ಹಳ್ಳಿಕಾರ್ ಒಕ್ಕಲಿಗರ ಕಡೆಗಣನೆ; ಆರೋಪ
ಮೂಡಿಗೆರೆ: ಒಕ್ಕಲಿಗ ಸಮುದಾಯದ ಉಪಪಂಗಡವಾಗಿರುವ ಹಳ್ಳಿಕಾರ್ ಒಕ್ಕಲಿಗರನ್ನು ವಿವಿಧ ಕ್ಷೇತ್ರಗಳಲ್ಲಿ ಕಡೆಗಣಿಸುತ್ತಿರುವ ಹಿನ್ನೆಲೆಯಲ್ಲಿ ಮೀಸಲಾತಿ ಕಲ್ಪಿಸಿಕೊಡುವಂತೆ ಹಳ್ಳಿಕಾರ್ ಒಕ್ಕಲಿಗರ ಸಂಘದ ರಾಜ್ಯ ಸಂಚಾಲಕಿ ಜಯಂತಿ ಒತ್ತಾಯಿಸಿದ್ದಾರೆ.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹಳ್ಳಿಕಾರ್ ಒಕ್ಕಲಿಗರು ವ್ಯವಸಾಯವನ್ನು ಮುಖ್ಯ ವೃತ್ತಿಯಾಗಿ ಮಾಡಿಕೊಂಡಿದ್ದರೂ, ಇದೀಗ ಕಾಲಕ್ಕೆ ತಕ್ಕಂತೆ ವಿವಿಧ ಕ್ಷೇತ್ರಗಳಲ್ಲಿ ದುಡಿಯುತ್ತಿದ್ದಾರೆ. ನಮ್ಮ ಜನಾಂಗ ಯಾವುದೇ ಪ್ರಬಲ ಜಾತಿಯೊಂದಿಗೆ ದ್ವೇಷ ಇಟ್ಟುಕೊಂಡಿಲ್ಲ. ಯಾರನ್ನೂ ದೂಷಿಸುತ್ತಿಲ್ಲ. ಆದರೆ ಹಳ್ಳೀಕಾರ್ ಒಕ್ಕಲಿಗರನ್ನು ಹಲವು ಕ್ಷೇತ್ರಗಳಲ್ಲಿ ಕಡೆಗಣಿಸುತ್ತಿದ್ದು, ಕೆಲವೆಡೆ ನಮ್ಮ ಜಾತಿಯ ಜನರನ್ನು ಕಡೆಗಣಿಸುವುದರಿಂದ ನೋವುಂಟಾಗಿದೆ ಎಂದು ತಿಳಿಸಿದರು.
ಹಿಂದುಳಿದ ಸಮುದಾಯ: ಸಂಘದ ಜಿಲ್ಲಾಧ್ಯಕ್ಷ ಯು.ಸಿ. ರಾಮಪ್ಪಗೌಡ ಮಾತನಾಡಿ, ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಸಂಘವನ್ನು ಸ್ಥಾಪಿಸಲಾಗಿದೆ. ತಾಲೂಕಿನಲ್ಲಿ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಮತ್ತು ರಾಜಕೀಯ ರಂಗದಲ್ಲಿ ನಮ್ಮ ಸಮುದಾಯ ಸಂಪೂರ್ಣವಾಗಿ ಹಿಂದುಳಿದಿದೆ ಎಂದರು.
ಪ್ರಬಲರ ನಡುವೆ ಯಾವುದೇ ರೀತಿಯ ಸೌಕರ್ಯವೂ ನಮ್ಮ ಜನಾಂಗದ ಜನರನ್ನು ತಲುಪುತ್ತಿಲ್ಲ. ನಮ್ಮ ಜನರನ್ನು ಸಮಾಜದ ಮುಖ್ಯವಾಹಿನಿಗೆ ತರಬೇಕು. ಹಳ್ಳಿಕಾರ್ ಒಕ್ಕಲಿಗ ಜಾತಿಯ ಜನರ ಹೆಸರು ಕೆಲವು ದಾಖಲೆಗಳಲ್ಲಿ ಬದಲಾಗಿರುವುದು ಸಮಸ್ಯೆ ತಂದಿದೆ ಎಂದು ಆತಂಕ ವ್ಯಕ್ತಪಡಿಸಿದರು. ಗೋಷ್ಠಿಯಲ್ಲಿ ತಾಲೂಕು ಅಧ್ಯಕ್ಷ ಎಂ.ಟಿ. ವೆಂಕಟೇಶ್, ವಿಜಯಕುಮಾರ್, ಚಂದ್ರಶೇಖರ್, ಕೆ.ಕೆ. ಮಂಜುನಾಥ್, ಸಂದೀಪ್ ಉಪಸ್ಥಿತರಿದ್ದರು.