ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಅಡಕೆ ಬೆಳೆಗಾರರ ಸಮಸ್ಯೆ ಇತ್ಯರ್ಥಕ್ಕೆ ಪ್ರಾಮಾಣಿಕ ಯತ್ನ

Lingaraj Badiger
Updated On : 16 Mar 2014, 12:10 pm

ಬಾಳೆಹೊನ್ನೂರು: ಕಳೆದ ಲೋಕಸಭಾ ಚುನಾವಣೆಗೆ ಮುನ್ನ ನೀಡಿದ ಭರವಸೆಯಂತೆ ಅಡಕೆ ಬೆಳೆಗಾರರ ಸಾಲ ಮನ್ನಾ ಸೇರಿದಂತೆ ವಿವಿಧ ಸಮಸ್ಯೆಗಳ ಪರಿಹಾರಕ್ಕೆ ತಾವು ಪ್ರಾಮಾಣಿಕ ಪ್ರಯತ್ನ ಮಾಡಿರುವುದಾಗಿ ಸಂಸದ ಕೆ. ಜಯಪ್ರಕಾಶ್ ಹೆಗ್ಡೆ ಹೇಳಿದ್ದಾರೆ.
ಇಲ್ಲಿನ ನಾರಾಯಣಗುರು ಸಮುದಾಯ ಭವನದಲ್ಲಿ ಶೃಂಗೇರಿ ಕ್ಷೇತ್ರ ಯುವ ಕಾಂಗ್ರೆಸ್ ಸಮಿತಿ ಹಾಗೂ ಬಾಳೆಹೊನ್ನೂರು ಬ್ಲಾಕ್ ಕಾಂಗ್ರೆಸ್ ಸಮಿತಿ ಶುಕ್ರವಾರ ಆಯೋಜಿಸಿದ್ದ ಕಾಂಗ್ರೆಸ್ ಸಮಾವೇಶ ಉದ್ಘಾಟಿಸಿ ಮಾತನಾಡಿದರು.
ಅಡಕೆ ಬೆಳೆಗಾರರ ಬಗ್ಗೆ ಇದೀಗ ಕಾಳಜಿ ತೋರುತ್ತಿರುವ ಬಿಜೆಪಿ ಈ ಹಿಂದೆ ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದರಾಗಿ ಬಳಿಕ ಮುಖ್ಯಮಂತ್ರಿಯಾದ ನೀವು ಜಿಲ್ಲೆಯ ಬೆಳೆಗಾರರಿಗಾಗಿ ಏನು ನೀಡಿದ್ದೀರಿ. ಯಾಕೆ ಆ ವೇಳೆಯಲ್ಲಿ ಅಡಕೆ ಬೆಳೆಗಾರರ ಸಮಸ್ಯೆಗೆ ಸ್ಪಂದಿಸಲಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಅವರ ಹೆಸರನ್ನು ಹೇಳದೆ ಪರೋಕ್ಷವಾಗಿ ಬಿಜೆಪಿ ಮುಖಂಡರನ್ನು ಪ್ರಶ್ನಿಸಿದರು.
1250 ಕೋಟಿ ಪ್ಯಾಕೇಜ್: ಕೇಂದ್ರ ಸರ್ಕಾರ ಕಾಫಿ ಬೆಳೆಗಾರರಿಗೆ 1250 ಕೋಟಿ ಪ್ಯಾಕೇಜ್ ನೀಡಿದೆ. ಈಗ ಕೇಂದ್ರ ಸರ್ಕಾರ ಅಡಕೆ ಬೆಳೆಗಾರರಿಗೆ ಏನೂ ಮಾಡಿಲ್ಲ ಎಂದು ದೂರುವ ವಿರೋಧ ಪಕ್ಷ ಹಿಂದೆ ಅಧಿಕಾರದಲ್ಲಿ ಇದ್ದಾಗ ಮಾಡಿದ್ದೇನು ಎಂದು ಪ್ರಶ್ನಿಸಿದ ಅವರು, ಅಡಕೆ ಬೆಳೆಗಾರರಿಗೆ ನೂತನ ಬೆಳೆ ಬೆಳೆಯಲು 134 ಕೋಟಿ ಪ್ಯಾಕೇಜ್ ನೀಡಲಾಗಿದೆ. ಐದು ಎಕರೆ ಒಳಗಿನ ಒತ್ತುವರಿದಾರರಿಗೆ ತೊಂದರೆ ನೀಡದಂತೆ ಸಂಪುಟದಲ್ಲಿ ಚರ್ಚಿಸಿ ಆದೇಶ ಹೊರಡಿಸಲಾಗಿದೆ ಎಂದರು.
ಕಂದಾಯ ಭೂಮಿ ಒತ್ತುವರಿದಾರರನ್ನು ಒಕ್ಕಲೆಬ್ಬಿಸಿ ಅವರಿಗೆ ಶಿಕ್ಷೆ ವಿಧಿಸುವ ಕಾನೂನನ್ನು ಬಿಜೆಪಿ ಸರ್ಕಾರ ತಂದಿತ್ತು. ಆ ಕಾನೂನನ್ನು ಮಾರ್ಪಡಿಸಲು ಚಿಂತನೆ ನಡೆಸಲಾಗಿದೆ ಎಂದು ತಿಳಿಸಿದರು.
