ಕೇಂದ್ರೀಯ ವಿದ್ಯಾಲಯ ಮುಚ್ಚಲು ವಿರೋಧ
ಕ.ಪ್ರ.ವಾರ್ತೆ ಟಿ ಮೂಡಿಗೆರೆ ಟಿ ಮಾ.17
ಕುದುರೆಮುಖದಲ್ಲಿರುವ ಕೇಂದ್ರೀಯ ವಿದ್ಯಾಲಯವನ್ನು ಏಕಾಏಕಿ ಮುಚ್ಚುತ್ತಿರುವುದು ಸರಿಯಲ್ಲ. ಕೂಡಲೇ ಕುದುರೆಮುಖ ಕಂಪೆನಿ ಮಧ್ಯ ಪ್ರವೇಶಿಸಿ ಶಾಲೆಯನ್ನು ಪುನರಾರಂಭ ಮಾಡಬೇಕು ಇಲ್ಲವಾದಲ್ಲಿ ಕಂಪೆನಿ ವಿರುದ್ಧ ಹೋರಾಟಕ್ಕೆ ಇಳಿಯಬೇಕಾಗುತ್ತದೆ ಎಂದು ತಾಪಂ ಅಧ್ಯಕ್ಷ ಎಂ.ಎ.ಶೇಷಗಿರಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಹೇಳಿಕೆ ನೀಡಿದ ಅವರು, ಕಳೆದ 36 ವರ್ಷದಿಂದ ಕುದುರೆಮುಖದಲ್ಲಿ ಅದಿರು ಸಂಸ್ಥೆಯ ಆರ್ಥಿಕ ನೆರವಿನಿಂದ ಸಂಪನ್ಮೂಲ ಇಲಾಖೆ ಇವರು ನಡೆಸುತ್ತಿರುವ ಸಂಘಟನೆ ಕಮಿಟಿಯಿಂದ ಇಲ್ಲಿ ಕೇಂದ್ರೀಯ ವಿದ್ಯಾಲಯ ನಡೆಯುತ್ತಿತ್ತು.
ಅನುಮಾನದ ಹೊಗೆ: ಆದರೆ 13.3.2014ರ ಕೇಂದ್ರಿಯ ವಿದ್ಯಾಲಯ ಸಂಘಟನೆ ಆರ್ಡರ್ ನಂ. ಎಫ್-1- 66/76- ಕೆವಿಎಸ್ ಪ್ರಕಾರ 1.04.2014 ರಿಂದ ಕುದುರೆಮುಖ ಅದಿರು ಸಂಸ್ಥೆ ಆರ್ಥಿಕ ನೆರವು ನೀಡದೇ ಇರುವ ಕಾರಣ ವಿದ್ಯಾಲಯವನ್ನು ಮುಚ್ಚಲಾಗುತ್ತದೆ ಎಂದು ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ಇಲಾಖೆ ಪತ್ರ ಬರೆದಿದ್ದು, ಈ ಬಗ್ಗೆ ಹಲವು ಅನುಮಾನ ಹೊಗೆಯಾಡುತ್ತಿದೆ.
ಇಲ್ಲಿ ಪ್ರಸ್ತುತ 172 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದು, ಈ ಮಕ್ಕಳ ಭವಿಷ್ಯ ಏನಾಗಬೇಕು. ಕಂಪೆನಿ ಇಲ್ಲಿಯ ಸಮೃದ್ಧ ಪ್ರಕೃತಿಯನ್ನು ಲೂಟಿ ಹೊಡೆದು ಕೋಟ್ಯಂತರ ರು. ಆದಾಯ ಮಾಡಿಕೊಂಡಿದೆ. ಈಗಾಗಲೇ ಕಂಪೆನಿ ಸಾವಿರಾರು ಕೋಟಿ ಮೌಲ್ಯದ ಆಸ್ತಿಯ ಸ್ವತ್ತುಗಳನ್ನು ಕೇವಲ 227 ಕೋಟಿಗೆ ಹರಾಜು ಮಾಡಿದೆ.
