ಕೃಷಿ ನಿರ್ಲಕ್ಷಿಸಿದರೆ ಆಹಾರದ ಕೊರತೆ
ಚಿಕ್ಕಮಗಳೂರು: ಮಹಿಳೆಯರು ರಾಜಕೀಯ ಕ್ಷೇತ್ರದ ಜತೆಗೆ ಇತರೆ ಎಲ್ಲಾ ಕ್ಷೇತ್ರಗಳಲ್ಲೂ ಸಾಧನೆ ಮಾಡಿ ಸಮಾಜಕ್ಕೆ ಉತ್ತಮ ಮಾರ್ಗದರ್ಶನ ನೀಡುವಲ್ಲಿ ಯಶಸ್ವಿಯಾಗಿದ್ದಾಳೆ ಎಂದು ರಾಯಚೂರು ಕೃಷಿ ವಿಶ್ವವಿದ್ಯಾನಿಲಯದ ಆಡಳಿತ ಮಂಡಳಿಯ ಸದಸ್ಯೆ ಎಂ.ಎ. ಆಶಾ ಶೇಷಾದ್ರಿ ಹೇಳಿದರು.
ಜಿಲ್ಲಾ ಒಕ್ಕಲಿಗ ಮಹಿಳಾ ಸಂಘ ನಗರದ ಒಕ್ಕಲಿಗರ ಸಮುದಾಯ ಭವನದಲ್ಲಿ ಮಂಗಳವಾರ ಏರ್ಪಡಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ದೇಶದಲ್ಲಿ ಇಂದಿರಾಗಾಂಧಿ, ಸೋನಿಯಾಗಾಂಧಿ, ಜಯಲಲಿತಾ, ಸುಷ್ಮಾ ಸ್ವರಾಜ್ ಅತ್ಯಂತ ಪ್ರಭಾವಶಾಲಿಗಳಾಗಿ ರಾಜಕೀಯ ಕ್ಷೇತ್ರದಲ್ಲಿ ಮಹಿಳೆಯರ ಶಕ್ತಿ ಏನೆಂಬುದನ್ನು ಸಾಬೀತುಪಡಿಸಿದ್ದಾರೆ ಎಂದರು.
ಮಲೆನಾಡಿನ ಭಾಷೆ, ಸಂಸ್ಕೃತಿ ಜಗತ್ತಿಗೆ ಮಾದರಿಯಾಗಿದ್ದು, ಇದರ ಉಳಿವು ಮತ್ತು ಬೆಳವಣಿಗೆಗೆ ಮಹಿಳೆಯ ಪಾತ್ರ ಅಪಾರ. ಸಂಘ- ಸಂಸ್ಥೆಗಳ ಮೂಲಕ ಮಹಿಳೆಯರು ಒಗ್ಗಟ್ಟಾಗಿ ಪಾಲ್ಗೊಂಡಾಗ ಮಾನಸಿಕ ಮತ್ತು ದೈಹಿಕವಾಗಿ ಕ್ರಿಯಾಶೀಲರಾಗಿರಬಹುದು ಎಂದು ಹೇಳಿದರು.
ಆಹಾರದ ಕೊರತೆ: ಕೃಷಿ ಕ್ಷೇತ್ರದಲ್ಲಿ ಸಿಗುವಷ್ಟು ನೆಮ್ಮದಿ ಬೇರೆ ಯಾವುದೇ ಕ್ಷೇತ್ರದಲ್ಲಿ ಸಿಗುವುದಿಲ್ಲ. ಆಧುನಿಕತೆಯ ಭರಾಟೆಯಲ್ಲಿ ಫ್ಯಾಷನ್ ಸಂಸ್ಕೃತಿ ಅಳವಡಿಸಿಕೊಂಡು ಕೃಷಿ ಕ್ಷೇತ್ರವನ್ನು ನಿರ್ಲಕ್ಷಿಸಿದರೆ ಮುಂದಿನ ದಿನಗಳಲ್ಲಿ ಆಹಾರದ ಕೊರತೆ ಉಂಟಾಗಬಹುದು. ಸ್ತ್ರೀಶಕ್ತಿ ಮತ್ತು ಸ್ವಸಹಾಯಗಳಿಂದ ಗ್ರಾಮೀಣ ಮಹಿಳೆಯರು ಸಹ ಆರ್ಥಿಕವಾಗಿ ಸದೃಢರಾಗಿದ್ದಾರೆ ಎಂದರು.
ಭರತನಾಟ್ಯ ಪ್ರವೀಣೆ ಜ್ಯೋತಿ ಪ್ರಕಾಶ್ ಮಾಡ್ಲ ಮಾತನಾಡಿ, ಭರತನಾಟ್ಯ ನಿರಂತರ ಅಭ್ಯಾಸದಿಂದ ಗುರಿ ಮುಟ್ಟಲು ಸಾಧ್ಯ. ಪೋಷಕರು ಮಕ್ಕಳಿಗೆ ನಾಟ್ಯ, ಸಾಹಿತ್ಯ, ಕ್ರೀಡೆ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡುವಂತೆ ಪ್ರೇರೇಪಿಸಬೇಕು ಎಂದು ಕರೆ ನೀಡಿದರು.
ಜಿಲ್ಲಾ ಒಕ್ಕಲಿಗರ ಮಹಿಳಾ ಸಂಘದ ಅಧ್ಯಕ್ಷೆ ಬಿ.ಎಲ್. ರಾಜಶ್ರೀ ಮಾತನಾಡಿ, ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಜನಾಂಗದ ಮಹಿಳಾ ಸಾಧಕಿಯರನ್ನು ಗುರುತಿಸಿ ಗೌರವಿಸುವುದರ ಜತೆಗೆ ಮಹಿಳಾ ಸಂಘ- ಸಂಸ್ಥೆಗಳು ಅತ್ಯುತ್ತಮವಾಗಿ ಮುಂದುವರಿಯಲು ಕಾರ್ಯಕ್ರಮ ರೂಪಿಸಲಾಗುತ್ತಿದೆ ಎಂದರು.
ನಮ್ಮ ಸಂಘವು ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಇತರೆ ಸಂಘಗಳಿಗೆ ಮಾದರಿಯಾಗಿದೆ. ಸಂಘದ ವತಿಯಿಂದ ಏಪ್ರಿಲ್ ತಿಂಗಳಿನಲ್ಲಿ ದುಬೈ, ಶಾರ್ಜಾ, ಅಬುದಾಬಿಗಳಿಗೆ ಪ್ರವಾಸ ಹಮ್ಮಿಕೊಳ್ಳಲಾಗಿದ್ದು, ಆಸಕ್ತರು ಬರಬಹುದು ಎಂದು ಹೇಳಿದರು.
ಮಾಜಿ ಅಧ್ಯಕ್ಷರಾದ ಗಾಯಿತ್ರಿ ಗೋವಿಂದಸ್ವಾಮಿ, ಲೀಲಾ ನಾಗರಾಜ್, ರಾಗಿಣಿ ರಾಮೇಗೌಡ, ಉಪಾಧ್ಯಕ್ಷೆ ಕನಕ ವೀರೇಶ್, ಸದಸ್ಯರಾದ ಪೂರ್ಣಿಮಾ ದಿನೇಶ್, ಕಲ್ಪನಾ ಪ್ರದೀಪ್, ಸ್ವಪ್ನ ಮಹೇಂದ್ರ, ಉಮಾ ಸತ್ಯ, ಜಮುನಾ ಲೋಕಪ್ಪಗೌಡ, ದೇವಕಿ ಚಂದ್ರಶೇಖರ್, ಕಮಲಾ ರಘು, ಪ್ರವೀಣ ವಸಂತ್, ಹೇಮಾ ಜಗದೀಶ್ ಉಪಸ್ಥಿತರಿದ್ದರು.
ಕಾರ್ಯಕ್ರಮದ ನಂತರ ವಿವಿಧ ಕ್ರೀಡೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಿದರು. ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಿತು. ಸಂಘದ ಕಾರ್ಯದರ್ಶಿ ಆರತಿ ನಾರಾಯಣ್ ಸ್ವಾಗತಿಸಿ, ಉಪಾಧ್ಯಕ್ಷರಾದ ಪೂರ್ಣಿಮಾ ಉಮೇಶ್ ವಂದಿಸಿದರು.