ಧರ್ಮಪಾಲನೆಯಿಂದ ಆತ್ಮಶುದ್ಧಿ
ಕ.ಪ್ರ.ವಾರ್ತೆ ಬಾಳೆಹೊನ್ನೂರು ಮಾ. 13
ಜೀವನದ ಶ್ರೇಯಸ್ಸಿಗೆ ಧರ್ಮ ಪರಿಪಾಲನೆಯ ಅಗತ್ಯವಿದೆ. ಅರಿವುಳ್ಳ ಮಾನವ ಜೀವನ ಸಾರ್ಥಕಗೊಳ್ಳಲು ಗುರುಕಾರುಣ್ಯ ಅವಶ್ಯಕ. ಧರ್ಮಪಾಲನೆಯಿಂದ ಆತ್ಮಶುದ್ಧಿ, ಧೈರ್ಯ ಮತ್ತು ಸಂಕಷ್ಟ ಎದುರಿಸಬಲ್ಲ ಆತ್ಮಬಲ ಪ್ರಾಪ್ತವಾಗುತ್ತದೆಂದು ರಂಭಾಪುರಿ ಜಗದ್ಗುರು ಪ್ರಸನ್ನ ರೇಣುಕ ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದ್ದಾರೆ.
ಇಲ್ಲಿನ ರಂಭಾಪುರಿ ಪೀಠದಲ್ಲಿ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಹಾಗೂ ಕ್ಷೇತ್ರನಾಥ ವೀರಭದ್ರಸ್ವಾಮಿ ಮಹಾ ರಥೋತ್ಸವದ ಅಂಗವಾಗಿ ಬುಧವಾರ ನಡೆದ ಧರ್ಮ ಸಂಗ್ರಾಮ ಸಮಾವೇಶದ ಸಾನ್ನಿಧ್ಯ ವಹಿಸಿ ಶ್ರೀಗಳು ಆಶೀರ್ವಚನ ನೀಡಿದರು.
ಧರ್ಮ ಸಂರಕ್ಷಣೆಯಿಂದ ಸಂಸ್ಕೃತಿ ಸಂವರ್ಧನೆಗೊಳ್ಳುತ್ತದೆ. ಆತ್ಮವಿಶ್ವಾಸ ನೂರ್ಮಡಿಗೊಳಿಸುವುದರಲ್ಲಿ ಧರ್ಮಾಚರಣೆ ಮುಖ್ಯವಾಗಿದೆ. ಸುಖ- ದುಃಖದಲ್ಲಿ ಒಂದಾಗಿದ್ದು, ಸಹಕರಿಸುವಾತನೇ ನಿಜವಾದ ಧರ್ಮಾತ್ಮ. ಒಂದು ಉತ್ತಮ ಸಂಸ್ಕಾರದಿಂದ ಜೀವನ ಉತ್ಕರ್ಷತೆಗೊಳ್ಳುತ್ತದೆ. ಜಗದ್ಗುರು ರೇಣುಕಾಚಾರ್ಯರು ವೀರಶೈವ ಧರ್ಮದ ಸಂವಿಧಾನದಲ್ಲಿ ಅರ್ಥಪೂರ್ಣವಾಗಿ ನಿರೂಪಿಸಿದ್ದಾರೆ ಎಂದರು.
ಅರ್ಥಪೂರ್ಣ ಬದುಕು: ಸಂಸ್ಕಾರ, ಒಂದು ಚಿಂತನ ವಿಷಯವಾಗಿ ಎಸಳೂರಿನ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಜೀವನದ ಸರ್ವಾಂಗೀಣ ಪ್ರಗತಿಗೆ ಧರ್ಮ ಸಂಸ್ಕಾರ ಅತ್ಯಂತ ಅವಶ್ಯಕ. ಸಂಸ್ಕಾರವಿಲ್ಲದ ಮನುಷ್ಯ ಜೀವನ ಪಶುವಿಗೆ ಸಮಾನ. ಅರ್ಥಪೂರ್ಣ ಬದುಕಿಗೆ ಧರ್ಮಸಂಸ್ಕಾರ ಎಲ್ಲರಿಗೂ ಬೇಕಾಗಿದೆ ಎಂದು ಹೇಳಿದರು.
