'ಕಾಫಿ ಬೆಳೆಗಾರರ ಸಮಸ್ಯೆಗೆ ಕೇಂದ್ರ ಸ್ಪಂದನೆ'
ಚಿಕ್ಕಮಗಳೂರು: ಕೇಂದ್ರದ ಯುಪಿಎ ಸರ್ಕಾರ ಕಾಫಿ ಬೆಳೆಗಾರರ ಸಮಸ್ಯೆಗಳಿಗೆ ಹಲವು ರೀತಿಯಲ್ಲಿ ಸ್ಪಂದಿಸಿದೆ ಎಂದು ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಎ.ಎನ್. ಮಹೇಶ್ ಹೇಳಿದ್ದಾರೆ.
ಕಾಫಿ ಮಂಡಳಿಯಲ್ಲಿ 2005ನೇ ಸಾಲಿನಲ್ಲಿ ಕಾಫಿ ಬೆಳೆಗಾರರು ಪಡೆದುಕೊಂಡಿದ್ದ 65 ಕೋಟಿ ಸಾಲವನ್ನು ಕೇಂದ್ರ ಸರ್ಕಾರ ಮನ್ನಾ ಮಾಡಿದೆ. 2006ರಲ್ಲಿ ಸಾಲದ ಮೇಲಿನ ಬಡ್ಡಿ ಮನ್ನಾ ಮಾಡಲಾಗಿದೆ. ಇದರಿಂದ ಒಟ್ಟಾರೆ 185 ಕೋಟಿ ಮನ್ನಾ ಆಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಗುರುವಾರ ತಿಳಿಸಿದರು.
ಅನುಸೂಚಿತ ಬುಡಕಟ್ಟು ಜನಾಂಗದವರು ಹಾಗೂ ಪಾರಂಪರಿಕ ಅರಣ್ಯ ಪ್ರದೇಶಗಳಲ್ಲಿ ವಾಸಿಸಿರುವ ಜನರಿಗೆ ಅನುಕೂಲವಾಗಲು ಕಾಯ್ದೆಯನ್ನು ಜಾರಿಗೆ ತರಲಾಗಿದೆ. ಈ ಹಿಂದಿನ ಬಿಜೆಪಿ ಸರ್ಕಾರ ಈ ಕಾಯ್ದೆಯನ್ನು ಸಮರ್ಪಕವಾಗಿ ಜಾರಿಗೆ ತರುವಲ್ಲಿ ವಿಫಲವಾಗಿತ್ತು. ಈಗಿನ ರಾಜ್ಯ ಸರ್ಕಾರ ಪಾರಂಪರಿಕ ಅರಣ್ಯವಾಸಿಗಳಿಗೆ ಹಕ್ಕುಪತ್ರ ನೀಡುವ ಸಂಬಂಧ ಸಮಿತಿ ರಚಿಸಿ ಕೂಡಲೇ ಕ್ರಮ ಕೈಗೊಳ್ಳುವಂತೆ ಜಿಲ್ಲಾಡಳಿತಕ್ಕೆ ಆದೇಶಿಸಿದೆ ಎಂದರು.
ಕಾಫಿ ಹಾಗೂ ಅಡಕೆ ಬೆಳೆಗಾರರ ಪರವಾಗಿ ವಿವಿಧ ಸಂಘಟನೆಗಳೊಂದಿಗೆ ಸಂಸದ ಕೆ. ಜಯಪ್ರಕಾಶ್ ಹೆಗ್ಡೆ ಅವರು ಸಂಬಂಧಪಟ್ಟ ಸಚಿವರ, ಪ್ರಧಾನಮಂತ್ರಿ ಹಾಗೂ ಮುಖ್ಯಮಂತ್ರಿಯವರ ಬಳಿ ಸುಮಾರು 12 ಬಾರಿ ನಿಯೋಗದ ಮೂಲಕ ಭೇಟಿ ಮಾಡುವ ಮೂಲಕ ಸ್ಪಂದಿಸಿದ್ದಾರೆ ಎಂದು ಹೇಳಿದರು.