ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

3 ಪೊಲೀಸ್ ತರಬೇತಿ ಕೇಂದ್ರಕ್ಕೆ ಮಂಜೂರು

Rashmi Kasaragodu
Updated On : 15 Mar 2014, 11:22 am

ಚಿಕ್ಕಮಗಳೂರು: ರಾಜ್ಯದ ಮೂರು ಕಡೆಗಳಲ್ಲಿ ಹೊಸದಾಗಿ ಪೊಲೀಸ್ ತರಬೇತಿ ಕೇಂದ್ರ ತೆರೆಯಲು ಸರ್ಕಾರದಿಂದ ಮಂಜೂರಾತಿ ದೊರೆತಿದೆ ಎಂದು ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ (ತರಬೇತಿ) ಸುಶಾಂತ್ ಮಹಾಪಾತ್ರ ಹೇಳಿದ್ದಾರೆ.
ಇಲ್ಲಿನ ಪೊಲೀಸ್ ಕವಾಯತು ಮೈದಾನದಲ್ಲಿ ಶುಕ್ರವಾರ ನಡೆದ ಪೊಲೀಸರ ನಿರ್ಗಮನ ಪಥಸಂಚಲನದಲ್ಲಿ ಭಾಗವಹಿಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹುಬ್ಬಳಿ- ಧಾರವಾಡ, ಹಾಸನ ಹಾಗೂ ಚಿಕ್ಕಮಗಳೂರು ಜಿಲ್ಲೆಯ ಕಡೂರಿನಲ್ಲಿ ಪೊಲೀಸ್ ತರಬೇತಿ ಕೇಂದ್ರ ತೆರೆಯಲಾಗುವುದು ಎಂದರು.
ಹಣ ಬಿಡುಗಡೆ: ತರಬೇತಿ ಕೇಂದ್ರ ತೆರೆಯಲು ಸರ್ಕಾರ 13ನೇ ಹಣಕಾಸು ಯೋಜನೆಯಡಿಯಲ್ಲಿ ಹಣ ಬಿಡುಗಡೆ ಮಾಡಿದೆ. ಕಡೂರು ಕೇಂದ್ರಕ್ಕೆ ಸುಮಾರು 3 ಕೋಟಿ ಖರ್ಚಾಗಲಿದೆ ಎಂದು ಹೇಳಿದರು.
ಮೈಸೂರಿನಲ್ಲಿ ಮಹಿಳಾ ಪೊಲೀಸ್ ತರಬೇತಿ ಕೇಂದ್ರ ಇದೆ. ಬೆಳಗಾವಿಯಲ್ಲಿ ಕೆಎಸ್‌ಆರ್‌ಪಿ ತರಬೇತಿ ಕೇಂದ್ರ ಇದೆ. ಗುಲ್ಬರ್ಗ, ಖಾನಾಪುರ, ಬೆಂಗಳೂರು ಗ್ರಾಮಾಂತರ, ಚನ್ನಪಟ್ಟಣದಲ್ಲಿ ತರಬೇತಿ ಕೇಂದ್ರಗಳಿವೆ ಎಂದ ಅವರು, ಪ್ರತಿವರ್ಷ ಸುಮಾರು 4500 ಮಂದಿ ಪೊಲೀಸರನ್ನು ಹೊಸದಾಗಿ ನೇಮಕ ಮಾಡಿಕೊಳ್ಳಲಾಗುತ್ತಿದೆ. ಅವರೆಲ್ಲರಿಗೂ ತರಬೇತಿ ನೀಡಲು ಹಾಲಿ ಇರುವ ಕೇಂದ್ರದಲ್ಲಿ ಸ್ಥಳಾವಕಾಶ ಇಲ್ಲ. ಅದುದರಿಂದ ಹೊಸ ತರಬೇತಿ ಕೇಂದ್ರಗಳ ಅವಶ್ಯಕತೆ ಇದೆ ಎಂದು ತಿಳಿಸಿದರು.
ಮೂಲ ಸೌಲಭ್ಯ: ಹಾಲಿ ರಾಜ್ಯದಲ್ಲಿರುವ ಚಿಕ್ಕ ಚಿಕ್ಕ ಪೊಲೀಸ್ ತರಬೇತಿ ಕೇಂದ್ರಗಳನ್ನು ಮೇಲ್ದರ್ಜೆಗೆ ಏರಿಸುವ ಜತೆಗೆ ಮೂಲ ಸೌಲಭ್ಯಗಳನ್ನು ಒದಗಿಸಿ, ಅಲ್ಲಿ ಇನ್ನಷ್ಟು ಸಿಬ್ಬಂದಿಗೆ ತರಬೇತಿಗೆ ಅವಕಾಶ ಕಲ್ಪಿಸಲಾಗುವುದು ಎಂದರು.
ಇತ್ತೀಚೆಗೆ ಪೊಲೀಸ್ ಇಲಾಖೆಗೆ ಉನ್ನತ ವ್ಯಾಸಂಗ ಪಡೆದಿರುವವರು ಬರುತ್ತಿದ್ದಾರೆ. ಅವರ ಸಲಹೆ ಮತ್ತು ಪ್ರತಿಭೆಗಳನ್ನು ಬಳಸಿಕೊಂಡು ಸಿಬ್ಬಂದಿ ಸಾಮರ್ಥ್ಯ ಹೆಚ್ಚಿಸಲಾಗುವುದು. ಈ ವೇಳೆಯಲ್ಲಿ ಅವರಿಗೆ ಇಲಾಖೆಯಿಂದ ಸೂಕ್ತ ಬಹುಮಾನ ನೀಡುವ ವ್ಯವಸ್ಥೆ ಜಾರಿಗೆ ಬಂದರೆ ಹೊಸದಾಗಿ ಇಲಾಖೆಗೆ ಸೇರುವ ಪೊಲೀಸರಿಗೆ ಹೆಚ್ಚಿನ ಪ್ರಯೋಜನವಾಗಲಿದೆ ಎಂದರು.
ಪೊಲೀಸರು ಜನಸ್ನೇಹಿಯಾಗಿದ್ದರೆ, ಇಲಾಖೆಯ ಬಗ್ಗೆ ಜನರಲ್ಲಿ ವಿಶ್ವಾಸ ಬರುತ್ತದೆ. ಆ ರೀತಿಯಲ್ಲಿ ನಡೆದುಕೊಳ್ಳಬೇಕೆಂದು ಮನವರಿಕೆ ಮಾಡಿಕೊಡಲಾಗುತ್ತಿದೆ ಎಂದು ಹೇಳಿದರು. ಇದೇ ವೇಳೆಯಲ್ಲಿ ಎಸ್ಪಿ ಆರ್. ಚೇತನ್, ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿ ಸಂಜೀವ್ ಎಸ್. ಪಾಟೀಲ್ ಉಪಸ್ಥಿತರಿದ್ದರು.



Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement