ಹಂತ ಹಂತವಾಗಿ ಅನುದಾನ ಬಿಡುಗಡೆ
ಕಡೂರು: ಬರದ ಬೇಗೆಯಲ್ಲಿರುವ ಕಡೂರು ತಾಲೂಕಿನ ಸಮಸ್ಯೆ ಅರಿತು 70 ಲಕ್ಷ ರು. ಬಿಡುಗಡೆ ಮಾಡಲಾಗಿದೆ. ಆದರೆ ತಾವು ಉದ್ದೇಶಪೂರ್ವಕವಾಗಿ ಅನುದಾನ ಬಿಡುಗಡೆ ಮಾಡಿಲ್ಲ ಎಂಬ ಆರೋಪ ಸರಿಯಲ್ಲ ಎಂದು ಜಿಲ್ಲಾಧಿಕಾರಿ ಶೇಖರಪ್ಪ ಹೇಳಿದರು.
ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕಡೂರು ಶಾಸಕರಾದ ವೈ.ಎಸ್.ವಿ.ದತ್ತರವರು 3.25 ಕೋಟಿ ರು.ಗಳ ಕ್ರಿಯಾ ಯೋಜೆನೆ ರೂಪಿಸಿ ಸರ್ಕಾರಕ್ಕೆ ಕಳುಹಿಸಿದ್ದರೂ ಅನುದಾನ ಬಿಡುಗಡೆ ಮಾಡುತ್ತಿಲ್ಲ ಎಂಬ ಆರೋಪಕ್ಕೆ ಉತ್ತರಿಸಿದ ಜಿಲ್ಲಾಧಿಕಾರಿಗಳು ತಾವು ಆ ರೀತಿ ಮಾಡಿಲ್ಲ ಎಂದರು.
ತಾಲೂಕಿನ ಸಮಸ್ಯೆ ಅರಿತು ನಾನು ಖುದ್ದಾಗಿ ತಾಲೂಕಿಗೆ ಭೇಟಿ ನೀಡಿ ಸಮಸ್ಯೆ ಅರಿತು 3.25 ಕೋಟಿರೂನ ಕ್ರೀಯಾಶೀಲ ಯೋಜನೆಯ ಕಾಮಗಾರಿಯ ಪ್ರಗತಿ ನೋಡಿ ಹಂತ ಹಂತವಾಗಿ ಅನುದಾನ ಬಿಡುಗಡೆಗೆ ಕ್ರಮ ಕೈಗೊಳ್ಳಲಾಗುತ್ತಿದೆಯೇ ವಿನಃ ಬಿಡುಗಡೆ ಮಾಡಬಾರದೆಂಬ ಉದ್ದೇಶವಿಲ್ಲ ಎಂದು ಸ್ಪಷ್ಟಪಡಿಸಿದರು.
ಪಟ್ಟಣ ಸೇರಿದಂತೆ ಇಡೀ ಜಿಲ್ಲೆಯಲ್ಲೇ ಎಲ್ಲೂ ಪಾರ್ಕುಗಳಿಲ್ಲದಿರುವುದನ್ನು ಗಮನಿಸಿದ್ದೇನೆ. ಕಡೂರು ಪಟ್ಟಣದಲ್ಲೂ ಕೂಡ ಇಲ್ಲದಿರುವುದನ್ನು ಮನಗಂಡಿರುವುದರಿಂದ ವರ್ಷಕ್ಕೆ ಒಂದು ಪಾರ್ಕನ್ನು ಸಂಪೂರ್ಣ ಅಭಿವೃದ್ದಿಗೊಳಿಸುವಂತೆ ಸೂಚಿಸಲಾಗಿದೆ. ಅಲ್ಲದೆ ಅಕ್ರಮವಾಗಿ ಪಾರ್ಕಿನ ಜಾಗ ಮತ್ತು ರಸ್ತೆಗೆ ಖಾಸಗಿಯವರು ಹಾಕಿಕೊಂಡಿರುವ ಬೇಲಿಯನ್ನು ತೆರವುಗೊಳಿಸಿ ಕ್ರಮ ಕೈಗೊಳ್ಳುವಂತೆ ಮುಖ್ಯಾಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದರು.