ಮಲ್ಲಿಕಾರ್ಜುನಯ್ಯ ನಿಧನಕ್ಕೆ ಸಂತಾಪ
ಕ.ಪ್ರ.ವಾರ್ತೆ ಚಿಕ್ಕಮಗಳೂರು ಮಾ. 13
ಮಾಜಿ ಸಂಸದ ಎಸ್. ಮಲ್ಲಿಕಾರ್ಜುನಯ್ಯ ಅಗಲಿಕೆಗೆ ಬಾಳೆಹೊನ್ನೂರು ರಂಭಾಪುರಿ ಜಗದ್ಗುರು ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರು ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.
ಸರಳ ಸಜ್ಜನಿಕೆಯ ವ್ಯಕ್ತಿತ್ವ ಹೊಂದಿದ್ದ ಎಸ್. ಮಲ್ಲಿಕಾರ್ಜುನಯ್ಯ ಅವರು ವಿಧಾನ ಪರಿಷತ್, ಲೋಕಸಭೆಯಲ್ಲಿ ವಿವಿಧ ಸ್ಥಾನಗಳಲ್ಲಿ ಕಾರ್ಯನಿರ್ವಹಿಸಿದ್ದು, ಅವರ ಕ್ರಿಯಾಶೀಲ ಬದುಕಿಗೆ ಸಾಕ್ಷಿಯಾಗಿದೆ. ಅವರ ಅಗಲಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ಅವರ ಕುಟುಂಬ ವರ್ಗದವರಿಗೆ ಹಾಗೂ ಅವರ ಅಭಿಮಾನಿಗಳಿಗೆ ಪರಮಾತ್ಮನು ನೀಡಲಿ ಹಾಗೂ ಅವರ ಆತ್ಮಕ್ಕೆ ಚಿರಶಾಂತಿಯನ್ನೀಯಲಿ ಎಂದು ರಂಭಾಪುರೀ ಜಗದ್ಗುರು ಸಂತಾಪ ವ್ಯಕ್ತಪಡಿಸಿದ್ದಾರೆ.
ಈ ನಾಡಿನ ಅತ್ಯಂತ ಹಿರಿಯ ರಾಜಕಾರಣಿಗಳಾಗಿದ್ದ ಎಸ್. ಮಲ್ಲಿಕಾರ್ಜುನಯ್ಯ ಅವರ ನಿಧನದಿಂದ ಈ ರಾಜ್ಯ ಹಾಗೂ ದೇಶ ಒಬ್ಬ ಸರಳ, ಸಜ್ಜನ ರಾಜಕಾರಣಿಯನ್ನು ಕಳೆದುಕೊಂಡಂತಾಗಿದೆ ಎಂದು ಶಾಸಕ ಸಿ.ಟಿ. ರವಿ ಸಂತಾಪ ಸೂಚಿಸಿದ್ದಾರೆ.
ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ಪಕ್ಷದ ನಗರಾಧ್ಯಕ್ಷ ವರಸಿದ್ದಿ ವೇಣುಗೋಪಾಲ್ ಅವರ ಅಧ್ಯಕ್ಷತೆ ಗುರುವಾರ ನಡೆದ ಸಭೆಯಲ್ಲಿ ಎಸ್. ಮಲ್ಲಿಕಾರ್ಜುನಯ್ಯ ಅವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. ಸಭೆಯಲ್ಲಿ ಪಕ್ಷದ ಮುಖಂಡರು ಮಾತನಾಡಿ, ಎಸ್. ಮಲ್ಲಿಕಾರ್ಜುನಯ್ಯ ಅವರ ಸೇವೆ ಸ್ಮರಿಸಿ, ಸಂತಾಪ ಸೂಚಿಸಿದರು.
ಪರಮಶಿವಯ್ಯ ನಿಧನಕ್ಕೆ ಸಂತಾಪ
ತರೀಕೆರೆ: ಹಿರಿಯ ನೀರಾವರಿ ತಜ್ಞ ಡಾ. ಪರಮಶಿವಯ್ಯ ಅವರ ನಿಧನದಿಂದ ರಾಜ್ಯದ ನೀರಾವರಿ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಕೆಪಿಸಿಸಿ ಸದಸ್ಯ, ಹಿರಿಯ ರಾಜಕಾರಿಣಿ ಟಿ.ವಿ. ಶಿವಶಂಕರಪ್ಪ ತಿಳಿಸಿದ್ದಾರೆ. ಮಾಜಿ ಶಾಸಕ ಬಿ.ಆರ್. ನೀಲಕಂಠಪ್ಪ, ಎಸ್.ಎಂ. ನಾಗರಾಜ್, ಟಿ.ಎಚ್. ಶಿವಶಂಕರಪ್ಪ, ಎನ್. ರಾಜು ಅವರು ಪರಮಶಿವಯ್ಯ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.