ಪ್ರತಿ ಜಿಲ್ಲೆಯಲ್ಲೂ ಹಣಕಾಸು ಕೇಂದ್ರ
ನರಸಿಂಹರಾಜಪುರ: ಬ್ಯಾಂಕುಗಳ ಬಗ್ಗೆ ಜನಸಾಮಾನ್ಯರಲ್ಲಿ ಅರಿವು ಮೂಡಿಸಲು ಪ್ರತಿಯೊಂದು ಜಿಲ್ಲೆಯಲ್ಲೂ ಹಣಕಾಸು ಸಾಕ್ಷರತಾ ಕೇಂದ್ರ ತೆರೆಯಲಾಗಿದೆ ಎಂದು ಕೆನರಾ ಬ್ಯಾಂಕ್ ಮುಖ್ಯಸ್ಥ ಎ. ಅಕ್ಷಯ ಕುಮಾರ್ ತಿಳಿಸಿದರು.
ಪಟ್ಟಣದ ಸುಂಕದಕಟ್ಟೆಯಲ್ಲಿ ಸೋಮವಾರ ನಡೆದ ಹಣಕಾಸು ಸಾಕ್ಷರತಾ ಕೇಂದ್ರದ ಸಭೆಯಲ್ಲಿ ಅವರು ಮಾಹಿತಿ ನೀಡಿದರು.
ರಿಸರ್ವ್ ಬ್ಯಾಂಕ್ ಪ್ರಕಾರ ದೇಶದ ಜನಸಂಖ್ಯೆಯಲ್ಲಿ ಶೇ.50 ಜನ ಮಾತ್ರ ಬ್ಯಾಂಕ್ ಖಾತೆ ಹೊಂದಿದ್ದಾರೆ. ದೇಶದ ಎಲ್ಲರೂ ಬ್ಯಾಂಕ್ ಖಾತೆ ಹೊಂದುವಂತೆ ಮಾಡುವುದೇ ಹಣಕಾಸು ಸಾಕ್ಷರತಾ ಕೇಂದ್ರದ ಉದ್ದೇಶ. ಈ ನಿಟ್ಟಿನಲ್ಲಿ ಕೆನರಾ ಬ್ಯಾಂಕ್ ರಾಜ್ಯದ 26 ಜಿಲ್ಲೆಗಳಲ್ಲಿ ಹಣಕಾಸು ಸಾಕ್ಷರತಾ ಕೇಂದ್ರ ತೆರೆದಿದೆ. ಜಿಲ್ಲೆಯ 7 ತಾಲೂಕುಗಳಲ್ಲಿಯೂ ಕೇಂದ್ರ ತೆರೆಯಲು ಉದ್ದೇಶಿಸಲಾಗಿದ್ದು, ಪ್ರಸ್ತತ ಚಿಕ್ಕಮಗಳೂರು ನಗರ ಮತ್ತು ನರಸಿಂಹರಾಜಪುರದಲ್ಲಿ ಕೇಂದ್ರ ತೆರೆಯಲಾಗಿದೆ ಎಂದು ತಿಳಿಸಿದರು.
ಸ್ವತಂತ್ರ ಸಂಸ್ಥೆ: ಕೆನರಾ ಫೈನಾನ್ಶಿಯಲ್ ಅಡ್ವೈಸರಿ ಟ್ರಸ್ಟ್ ಸ್ವತಂತ್ರ ಸಂಸ್ಥೆಯಾಗಿದೆ. ಕೆನರಾ ಬ್ಯಾಂಕ್ ಈ ಕೇಂದ್ರದ ಮೇಲ್ವಿಚಾರಣೆ ಹಾಗೂ ಹಣಕಾಸು ಪೂರೈಸುತ್ತದೆ. ಹಣಕಾಸು ಸಾಕ್ಷರತಾ ಕೇಂದ್ರಕ್ಕೆ ನಾಲ್ಕು ಟ್ರಸ್ಟಿಗಳಿದ್ದಾರೆ. ಈ ಕೇಂದ್ರದ ಸಿಬ್ಬಂದಿ ಪ್ರತಿ ತಿಂಗಳು ಕನಿಷ್ಠ 1 ಸಾವಿರ ಜನರನ್ನು ಭೇಟಿ ಮಾಡಿ, ಬ್ಯಾಂಕಿಂಗ್ ಉದ್ದೇಶ ವಿವರಿಸುತ್ತಾರೆ ಎಂದರು.
ಕೆನರಾ ಬ್ಯಾಂಕ್ ಶಿವಮೊಗ್ಗ ಪ್ರಾದೇಶಿಕ ಕಚೇರಿ ವ್ಯವಸ್ಥಾಪಕ ಶಂಕರ್ ಕುಮಾರ್, ಕೆನರಾ ಬ್ಯಾಂಕಿನ ನ.ರಾ.ಪುರ ಶಾಖೆಯ ವ್ಯವಸ್ಥಾಪಕ ಪಾರ್ವತೀಕರ್, ಹಣಕಾಸು ಸಾಕ್ಷರತಾ ಕೇಂದ್ರದ ಮುಖ್ಯಸ್ಥ ಎಚ್.ಜಿ. ಸುರೇಶ್, ನ.ರಾ.ಪುರ ಎಸ್.ಬಿ.ಎಂ. ವ್ಯವಸ್ಥಾಪಕಿ ರಾಜಶ್ರೀ, ಸೋಷಿಯಲ್ ವೆಲ್‌ಫೇರ್ ಸೊಸೈಟಿಯ ಫಾ. ಮನೋಜ್, ಪ್ರಗತಿಪರ ಕೃಷಿಕ ಕೆ.ಇ. ಶಂಕರಪ್ಪ, ಉದ್ಯಮಿ ಎಂ. ಪ್ರಭಾಕರ್ ಉಪಸ್ಥಿತರಿದ್ದರು.