ಜನಾಭಿಪ್ರಾಯವೇ ಅಂತಿಮ: ಕೆಪಿಸಿಸಿ ಕಿಸಾನ್ ಘಟಕದ ಉಪಾಧ್ಯಕ್ಷ ಸಚಿನ್ ಮೀಗಾ ಮಾತನಾಡಿ, ಕಾಂಗ್ರೆಸ್ ಪಕ್ಷವು ರಾಹುಲ್ ಗಾಂಧಿಯವರನ್ನು ಪ್ರಧಾನಿ ಅಭ್ಯರ್ಥಿ ಎಂದು ಎಲ್ಲೂ ಬಿಂಬಿಸಿಲ್ಲ. ಚುನಾವಣೆಗೂ ಮುನ್ನವೇ ಪ್ರಧಾನಿ ಹುದ್ದೆ ಘೋಷಣೆ ನಮ್ಮ ಪಕ್ಷದಲ್ಲಿಲ್ಲ. ಜನಾಭಿಪ್ರಾಯವೇ ನಮಗೆ ಅಂತಿಮ. ಬಿಜೆಪಿ ಪ್ರಧಾನಿ ಅಭ್ಯರ್ಥಿಯೆಂದು ಘೋಷಿಸಿರುವ ನರೇಂದ್ರ ಮೋದಿ ಗುಜರಾತ್ ನಲ್ಲಿ ಯಾವುದೇ ಅಭಿವೃದ್ಧಿ ಮಾಡಿಲ್ಲ. ಬದಲಾಗಿ ತಾವೇ ಅಭಿವೃದ್ಧಿಯಾಗಿದ್ದಾರೆ.
ಇದಕ್ಕೆ ನೈಜ ಉದಾಹರಣೆಯೆಂದರೆ ಗುಜರಾತ್‌ನಲ್ಲಿ ಸಾಮಾನ್ಯ ಟೆಕ್ಸ್‌ಟೈಲ್ಸ್ ಉದ್ಯಮಿಯಾಗಿದ್ದ ಅದಾನಿ ಎಂಬ ವ್ಯಕ್ತಿ ಕೇವಲ 9 ವರ್ಷದಲ್ಲಿ 17 ಸಾವಿರ ಕೋಟಿ ಸಂಪಾದಿಸಿದ್ದಾರೆ. ಇದಕ್ಕೆ ಪ್ರಮುಖ ಕಾರಣವೆಂದರೆ ಅಲ್ಲಿನ ಸರ್ಕಾರ 1 ಅಡಿಗೆ 650- 700ಬೆಲೆ ಬಾಳುವ ಭೂಮಿಯನ್ನು ಕೇವಲ 17ಕ್ಕೆ  65 ಸಾವಿರ ಎಕರೆ ಭೂಮಿ ನೀಡಿರುವುದು ಕಾರಣ ಎಂದು ಆರೋಪಿಸಿದರು.
ಮನವರಿಕೆ ಮಾಡಿಕೊಳ್ಳಲಿ: ಕಾಂಗ್ರೆಸ್ ಪಕ್ಷವು ಸರ್ದಾರ್ ವಲ್ಲಭಭಾಯ್ ಪಟೇಲ್ ಅವರಿಗೆ ದೇಶದ ಅತ್ಯುನ್ನತ ಗೃಹಖಾತೆಯನ್ನು ನೀಡಿ ಗೌರವಯುತವಾಗಿ ನಡೆಸಿಕೊಂಡಿತ್ತು. ಆದರೆ, ಇದೀಗ ರಾಜಕೀಯ ಉದ್ದೇಶಕ್ಕಾಗಿ ಗುಜರಾತ್‌ನಲ್ಲಿ ಬಿಜೆಪಿ ಪಟೇಲ್ ಪ್ರತಿಮೆ ನಿರ್ಮಾಣಕ್ಕೆ ಮುಂದಾಗಿದೆ. ಅವರದೇ ಪಕ್ಷದಲ್ಲಿನ ಅಡ್ವಾಣಿ ಅವರನ್ನು ಅವರು ಹೇಗೆ ನಡೆಸಿಕೊಳ್ಳುತ್ತಿದ್ದಾರೆ ಎಂಬುದನ್ನು ಬಿಜೆಪಿಯವರು ಮನವರಿಕೆ ಮಾಡಿಕೊಳ್ಳಲಿ ಎಂದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ. ಡಿ.ಎಲ್. ವಿಜಯಕುಮಾರ್,  ಜಿಪಂ ಮಾಜಿ ಅಧ್ಯಕ್ಷ ಟಿ.ಡಿ. ರಾಜೇಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ. ಕೆ.ಪಿ. ಅಂಶುಮಂತ್, ಎಐಸಿಸಿ ಸದಸ್ಯೆ ಬಿ.ಸಿ. ಗೀತಾ, ಜಿಪಂ ಸದಸ್ಯ ಮಹಮ್ಮದ್ ಇಫ್ತೆಖಾರ್ ಆದಿಲ್, ಮಾಜಿ ಅಧ್ಯಕ್ಷ ಸತೀಶ್, ಹೋಬಳಿ ಯುವ ಕಾಂಗ್ರೆಸ್ ಅಧ್ಯಕ್ಷ ಶಹಾಬ್, ಹೇಮಲತಾ ಪ್ರಭಾಕರ್, ಶಾಹಿದಾ ಬಾನು, ಬಿ.ಎಂ. ಸಂದೀಪ್, ಅಬುಲ್ ಕಲಂ, ಸುಬ್ರಹ್ಮಣ್ಯ, ಮಸೀಗದ್ದೆ ಸತೀಶ್, ಜಯಶೀಲ್, ಶಿವಕುಮಾರ್, ರತ್ನಾಕರ್, ಗಂಗಾಧರ್ ಉಪಸ್ಥಿತರಿದ್ದರು.

