ಮೆಸ್ಕಾಂ ಎಂಜಿನಿಯರ್ 'ಲೋಕಾ' ಬಲೆಗೆ
ಕಡೂರು: ವಿದ್ಯುತ್ ಗುತ್ತಿಗೆದಾರನೊಬ್ಬನಿಂದ ಲಂಚ ಸ್ವೀಕರಿಸುತ್ತಿದ್ದ ವೇಳೆಯಲ್ಲಿ ಕಡೂರು ಮೆಸ್ಕಾಂ ವಿಭಾಗೀಯ ಕಚೇರಿಯ ಎಕ್ಸಿಕ್ಯೂಟೀವ್ ಎಂಜಿನಿಯರ್ ಲೋಕಾಯಕ್ತ ಬಲೆಗೆ ಬಿದ್ದಿರುವ ಘಟನೆ ಮಂಗಳವಾರ ನಡೆದಿದೆ.
ಕಡೂರು ಮೆಸ್ಕಾಂ ವಿಭಾಗೀಯ ಕಚೇರಿಯ ಎಕ್ಸಿಕ್ಯೂಟೀವ್ ಎಂಜಿನಿಯರ್ ಕೆ.ಟಿ.ಕರಿಸಿದ್ದಯ್ಯ ಲೋಕಾಯುಕ್ತ ಬೀಸಿದ ಬಲೆಗೆ ಬಿದ್ದವರಾಗಿದ್ದಾರೆ. ಕಡೂರು ತಾಲೂಕಿನ ಚಿಕ್ಕನಾಯಕನಹಳ್ಳಿಯ ಬಸವಣ್ಣ ಎಂಬವರಿಗೆ ಸೇರಿದ ಜಮೀನಿನಲ್ಲಿ 25 ಕೆ.ವಿ.ಯ. ಟ್ರಾನ್ಸ್ಫಾರ್ಮರ್ ಕೆಲಸ ಮಾಡುತ್ತಿದೆ. ಬಸವಣ್ಣ ಅವರಿಗೆ ಹೆಚ್ಚುವರಿಯಾಗಿ ಇನ್ನೂ 25 ಕೆ.ವಿ. ಟ್ರಾನ್ಸ್ಫಾರ್ಮರ್ ಬೇಕಾಗಿದ್ದ ಹಿನ್ನೆಲೆ ಅದಕ್ಕೆ ಬೇಕಾದ ಪ್ರಸ್ತಾವನೆ ಸಲ್ಲಿಸುವ ಸಮಯದಲ್ಲಿ ವಿದ್ಯುತ್ ಗುತ್ತಿಗೆದಾರ ಫಯಾಜ್ ಅವರಿಂದ 2000 ಲಂಚ ಸ್ವೀಕರಿಸುವ ವೇಳೆಯಲ್ಲಿ ಹಾಸನ ಲೋಕಾಯುಕ್ತ ಡಿವೈಎಸ್ಪಿ ಲೋಕಾಯುಕ್ತ ಡಿವೈಎಸ್ಪಿ ಶೇಕ್ ಹುಸೇನ್ ಅವರು ತಮ್ಮ ಸಿಬ್ಬಂದಿಯೊಡನೆ ದಾಳಿ ನಡೆಸಿದಾಗ ಲೋಕಾಯುಕ್ತರು ಒಡ್ಡಿದ ಬಲೆಗೆ ಸಿಕ್ಕಿಬಿದ್ದಿದ್ದಾರೆ.
ಲೋಕಾಯಕ್ತರಿಗೆ ಫಯಾಜ್ ಅವರು ಮೊದಲೇ ಮಾಹಿತಿ ನೀಡಿದ್ದು, ಮಂಗಳವಾರ ಬೆಳಗ್ಗೆ ಕಡೂರಿನ ಅಂಡರ್ಬ್ರಿಡ್ಜ್ ರಸ್ತೆಯಲ್ಲಿರುವ ಮೆಸ್ಕಾಂ ವಿಭಾಗೀಯ ಕಚೇರಿ ಮೇಲೆ ತಮ್ಮ ಸಿಬ್ಬಂದಿಯೊಡನೆ ದಾಳಿ ನಡೆಸಿ ಇ.ಇ. ಕರಿಸಿದ್ದಯ್ಯ ಅವರನ್ನು ಬಂಧಿಸಿದ್ದಾರೆ.
ಪ್ರಕರಣ ದಾಖಲಿಸಿರುವ ಲೋಕಾಯುಕ್ತರು ಈ ಬಗೆ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ದಾಳಿಯ ಕಾರ್ಯಾಚರಣೆಯಲ್ಲಿ ಲೋಕಾಯುಕ್ತ ವೃತ್ತ ನಿರೀಕ್ಷಕ ಜಯಮೂರ್ತಿ, ಸಂದೀಪ್ ಮತ್ತಿತರರು ಭಾಗವಹಿಸಿದ್ದರು.