ಕಂಪೆನಿ ವಿರುದ್ಧ ಹೋರಾಟ: ಸಾವಿರಾರು ಕೋಟಿ ರು. ಆದಾಯವಿರುವ ಕಂಪೆನಿಗೆ ಕನಿಷ್ಠ ಹಣವನ್ನು ಸಂಘಟನೆಗೆ ಕೊಟ್ಟು ವಿದ್ಯಾಲಯ ನಡೆಸಲು ಕಷ್ಟದ ಕೆಲಸವೇನಲ್ಲ. ಆದ್ದರಿಂದ ಕೂಡಲೇ ಕಂಪೆನಿ ವಿದ್ಯಾಲಯವನ್ನು ಮುನ್ನಡೆಸಲು ಅನುಮತಿ ನೀಡಬೇಕು. ಸಾಧ್ಯವಿಲ್ಲದಿದ್ದಲ್ಲಿ ಸ್ಥಳಿಯರು ಹಾಗೂ ಬಿಜೆಪಿಯಿಂದ ಕಂಪೆನಿ ವಿರುದ್ಧ ಹೋರಾಟಕ್ಕೆ ಇಳಿಯಲಾಗುತ್ತದೆ ಎಂದು ಎಚ್ಚರಿಸಿದರು.
ನಿರಾಶ್ರಿತ ಗ್ರಾಮಸ್ಥರಾದ ಜಗದೀಶ್ ಮಾತನಾಡಿ, ಕಂಪೆನಿಯ ನೌಕರರ ಮಕ್ಕಳು ಅಲ್ಲದೆ ಕುದುರೆಮುಖ ನಿರಾಶ್ರಿತರ ಹಾಗೂ ದಿನಗೂಲಿ ನೌಕರರ 42 ಮಕ್ಕಳು ಇದೇ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಅದಿರು ಸಂಸ್ಥೆಯ ಪ್ರಾರಂಭದಲ್ಲಿ ತಮ್ಮ ಆಸ್ತಿ ಮನೆಗಳನ್ನು ಕಂಪೆನಿಗೆ ಬಿಟ್ಟುಕೊಟ್ಟಿದ್ದೇವೆ. ಅಲ್ಲದೆ ಇಲ್ಲಿಯ ದಿನಗೂಲಿ ನೌಕರ ಕಾರ್ಮಿಕರ ಮಕ್ಕಳೂ ಕೂಡ ಇದೇ ಶಾಲೆಯನ್ನು ನೆಚ್ಚಿಕೊಂಡಿದ್ದಾರೆ. ಈಗ ನಮ್ಮಗೆ ಉದ್ಯೋಗವೂ ಇಲ್ಲ, ಮಕ್ಕಳಿಗೆ ವಿದ್ಯಾಭ್ಯಾಸವೂ ಇಲ್ಲದಂತೆ ಕಂಪೆನಿ ಮಾಡಿದೆ ಎಂದರು.
ಪ್ರತಿಭಟನೆ ಖಚಿತ: ನಾವು ಶಾಲೆ ಮುಚ್ಚಲು ಬಿಡುವುದಿಲ್ಲ. ಕಂಪೆನಿಯು ಆರ್ಥಿಕ ನೆರವನ್ನು ನೀಡಿ ಕೂಡಲೇ ವಿದ್ಯಾಲಯವನ್ನು ಪುನಃ ಆರಂಭಿಸಬೇಕು. ಇಲ್ಲವಾದಲ್ಲಿ ಯಾವುದೇ ರೀತಿಯ ಸ್ಥಳಿಯ ಅನುಮತಿ ಪಡೆಯದೆ ಕುದುರೆಮುಖ ಲಕ್ಯಾ ಡ್ಯಾಂನ ನೀರನ್ನು ಮಂಗಳೂರಿಗೆ ತೆಗೆದುಕೊಂಡು ಹೋಗಿ ಸಂಸ್ಥೆಯನ್ನು ನಡೆಸಲು ಬಿಡುವುದಿಲ್ಲ. ಕಂಪೆನಿ ವಿರುದ್ಧ ಪ್ರತಿಭಟನೆಗೆ ಇಳಿಯಲಾಗುತ್ತದೆ ಎಂದು ಹೇಳಿದರು.
ಈ ಸಂದರ್ಭ ನಾಗೇಶ್ ಭಟ್, ಜಯಂತ್, ರಂಗನಾಥ್, ಶಂಕರೇಗೌಡ, ನಾಗೇಶ್ ಜಾಂಬ್ಲೆ, ಸುರೇಶ್ ಮೊದಲಾದವರು ಇದ್ದರು.