ಅಡಕೆ, ಕಾಫಿ ಬೆಳೆಗಾರರ ಸಮಸ್ಯೆ ಬಗೆಹರಿಸುವಲ್ಲಿ ಕಾಂಗ್ರೆಸ್ ವಿಫಲ
ಚಿಕ್ಕಮಗಳೂರು: ಅಡಕೆ ಮತ್ತು ಕಾಫಿ ಬೆಳೆಗಾರರಿಗೆ ಕಾಂಗ್ರೆಸ್ ಶಾಪವಾಗಿ ಪರಿಣಮಿಸಿದೆ ಎಂದು ಬಿಜೆಪಿ ಜಿಲ್ಲಾ ವಕ್ತಾರ ಎಚ್.ಡಿ. ತಮ್ಮಯ್ಯ ಆರೋಪಿಸಿದ್ದಾರೆ.
ಕಳೆದ ಲೋಕಸಭೆಯ ಉಪ ಚುನಾವಣೆಯಲ್ಲಿ ಕೇಂದ್ರದ ಸಚಿವರು ಜಿಲ್ಲೆಯ ಅಡಕೆ ಬೆಳೆಗಾರರಿಗೆ 450 ಕೋಟಿ ಪ್ಯಾಕೇಜ್ ನೀಡುವುದಾಗಿ ಹೇಳಿದ್ದರು. ಗೋರಕ್‌ಸಿಂಗ್ ವರದಿ ಜಾರಿಗೊಳಿಸಲಾಗುವುದೆಂದು ಭರವಸೆ ನೀಡಿದ್ದರು. ಆದರೆ, ಈ ಭರವಸೆಗಳು ಜಾರಿಗೆ ತರುವಲ್ಲಿ ಕಾಂಗ್ರೆಸ್ ವಿಫಲವಾಗಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ಅಡಕೆ, ಆರೋಗ್ಯಕ್ಕೆ ಹಾನಿಕಾರಕ ಎಂದು ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್‌ಗೆ ಪ್ರಮಾಣ ಪತ್ರ ಸಲ್ಲಿಸಿದೆ. ಆದರೆ, ಈ ವಿಷಯವನ್ನು ಸಂಸದ ಜಯಪ್ರಕಾಶ್ ಹೆಗ್ಡೆಯವರು ಮರೆಮಾಚಿ, ಗಿಮಿಕ್ ರಾಜಕಾರಣ ಮಾಡುತ್ತಿದ್ದಾರೆ. ಸುಪ್ರೀಂಕೋರ್ಟ್‌ಗೆ ಪ್ರಮಾಣಪತ್ರ ಸಲ್ಲಿಸಿಲ್ಲ ಎಂಬುದಾದರೆ ಅಡಕೆ ಬಗ್ಗೆ ಅಧ್ಯಯನ ನಡೆಸಲು ಸಮಿತಿ ರಚನೆ ಮಾಡಿದ್ದಾದರೂ ಏಕೆಂದು ಪ್ರಶ್ನಿಸಿದರು.
ಆಲ್ದೂರಿನಲ್ಲಿ ಧ್ವಜಕಟ್ಟೆ ತೆರವುಗೊಳಿಸುವ ಮೂಲಕ ಜಿಲ್ಲಾಡಳಿತ ಕಾಂಗ್ರೆಸ್ ಏಜೆಂಟ್‌ರಂತೆ ನಡೆದುಕೊಂಡಿದೆ. ಈ ಘಟನೆಗೆ ಸಂಬಂಧಿಸಿದಂತೆ ಅಮಾಯಕರನ್ನು ಬಂಧಿಸಲಾಗಿದೆ. ಇದರ ವಿರುದ್ಧ ಹಿಂದು ಸಂಘಟನೆ ಮೂಲಕ ಹೋರಾಟ ನಡೆಸಲಾಗುವುದು ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement