ಕ್ಷೇತ್ರದ ಸಮಸ್ಯೆ ನಿವಾರಿಸುವಲ್ಲಿ ಸಂಸದರು ವಿಫಲ
ಕ.ಪ್ರ.ವಾರ್ತೆ ಚಿಕ್ಕಮಗಳೂರು ಮಾ. 14
ಜಿಲ್ಲೆಯ ಜ್ವಲಂತ ಸಮಸ್ಯೆಗಳ ಪರಿಹಾರಕ್ಕೆ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಸಂಸದ ಕೆ. ಜಯಪ್ರಕಾಶ್ ಹೆಗ್ಡೆ ಅವರು ಉತ್ತರ ನೀಡಬೇಕು ಎಂದು ಮೂಡಿಗೆರೆ ಶಾಸಕ ಬಿ.ಬಿ. ನಿಂಗಯ್ಯ ಆಗ್ರಹಿಸಿದ್ದಾರೆ.
ಅಡಕೆ ಹಾಗೂ ಒತ್ತುವರಿ ಸಮಸ್ಯೆಯ ನಿವಾರಣೆಗೆ ಸಂಸದರು ಕೊಟ್ಟ ಭರವಸೆಗಳು ಈವರೆಗೆ ಜಾರಿಗೆ ಬಂದಿಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಆರೋಪಿಸಿದರು.
ಕಾರ್ಯರೂಪಕ್ಕೆ ಬಂದಿಲ್ಲ: ಹಳದಿ ಎಲೆ ರೋಗಪೀಡಿತ ಅಡಕೆ ಬೆಳೆಗಾರರಿಗೆ ಪರಿಹಾರ ನೀಡುವಂತೆ ಹಾಗೂ ಅವರ ಸಾಲ ಮನ್ನಾ ಮಾಡುವಂತೆ ಗೋರಕ್ ಸಿಂಗ್ ಸಮಿತಿ ನೀಡಿದ್ದ ವರದಿಯನ್ನು ಜಾರಿಗೆ ತರಲಾಗುವುದು ಎಂದು ಸಂಸದರು ಭರವಸೆ ನೀಡಿದ್ದರು.
ಕೇಂದ್ರದ ಜವಾಬ್ದಾರಿ ಸ್ಥಾನದಲ್ಲಿರುವ ಸಚಿವರು ಸಹ ಅಡಕೆ ಬೆಳೆಗಾರರ ಸಾಲ ಮನ್ನಾ ಮಾಡುವುದಾಗಿ ಹೇಳಿದ್ದರು. ಆದರೆ, ಈವರೆಗೆ ಕಾರ್ಯರೂಪಕ್ಕೆ ಬಂದಿಲ್ಲ ಎಂದರು.
ಜ್ವಲಂತ ಸಮಸ್ಯೆ: ಅಡಕೆ ಆರೋಗ್ಯಕ್ಕೆ ಹಾನಿಕಾರಕ ಎಂಬ ಪ್ರಮಾಣಪತ್ರವನ್ನು ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್‌ಗೆ ಸಲ್ಲಿಸಿದೆ. ಇದು, ಕೇಂದ್ರ ಸರ್ಕಾರ ಹುಟ್ಟು ಹಾಕಿರುವ ಜ್ವಲಂತ ಸಮಸ್ಯೆ. ಈ ಮೂಲಕ ಅಡಕೆ ಬೆಳೆಗಾರರಿಗೆ ಅನ್ಯಾಯ ಮಾಡಿದೆ. ಈ ಕುರಿತು ಸಂಸದರು ಜಿಲ್ಲೆಯ ಜನತೆಗೆ ಸ್ಪಷ್ಟ ಉತ್ತರ ನೀಡಬೇಕು ಎಂದು ಆಗ್ರಹಿಸಿದರು.