ಸುಳ್ಯದ ಶಿವಸಿದ್ಧರಾಮೇಶ್ವರ ಶಿವಾಚಾರ್ಯರು, ಶಿರಕೋಳ ಗುರುಸಿದ್ಧೇಶ್ವರ ಶಿವಾಚಾರ್ಯರು, ಸಾಗರದ ಸೋಮೇಶ್ವರ ಶಿವಾಚಾರ್ಯರು, ರಾಜೇಶ್ವರದ ಘನಲಿಂಗಿ ರುದ್ರಮುನಿ ಶಿವಾಚಾರ್ಯರು, ಚಿಮ್ಮಾಯಿ ವಿಜಯ ಮಹಂತೇಶ ಶಿವಾಚಾರ್ಯರು, ಮಳಲಿಯ ನಾಗಭೂಷಣ ಶಿವಾಚಾರ್ಯರು, ಸಂಗೊಳ್ಳಿ ಗುರುಲಿಂಗ ಶಿವಾಚಾರ್ಯರು, ಜಕ್ಕಲಿ ವಿಶ್ವಾರಾಧ್ಯ ಶಿವಾಚಾರ್ಯರು, ಮೇಹಕರ- ತಡೋಳದ ರಾಜೇಶ್ವರ ಶಿವಾಚಾರ್ಯರು, ದೇವಾಪುರ-ಅಚಲೇರಿ ಶಿವಮೂರ್ತಿ ಶಿವಾಚಾರ್ಯರು, ಬೇರುಗಂಡಿಮಠದ ರೇಣುಕ ಮಹಂತ ಶಿವಾಚಾರ್ಯರು, ಶಿವಣಿ ಹಾವಗಿಲಿಂಗ ಶಿವಾಚಾರ್ಯರು, ಆಲಮಟ್ಟಿ ಚಂದ್ರಶೇಖರ ಶಿವಾಚಾರ್ಯರು ಹಾಗೂ ವಿವಿಧ ಮಠಾಧೀಶರು ಪಾಲ್ಗೊಂಡಿದ್ದರು.
ಸಮಾರಂಭವನ್ನು ಎಡೆಯೂರಿನ ರೇಣುಕ ಶಿವಾಚಾರ್ಯ ಸ್ವಾಮೀಜಿ ಉದ್ಘಾಟಿಸಿ ಮಾತನಾಡಿ, ಸಾಹಿತ್ಯ, ಸಂಸ್ಕೃತಿ ಬದುಕಿನ ಎರಡು ಕಣ್ಣು. ಉತ್ತಮ ಆದರ್ಶ ಸಂಸ್ಕಾರ ಬದುಕಿನ ಎಲ್ಲ ಶ್ರೇಯಸ್ಸಿನ ಕಾರಣ. ಜಾತಿ ವಿಘಟನೆಗೆ ಅವಕಾಶ ಕೊಡದೆ ಸಾತ್ವಿಕ ಶಕ್ತಿ ಬೆಳೆಸುವ ಕಾರ್ಯವಾಗಬೇಕಾಗಿದೆ ಎಂದರು.
ಹಲವಾರು ವೈದಿಕ ವಿದ್ವಾಂಸರಿಗೆ ಗೌರವ ಗುರುರಕ್ಷೆ ನೀಡಿ ರಂಭಾಪುರೀ ಜಗದ್ಗುರುಗಳು ಆಶೀರ್ವದಿಸಿದರು. ಶಿವಶಂಕರ ಶಾಸ್ತ್ರಿಗಳಿಂದ ಸಂಗೀತ ಜರುಗಿತು. ಮೈಸೂರು ಗಣೇಶ ಶಾಸ್ತ್ರಿಗಳು ಸ್ವಾಗತಿಸಿದರು. ಶಿಕ್ಷಕ ವೀರೇಶ ಕುಲಕರ್ಣಿ ನಿರೂಪಿಸಿದರು.
ಬೆಳಗ್ಗೆ ಅಗ್ರೋದಕ ತರುವುದರ ಮೂಲಕ ಧಾರ್ಮಿಕ ವಿಧಾನಗಳಿಗೆ ರಂಭಾಪುರಿ ಜಗದ್ಗುರುಗಳು ಚಾಲನೆ ನೀಡಿದರು.