ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಸಾಮಾಜಿಕ ಪ್ರಗತಿಗೆ ಮಹಿಳೆ ಶ್ರಮಿಸಲಿ

Lingaraj Badiger
Updated On : 11 Mar 2014, 11:11 am

ಕ.ಪ್ರ.ವಾರ್ತೆ, ಬೀರೂರು, ಮಾ.10
ಸಂವೇದನಾಶೀಲತೆಯ ಮಹಿಳೆಯ ಮನಸ್ಸಿನ ಭಾವನೆಗಳನ್ನು ಪುರುಷ ಸಮಾಜದ ಕೆಲ ವಿಕೃತ ಮನಸ್ಸುಗಳು ದುರುಪಯೋಗಪಡಿಸಿಕೊಂಡು ಮಹಿಳೆಯನ್ನು ಶೋಷಣೆಗೊಳಗಾಗುವಂತೆ ಮಾಡುತ್ತಿವೆ ಎಂದು ಈಶ್ವರೀಯ ವಿದ್ಯಾಲಯದ ಹೊಸದುರ್ಗ ಶಾಖೆಯ ಸಂಚಾಲಕಿ ಪವಿತ್ರ ಹೇಳಿದ್ದಾರೆ.
ಇಲ್ಲಿನ ಈಶ್ವರೀಯ ವಿದ್ಯಾನಿಲಯದ ವತಿಯಿಂದ ಸಂಸ್ಥೆಯ ಆವರಣದಲ್ಲಿ ನಡೆದ 78ನೇ ಶಿವಜಯಂತಿ, ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ಮಹಿಳೆ ಹಾಗೂ ಮನಸ್ಸು ಕುರಿತು ಉಪನ್ಯಾಸ ನೀಡಿದ ಅವರು, ಇಂದು ಮಹಿಳೆಯರು ಪುರುಷರಷ್ಟೇ ಸರಿಸಮಾನ ರೀತಿಯಲ್ಲಿ ಸಮಾಜದಲ್ಲಿ ಎಲ್ಲಾ ಕ್ಷೇತ್ರದಲ್ಲಿ ತನ್ನ ಸಾಮರ್ಥ್ಯ ಪ್ರದರ್ಶಿಸುತ್ತಿದ್ದಾರೆ ಎಂದರು.
ಶಿವಜಯಂತಿಯ ಮಹತ್ವ ಹಾಗೂ ಉಪವಾಸ ಕುರಿತು ಮಾತನಾಡಿದ ಈಶ್ವರೀಯ ವಿದ್ಯಾಲಯದ ಸಂಚಾಲಕಿ ಬ್ರಹ್ಮಕುಮಾರಿ ಪದ್ಮ ಅವರು, ಉಪವಾಸವೆಂದರೆ ಆಹಾರ ತೆಗೆದುಕೊಳ್ಳದೆ ದೇಹವನ್ನು ದಂಡಿಸುವುದಲ್ಲ. ಭಗವಂತನ ಸ್ಮರಣೆಯಲ್ಲಿ ಸತ್ ಚಿಂತನೆಗೆ ಮನಸ್ಸನ್ನು ತೊಡಗಿಸಿಕೊಳ್ಳಲು ಈ ದೇಹವನ್ನು ದೇವರ ಸಮೀಪದ ಚಿಂತನೆಗೆ ಬಳಸಿಕೊಳ್ಳುವುದಾಗಿದೆ. ಮನಸ್ಸು ಬುದ್ಧಿಯಿಂದ ಪರಮಾತ್ಮನ ಸಮೀಪವಿರುವುದು ಉಪಾಸನೆ ಉಪವಾಸ ಎಂದರು.
ಸತ್ ಸಮಾಜ: ಮಹಿಳೆಯರು ಜ್ಞಾನ ದಾಸೋಹಕ್ಕೆ ತಮ್ಮ ಮನಸ್ಸನ್ನು ಹೆಚ್ಚು ಬಳಸಿಕೊಂಡು ಸತ್ ಸಮಾಜ ನಿರ್ಮಾಣದ ಕಾಳಜಿ ವಹಿಸಬೇಕೆಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅಕ್ಕಮಹಾದೇವಿ ಮಹಿಳಾ ಸಮಾಜದ ಅಧ್ಯಕ್ಷೆ ಪತ್ರೆ ಶೈಲಜಾ ಸದಾ ಶಿವನ್, ಆದರ್ಶ ಸಮಾಜ ನಿರ್ಮಾಣದಲ್ಲಿ ಮಹಿಳೆಯ ಪಾತ್ರ ಬಹುಮುಖ್ಯವಾಗಿದ್ದು, ಈ ಪ್ರಜ್ಞೆ ಹಾಗೂ ಚೈತನ್ಯದ ಮೂಲಕ ಉತ್ತಮ ಹೆಜ್ಜೆಯಿಟ್ಟು ಮಹಿಳೆ ಅನುಕರಣೇಯಳಾಗಬೇಕೆಂದರು.
ಅಂತರಂಗ- ಬಹಿರಂಗ ಶುದ್ಧಿಯಿಂದ ಕಾರ್ಯನಿರ್ವಹಿಸಿದಾಗ ಕುಟುಂಬದ ಗೌರವ ಹಾಗೂ ಸಮಾಜದ ಗೌರವ ಹೆಚ್ಚಿಸಲು ಸಾಧ್ಯ ಎಂದು ಹೇಳಿದರು.
ಅಬಲೆ ಪಟ್ಟ: ಸಮಾಜ ಸೇವಕ ಹೇಮಂತ್‌ಕುಮಾರ್ ಮಾತನಾಡಿ, ಮಹಿಳೆಯರು ಸಂಘಟಿತರಾದರೆ ಏನನ್ನಾದರೂ ಸಾಧಿಸಲು ಸಾಧ್ಯ, ಇಂದು ಎಲ್ಲಾ ಕ್ಷೇತ್ರದಲ್ಲಿ ಮೀಸಲಾತಿ ಮೂಲಕ ತನ್ನ ಸಾಮಥ್ಯವನ್ನು ಪ್ರದರ್ಶಿಸುತ್ತಿರುವ ಮಹಿಳೆಗೆ ಅಬಲೆ ಪಟ್ಟ ತೊಲಗಲು ಇನ್ನಷ್ಟು ಅವಕಾಶಗಳು ದೊರಕಬೇಕಿದೆ ಎಂಬುದನ್ನು ನೆನಪಿಸಿದರು.
ಪುರಸಭಾ ಸದಸ್ಯ ಈಶ್ವರಪ್ಪ ಮಾತನಾಡಿದರು. ಸಂಘದ ಲೀಲಾ ಸೋಮಶೇಖರ್, ಪುಷ್ಪ ಪ್ರಸನ್ನ ಅಕ್ಕಮಹಾದೇವಿ ಮಹಿಳಾ ಸಮಾಜದ ಸದಸ್ಯೆಯರಿಂದ ವಚನ ಗಾಯನ, ಸೀತಾರಾಮ ಮಹಿಳಾ ಮಂಡಳಿಯಿಂದ ಮಂತ್ರಪಠಣ, ಲಲಿತ ಸುಧಾ ಶಾಲಾ ಮಕ್ಕಳಿಂದ ನೃತ್ಯ ಕಾರ್ಯಕ್ರಮ ನಡೆಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement