ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಕೃಷಿ ಭೂಮಿ ತೆರವುಗೊಳಿಸದಂತೆ ಪಿಐಎಲ್

Rashmi Kasaragodu
Updated On : 12 Mar 2014, 1:40 am

.ಪ್ರ.ವಾರ್ತೆ    ಚಿಕ್ಕಮಗಳೂರು    ಮಾ. 11
ಕೃಷಿ ಸಾಗುವಳಿ ಒತ್ತುವರಿ ಭೂಮಿಯನ್ನು ಖುಲ್ಲಾ ಮಾಡಿಸಲು ಯಾವುದೇ ಆದೇಶ ಹೊರಡಿಸಬಾರದೆಂದು ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ ಎಂದು ಕೆಪಿಸಿಸಿ ಕಿಸಾನ್ ಕಾಂಗ್ರೆಸ್‌ನ ಉಪಾಧ್ಯಕ್ಷ ಸಚಿನ್ ಮೀಗಾ ತಿಳಿಸಿದ್ದಾರೆ.
ಅನಧಿಕೃತ ಸಾಗುವಳಿ ವಿಚಾರದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಮುಖ್ಯ ನ್ಯಾಯಮೂರ್ತಿಗಳಾದ ವಗೇಲ ಹಾಗೂ ನಾಗರತ್ನ ಅವರ ವಿಭಾಗೀಯ ಪೀಠದ ಮುಂದೆ ಮಾ. 14ರಂದು ಬರಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ಮಂಗಳವಾರ ತಿಳಿಸಿದರು.
ಕ್ರಿಯಾಯೋಜನೆ: ಈ ಹಿಂದೆ ಸಮಾಜ ಪರಿವರ್ತನ ಸಮಾಜದ ಮುಖ್ಯಸ್ಥ ಎಸ್.ಆರ್. ಹಿರೇಮಠ ಅವರು ಉಚ್ಚ ನ್ಯಾಯಾಲಯದಲ್ಲಿ ಒತ್ತುವರಿಗೆ ಸಂಬಂಧಿಸಿದಂತೆ ಬಾಲಸುಬ್ರಮಣ್ಯ ಅವರ ವರದಿಯನ್ನು ಯಥಾವತ್ ಅನುಷ್ಠಾನ ಮಾಡಲು ಅರ್ಜಿ ಸಲ್ಲಿಸಿದ್ದಾರೆ. ಇದರ ಪರಿಣಾಮ ನಗರ ವ್ಯಾಪ್ತಿಗೆ ಸೀಮಿತವಾಗಿದ್ದ ಒತ್ತುವರಿ ಪ್ರಕ್ರಿಯೆ ಕ್ರಿಯಾಯೋಜನೆ, ಎಲ್ಲಾ ಜಿಲ್ಲೆಯ ಗ್ರಾಮಾಂತರ ಪ್ರದೇಶದ ಒತ್ತುವರಿದಾರರನ್ನು ತೆರವುಗೊಳಿಸಲು ಕ್ರಿಯಾಯೋಜನೆ ರೂಪಿಸಲಾಗಿದೆ. ಇದರ ಹಿನ್ನೆಲೆಯಲ್ಲಿ ಸಣ್ಣ ಒತ್ತುವರಿದಾರರಿಗೆ ಕ್ರಿಯಾಯೋಜನೆ ಪ್ರಕಾರ ತೆರವುಗೊಳಿಸಲು ನೋಟಿಸ್ ಜಾರಿ ಮಾಡಲಾಗಿದೆ.
ಸರ್ವೆ ನಡೆದಿಲ್ಲ: ಕೃಷಿಕರ ಜಮೀನನ್ನು ತೆರವು ಮಾಡಿಸುವುದರಿಂದ ಲಕ್ಷಾಂತರ ಕುಟುಂಬಗಳು ನಿರ್ಗತಿಕರಾಗಿ ಬೀದಿಗೆ ಬೀಳಲಿದ್ದು, ಇವರೆಲ್ಲರ ಪುನರ್‌ವಸತಿಗೆ ಸರ್ಕಾರ ಸಾವಿರಾರು ಕೋಟಿ ರು. ಭರಿಸಬೇಕಾಗುತ್ತದೆ. ಒತ್ತುವರಿ ಜಮೀನನ್ನು ಗುರುತಿಸುವಾಗ ಸ್ಪಷ್ಟವಾದ ಸ್ಥಳ ತನಿಖೆ ಮತ್ತು ಸರ್ವೆ ಕಾರ್ಯ ನಡೆದಿಲ್ಲ.
ಕಂದಾಯ ಇಲಾಖೆಗೆ ಸೇರಿದ ಸರ್ಕಾರಿ ಭೂಮಿಯಲ್ಲಿ ಈ ಹಿಂದಿನ 40- 50 ವರ್ಷಗಳ ಅನಧಿಕೃತ ಸಾಗುವಳಿ ಗಮನಿಸದೆ ಇತ್ತೀಚೆಗೆ ಅರಣ್ಯ ಇಲಾಖೆಗೆ ವರ್ಗಾಯಿಸಲಾಗಿದೆ. ಹೀಗಾಗಿ ಅರಣ್ಯ ಮತ್ತು ಕಂದಾಯ  ಇಲಾಖೆಗಳ ಗಡಿ ಪ್ರತ್ಯೇಕತೆಯ ವಿಂಗಡನೆಯಾಗದೆ ಸಾಕಷ್ಟು ಗೊಂದಲ ಉಂಟಾಗಿದೆ ಎಂದರು.
ಅಮಾನವೀಯ: ನಗರ ಪ್ರದೇಶಗಳಲ್ಲಿ ವ್ಯಾಪಾರಿ ಉದ್ದೇಶದ ದುರಾಸೆಗಾಗಿ ಬೆಲೆ ಬಾಳುವ ಸರ್ಕಾರಿ ಭೂಮಿಯನ್ನು ಕೆಲವೇ ಸ್ಥಾಪಿತ ಹಿತಾಸಕ್ತಿಗಳು ಒತ್ತುವರಿ ಮಾಡಿ ಸರ್ಕಾರದ ಖಜಾನೆ ಸೇರಬೇಕಾದ ಸಂಪತ್ತು ಸ್ವಂತಕ್ಕೆ  ಉಪಯೋಗಿಸಿಕೊಳ್ಳುತ್ತಿದ್ದಾರೆ.
ಆದರೆ, ನಗರ ಪ್ರದೇಶದ ವಾಣಿಜ್ಯ ವ್ಯಾಪಾರಿ ಉದ್ದೇಶಿತ ರಿಯಲ್ ಎಸ್ಟೇಟ್ ಉದ್ಯಮಿಗಳೊಂದಿಗೆ ರೈತರನ್ನು ಸಹಾ ಭೂಗಳ್ಳರಂತೆ ಬಿಂಬಿಸಿ ಒಂದೇ ಮಾನದಂಡ ಅನುಸರಿಸಿ ತೆರವುಗೊಳಿಸುವುದು ಅಮಾನವೀಯ ಎಂದರು.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಪ್ರಸಾದ್ ಅಮೀನ್, ಹಿರೇಮಗಳೂರು ರಾಮಚಂದ್ರ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement