ನಿವೇಶನ ವಿತರಣೆಗೆ ಶಾಸಕರ ಅಡ್ಡಿ: ಆರೋಪ
ಕಡೂರು: ಬೀರೂರಿನ ಎಸ್ ಆರ್.ಲಕ್ಷ್ಮಯ್ಯ ಬಡಾವಣೆಯಲ್ಲಿ ಕಳೆದ 8 ವರ್ಷದಿಂದ ಬಡವರಿಗೆ ನೀಡಬೇಕಾಗಿರುವ ನಿವೇಶನವನ್ನು ವಿತರಿಸದೆ ಸರ್ಕಾರಿ ಕಚೇರಿ ನಿರ್ಮಿಸುವ ನೆಪದಲ್ಲಿ ಮಾಜಿ ಶಾಸಕರಾದ ಕೆ.ಬಿ.ಮಲ್ಲಿಕಾರ್ಜುನ್ ಹಾಗು ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಬಡವರಿಗೆ ವಂಚಿಸುತ್ತಿದ್ದಾರೆ ಎಂದು ಮಾಜಿ ಶಾಸಕ ಎಸ್.ಎಲ್. ಧರ್ಮೇಗೌಡ ಆರೋಪಿಸಿದ್ದಾರೆ.
ತಾವು ಶಾಸಕರಾಗಿದ್ದಾಗ ಬೀರೂರು ಪಟ್ಟಣದಲ್ಲಿ ತಮ್ಮ ತಂದೆಯವರಾದ ಮಾಜಿ ಶಾಸಕ ಎಸ್.ಆರ್.ಲಕ್ಷ್ಮಯ್ಯನವರ ಹೆಸರಲ್ಲಿ ಬೀರೂರು ಪಟ್ಟಣದ ಸರ್ವೆ ನಂ 4ರಲ್ಲಿ 15 ಎಕರೆ ಭೂಮಿಯಲ್ಲಿ ಸುಮಾರು 540 ನಿವೇಶನಗಳನ್ನು ರಾಜೀವ್ ಗಾಂಧಿ ವಸತಿ ನಿಗಮದಿಂದ ಮಂಜೂರು ಮಾಡಿಸಿ ಸಾಂಕೇತಿಕವಾಗಿ ನಿವೇಶನ ಹಂಚಿಕೆ ಮಾಡಿ ಉಳಿದ ನಿವೇಶನಗಳನ್ನು ಹಂಚಿಕೆ ಮಾಡಲು ಪಟ್ಟಿ ಸಿದ್ದಪಡಿಸಲಾಗಿತ್ತು ಎಂದು ಅವರು ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು. ಆದರೆ ಮಾಜಿ ಶಾಸಕರಾದ ಕೆ.ಬಿ. ಮಲ್ಲಿಕಾರ್ಜುನ್ ಮತ್ತು ಕೆಲವರು ನಿವೇಶನಗಳ ಹಂಚಿಕೆಗೆ ಅಡ್ಡಿಪಡಿಸಿ ನ್ಯಾಯಲಯದ ಮೊರೆಹೋಗುವ ಮೂಲಕ ವಿನಾಕಾರಣ ಬಡವರಿಗೆ ತೊಂದರೆ ಉಂಟುಮಾಡುತ್ತಿದ್ದಾರೆ. ಮಲ್ಲಿಕಾರ್ಜುನ್ ಅವರ ಖಾಸಗಿ ನಿವೇಶನ ಹಾಗು ಖಾಸಗಿಯವರ ಭೂಮಿಯು ಬಡಾವಣೆ ಪಕ್ಕದಲ್ಲೇ ಇರುವುದೇ ಇದಕ್ಕೆ ಕಾರಣ ಎಂದು ಅವರು ತಿಳಿಸಿದರು.