ಅರಣ್ಯ ಒತ್ತುವರಿ ತೆರವು ಜನರಲ್ಲಿ ಆತಂಕ ಮೂಡಿಸಿದೆ. ಈ ಬಗ್ಗೆ ರಾಜ್ಯ ಸರ್ಕಾರ ಈವರೆಗೆ ಸ್ಪಷ್ಟ ತೀರ್ಮಾನ ತೆಗೆದುಕೊಳ್ಳುವಲ್ಲಿ ವಿಫಲವಾಗಿದೆ. ಮಲೆನಾಡಿನ ಭಾಗದ ಜನರು ಭಯಭೀತರಾಗಿದ್ದಾರೆ. ಇದಕ್ಕೂ ಉತ್ತರ ನೀಡಬೇಕು ಎಂದು ತಿಳಿಸಿದರು.
ಬದಲಾವಣೆ ಬಯಸಿದ್ದಾರೆ: ಸಮಸ್ಯೆಯ ಸುಳಿಯಲ್ಲಿ ಸಿಲುಕಿರುವ ಜಿಲ್ಲೆಯ ಜನರು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬದಲಾವಣೆ ಬಯಸಿದ್ದಾರೆ. ಕೇಂದ್ರ ಸರ್ಕಾರದ ಭ್ರಷ್ಟವನ್ನು ಕಂಡಿರುವ ಜನರು ಬದಲಾವಣೆ ಬಯಸಿದ್ದಾರೆ. ಇನ್ನು ಈ ಹಿಂದೆ ರಾಜ್ಯದಲ್ಲಿ ಆಡಳಿತ ನಡೆಸಿದ್ದ ಬಿಜೆಪಿಯೂ ಜನರ ಸಮಸ್ಯೆಗಳಿಗೆ ಸ್ಪಂದಿಸಲು ವಿಫಲವಾಗಿದೆ. ಈ ವೈಫಲ್ಯತೆಯನ್ನು ಮತದಾರರ ಮುಂದೆ ಈ ಚುನಾವಣೆಯಲ್ಲಿ ಪ್ರಸ್ತಾಪ ಮಾಡಲಾಗುವುದು ಎಂದರು. ಜಿಲ್ಲೆಯಲ್ಲಿ ಐದು ಜೀವ ನದಿಗಳು ಹುಟ್ಟಿಕೊಂಡಿದ್ದರೂ ಈ ನದಿಗಳ ನೀರು ನಮ್ಮ ಜಿಲ್ಲೆಗೆ ಬಳಕೆಯಾಗುತ್ತಿಲ್ಲ. ಜಿಲ್ಲೆಯ ಅಭಿವೃದ್ಧಿಗೆ ಕಾಂಗ್ರೆಸ್ ಸರ್ಕಾರ ಒತ್ತು ನೀಡಿಲ್ಲ. ಇದನ್ನು ಸಹ ಚುನಾವಣೆಯಲ್ಲಿ ಪ್ರಶ್ನಿಸಲಾಗುವುದು. ಈ ಬಾರಿ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಗೆ ಅವಕಾಶ ನೀಡುವಂತೆ ಮತದಾರರಿಗೆ ಮನವಿ ಮಾಡಲಾಗುವುದು ಎಂದು ಹೇಳಿದರು.
ಸ್ವಾಗತ: ಆಲ್ದೂರಿನಲ್ಲಿ ಜಿಲ್ಲಾಡಳಿತ ಧ್ವಜಕಟ್ಟೆ ತೆರವುಗೊಳಿಸಿರುವುದನ್ನು ಸ್ವಾಗತಿಸಿದ ನಿಂಗಯ್ಯ, ಅಕ್ರಮವಾಗಿ ಕಟ್ಟಿದ್ದ ಧ್ವಜಕಟ್ಟೆಯನ್ನು ಜಿಲ್ಲಾಡಳಿತ ತೆರವುಗೊಳಿಸಿದೆ. ಇದು ತಪ್ಪೇನೂ ಅಲ್ಲ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಮಂಜಪ್ಪ, ಪ್ರಧಾನ ಕಾರ್ಯದರ್ಶಿ ಚಂದ್ರಪ್ಪ, ಮುಖಂಡ ಕೆ. ಭರತ್, ಪದ್ಮಾ ತಿಮ್ಮೇಗೌಡ, ಅಶೋಕ ಉಪಸ್ಥಿತರಿದ್ದರು.