ಆಲ್ದೂರಿನಲ್ಲಿ ನಿಷೇಧಾಜ್ಞೆ ಜಾರಿ
ಕ.ಪ್ರ.ವಾರ್ತೆ ಚಿಕ್ಕಮಗಳೂರು ಮಾ. 11
ಆಲ್ದೂರಿನ ವಿವಾದಿತ ಪ್ರದೇಶದಲ್ಲಿ ನಿರ್ಮಾಣ ಮಾಡಲಾಗಿದ್ದ ಧ್ವಜಕಟ್ಟೆಯನ್ನು ಸೋಮವಾರ ರಾತ್ರಿ ತೆರವುಗೊಳಿಸಿ, ಇಲ್ಲಿ ಮುಂಜಾಗ್ರತೆಯಾಗಿ 48 ಗಂಟೆಗಳ ಕಾಲ ಜಿಲ್ಲಾಡಳಿತ ನಿಷೇಧಾಜ್ಞೆ ಜಾರಿಗೊಳಿಸಿದೆ.
ಧ್ವಜಕಟ್ಟೆ ತೆರವುಗೊಳಿಸಿರುವುದನ್ನು ಖಂಡಿಸಿ ಆಲ್ದೂರು, ಚಿಕ್ಕಮಗಳೂರು ತಾಲೂಕಿನ ಮಾಗಡಿ ಗ್ರಾಮದ ಬಳಿ ಮಂಗಳವಾರ ಹಿಂದುಪರ ಸಂಘಟನೆಗಳ ಕಾರ್ಯಕರ್ತರು ಕಲ್ಲು ತೂರಾಟ ನಡೆಸಿದ್ದಾರೆ. ಈ ಸಂಬಂಧ ಓರ್ವ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.
ಆಲ್ದೂರಿನ ಮುಖ್ಯ ರಸ್ತೆಯಲ್ಲಿರುವ ಅಂಬೇಡ್ಕರ್ ವೃತ್ತದಲ್ಲಿ ಧ್ವಜಕಟ್ಟೆ ನಿರ್ಮಾಣ ಮಾಡಲಾಗಿದ್ದು, ಈ ವಿಚಾರದಲ್ಲಿ ಕೆಲವು ವರ್ಷಗಳಿಂದ ಆಗಾಗ ಬಿಗಿವಿನ ಪರಿಸ್ಥಿತಿ ನಿರ್ಮಾಣಗೊಳ್ಳುತ್ತಿದೆ. ಇಲ್ಲಿರುವ ಧ್ವಜಕಟ್ಟೆ ತೆರವುಗೊಳಿಸಬೇಕೆಂದು ಕೆಲವು ಸಂಘಟನೆಗಳು ಆಗ್ರಹಿಸಿದ್ದರೆ, ಹಿಂದು ಸಂಘಟನೆಗಳು ಧ್ವಜಕಟ್ಟೆ ತೆರವುಗೊಳಿಸಬಾರದೆಂದು ಆಗಾಗ ಜಿಲ್ಲಾಡಳಿತವನ್ನು ಎಚ್ಚರಿಸುವ ಕೆಲಸ ಮಾಡುತ್ತಲೇ ಬಂದಿದ್ದವು.
ಸಮೀಪದಲ್ಲೇ ಮಸೀದಿ ಇರುವುದರಿಂದ ಮುಂದೊಂದು ದಿನ ಯಾವುದೇ ಅನಾಹುತ ಸಂಭವಿಸಬಹುದೆಂದು ಜಿಲ್ಲಾಡಳಿತ ರಾತ್ರೋರಾತ್ರಿ ಇಲ್ಲಿರುವ ಧ್ವಜಕಟ್ಟೆಯನ್ನು ಸೋಮವಾರ ರಾತ್ರಿ ತೆರವುಗೊಳಿಸಿತು.
ಈ ವಿಷಯ ತಿಳಿಯುತ್ತಿದ್ದಂತೆ ಆಲ್ದೂರಿನಲ್ಲಿ ಪರಿಸ್ಥಿತಿ ಬಿಗುವಿನಿಂದ ಕೂಡಿತ್ತು. ಕೆಲವು ಅಂಗಡಿ ಮುಂಗಟ್ಟುಗಳು ಮುಚ್ಚಿದ್ದವು. ಆಲ್ದೂರು ಸಮೀಪದಲ್ಲಿರುವ ಬನ್ನೂರು ಗ್ರಾಮದ ಬಳಿ ಆಗುಂಬೆಯಿಂದ ಚಿಕ್ಕಮಗಳೂರಿಗೆ ಬರುತ್ತಿದ್ದ ಕೆಎಸ್ಸಾರ್ಟಿಸಿ ಬಸ್ಸಿಗೆ ಕಲ್ಲು ತೂರಾಟ ಮಾಡಿದ್ದಾರೆ.
ಚಿಕ್ಕಮಗಳೂರು ತಾಲೂಕಿನ ಮಾಗಡಿ ಗ್ರಾಮದ ಬಳಿ ಯುವಕರ ಗುಂಪೊಂದು ಕೆಎಸ್ಸಾರ್ಟಿಸಿ ಬಸ್ಸಿಗೆ ಕಲ್ಲು ತೂರಾಟ ಮಾಡಿದ್ದಾರೆ. ಈ ಸಂಬಂಧ ಸುಪ್ರಿತ್ ಎಂಬ ಯುವಕನನ್ನು ಚಿಕ್ಕಮಗಳೂರು ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ. ಬಸ್ಸಿಗೆ ಕಲ್ಲು ತೂರಾಟ ಮಾಡಿರುವ ಸಂಬಂಧ ಎರಡು ಪ್ರಕರಣಗಳು ದಾಖಲಾಗಿವೆ.
ಜಿಲ್ಲಾ ರಕ್ಷಣಾಧಿಕಾರಿ ಆರ್. ಚೇತನ್, ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿ ಸಂಜೀವ್ ಎಸ್. ಪಾಟೀಲ್ ಅವರು ಆಲ್ದೂರಿಗೆ ಭೇಟಿ ನೀಡಿದ್ದರು. ಮುಂಜಾಗ್ರತಾ ಕ್ರಮವಾಗಿ ಆಲ್ದೂರಿನಲ್ಲಿ ಡಿಎಆರ್ ತುಕಡಿ ಹಾಗೂ ಹೆಚ್ಚಿನ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.