ಹಗರಣ ಸರಮಾಲೆ ಯುಪಿಎ ಸಾಧನೆ: ರವಿ
ಚಿಕ್ಕಮಗಳೂರು: ಬೆಲೆ ಏರಿಕೆ, ಹಗರಣಗಳ ಸರಮಾಲೆ ಯುಪಿಎ ಸರ್ಕಾರದ ಸಾಧನೆ ಎಂದು ಶಾಸಕ ಸಿ.ಟಿ. ರವಿ ಆರೋಪಿಸಿದ್ದಾರೆ.
ಸಖರಾಯಪಟ್ಟಣದಲ್ಲಿ ಇತ್ತೀಚೆಗೆ ನಡೆದ ಸೋಮೇಶ್ವರ ಶಕ್ತಿ ಕೇಂದ್ರ ಹಾಗೂ ಗ್ರಾಮಾಂತರದ ಸಖರಾಯಪಟ್ಟಣ ಶಕ್ತಿ ಕೇಂದ್ರದ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಮಾತನಾಡಿ, ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಅಧಿಕಾರಕ್ಕೆ ಬಂದು 10 ವರ್ಷಗಳಾಗಿವೆ. ಸರ್ಕಾರದ ಜನವಿರೋಧಿ ನೀತಿ, ಭ್ರಷ್ಟಾಚಾರ, ಭಯೋತ್ಪಾದನೆ, ನಿರುದ್ಯೋಗದಂತಹ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿದರು.
ಕೇಂದ್ರ ಸರ್ಕಾರದ ತಪ್ಪು ಆರ್ಥಿಕ ನೀತಿಯಿಂದ ಡಾಲರ್ ಎದುರು ರುಪಾಯಿ ಮೌಲ್ಯ ಕುಸಿಯಲು ಕಾರಣವಾಗಿದೆ. ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಮತ್ತು ಸಿಮೆಎಣ್ಣೆಯಂತಹ ಪದಾರ್ಥಗಳ ಬೆಲೆ ದಿನೇ ದಿನೇ ಏರಿಕೆಯಾಗುತ್ತಿರುವುದು ಅನಿಲ ಕಂಪನಿಗಳ ಮೇಲೆ ಸರ್ಕಾರದ ಹಿಡಿತ ಇಲ್ಲದಿರುವುದಕ್ಕೆ ಸಾಕ್ಷಿಯಾಗಿದೆ ಎಂದರು.
ಎ ಯಿಂದ ಜೆಡ್ ವರೆಗೆ ಹಗರಣಗಳ ಸರಮಾಲೆ ಸಾಕ್ಷಿಯಾಗಿದೆ. ಚಾಪರ್‌ಗೇಟ್ ಹಗರಣ, ಕಲ್ಲಿದ್ದಲು ಹಗರಣ, ರಾಬರ್ಟ್ ವಾದ್ರಾ ಹಗರಣ, ಆದರ್ಶ ಹಗರಣ, ಕಾಮನ್‌ವೆಲ್ತ್ ಹಗರಣ, 2ಜಿ ಸ್ಪೆಕ್ಟ್ರಂ ಹಗರಣ, ವೋಟಿಗಾಗಿ ನೋಟು, ಆಹಾರಕ್ಕಾಗಿ ತೈಲ ಹಗರಣ, ಕೋಲ್ ಗೇಟ್ ಹಗರಣ ಹೀಗೆ ಹಗರಣಗಳ ಸರಮಾಲೆಯೇ ಯುಪಿಎ ಸರ್ಕಾರದ ಸಾಧನೆ ಎಂದು ಆರೋಪಿಸಿದರು.
ಲೋಕಸಭಾ ಚುನಾವಣಾ ಕ್ಷೇತ್ರ ಪ್ರಮುಖ್ ಕಲ್ಮರುಡಪ್ಪ, ನಗರಾಧ್ಯಕ್ಷ ವರಸಿದ್ದಿ ವೇಣುಗೋಪಾಲ್, ತಾಲೂಕು ಅಧ್ಯಕ್ಷ ಚಿಕ್ಕದೇವನೂರು ರವಿ, ಜಿಲ್ಲಾ ವಕ್ತಾರ ಎಚ್.ಡಿ. ತಮ್ಮಯ್ಯ, ಜಿಲ್ಲಾ ಕಾರ್ಯದರ್ಶಿ ಟಿ. ರಾಜಶೇಖರ್, ನಗರಸಭಾ ಸದಸ್ಯರಾದ ಸುಧೀರ್, ರಮೇಶ್, ಶ್ಯಾಮಲಾರಾವ್, ಸಾವಿತ್ರಿ ಮಂಜುನಾಥ್, ದೇವರಾಜ್ ಉಪಸ್ಥಿತರಿದ್ದರು. ರವೀಂದ್ರನಾಥ ಪ್ರಭು ನಿರೂಪಿಸಿ, ವಕ್ತಾರ ಪುಷ್ಪರಾಜ್ ಸ್ವಾಗತಿಸಿದರು.