯೂನಿಟ್ ಬೇಕಾಗಿದ್ದು, ಈಗಾಗಲೇ ಕೇಂದ್ರ ಚುನಾವಣಾ ಆಯೋಗ ಭಾರತ್ ಎಲೆಕ್ಟ್ರಾನಿಕ್ ಲಿಮಿಟೆಡ್ ಸಂಸ್ಥೆಯಿಂದ ಮತ ಯಂತ್ರ ಸರಬರಾಜು ಮಾಡುತ್ತಿದೆ. ಚಿಕ್ಕಮಗಳೂರು ನಗರದ ಬೂತ್‌ಗಳಿಗೆ ಕಳುಹಿಸಬೇಕಾಗಿರುವ ಮತಯಂತ್ರಗಳನ್ನು ನಗರಸಭೆ ಕಚೇರಿಯಲ್ಲಿ ಅಧಿಕಾರಿಗಳು ಸೋಮವಾರ ಪರಿಶೀಲಿಸಿದರು.