ಬಾಬಾಬುಡನ್ ಗಿರಿಯಲ್ಲಿ ಉರುಸ್‌ಗೆ ಚಾಲನೆ, ಗೊಂದಲ
ಚಿಕ್ಕಮಗಳೂರು: ಬಾಬಾಬುಡನ್ ಗಿರಿಯಲ್ಲಿ ಮೂರು ದಿನಗಳ ಕಾಲದ ಉರುಸ್‌ಗೆ ಸೋಮವಾರ ಚಾಲನೆ ಸಿಕ್ಕಿತು.
ಗೋರಿಗಳಿಗೆ ಸಂದಲ್ ಹಚ್ಚಲು ಅವಕಾಶ ನೀಡದೆ ಇರುವುದನ್ನು ಶಾಖಾದ್ರಿ ನೇತೃತ್ವದಲ್ಲಿ ದೇಶದ ವಿವಿಧೆಡೆಗಳಿಂದ ಬಂದಿದ್ದ ಫಕೀರರು ಹಾಗೂ ಮುಸ್ಲಿಂ ಮುಖಂಡರು ಖಂಡಿಸಿ ಗುಹೆಯೊಳಗೆ ತೆರಳದೆ ಪ್ರತಿಭಟಿಸಿ ವಾಪಸ್ ತೆರಳಿದರು. ಕೆಲ ಸಮಯ ಸ್ಥಳದಲ್ಲಿ ಗೊಂದಲದ ವಾತಾವರಣ ನಿರ್ಮಾಣಗೊಂಡಿತ್ತು.
ಸಾಂಪ್ರದಾಯದ ಪ್ರಕಾರ ಚಿಕ್ಕಮಗಳೂರಿನ ಬಡಾ ಮಖಾನ್‌ನಿಂದ ಸಂದಲ್ ತೆಗೆದುಕೊಂಡು ಹೋಗಿ ಅತ್ತಿಗುಂಡಿಯಲ್ಲಿರುವ ಮಸೀದಿಯಲ್ಲಿ ಅದಕ್ಕೆ ಪೂಜೆ ಸಲ್ಲಿಸಿ ಬಳಿಕ ಬಾಬಾಬುಡನ್ ಗಿರಿಗೆ ತೆರಳಿ, ಗುಹೆಯೊಳಗಿರುವ ಗೋರಿಗಳಿಗೆ ಅವುಗಳನ್ನು ಲೇಪನ ಮಾಡಿದರೆ ಉರುಸ್‌ಗೆ ಚಾಲನೆ ನೀಡಿದಂತಾಗುತ್ತದೆ.
ಸಂಪ್ರದಾಯದ ಪ್ರಕಾರ ಈ ಧಾರ್ಮಿಕ ವಿಧಿ ವಿಧಾನಗಳನ್ನು ಶಾಖಾದ್ರಿಗಳು ಮಾಡಬೇಕು. ಪ್ರತಿ ವರ್ಷದಂತೆ ಈ ಬಾರಿಯೂ ಕೂಡ ಉರುಸ್ ನಡೆಯುವ ವೇಳೆಯಲ್ಲಿ ಸೈಯದ್ ಗೌಸ್ ಮೊಹಿಯುದ್ದೀನ್ ಶಾಖಾದ್ರಿ ಅವರು, ದೇಶದ ವಿವಿಧೆಡೆಗಳಿಂದ ಆಗಮಿಸಿದ್ದ ಫಕೀರರು ಹಾಗೂ ಮುಸ್ಲಿಂ ಸಮುದಾಯವರು ಸೋಮವಾರ ಶ್ರೀ ಇನಾಂ ದತ್ತಾತ್ರೇಯ ಪೀಠ ಬಾಬಾಬುಡನ್ ಸ್ವಾಮಿ ದರ್ಗಾಕ್ಕೆ ತೆರಳಿದರು.
ಈ ವೇಳೆಗೆ ಭಕ್ತರು ಸರದಿ ಸಾಲಿನಲ್ಲಿ ಬ್ಯಾರಿಕೇಡ್‌ನಲ್ಲಿ ನಿಂತು ಗುಹೆಯೊಳಗೆ ಪ್ರವೇಶಿಸಿ ದರ್ಶನ ಪಡೆದರು. ಆದರೆ, ಶಾಖಾದ್ರಿ ಹಾಗೂ ಫಕೀರರು ಮುಖ್ಯ ದ್ವಾರದ ಮೂಲಕ ತೆರಳು ಯತ್ನಿಸಿದಾಗ ಪೊಲೀಸರು ಅವರನ್ನು ತಡೆದರು. ಇದೇ ವೇಳೆಗೆ ಶಾಖಾದ್ರಿಯವರು ಗೋರಿಗಳಿಗೆ ಸಂದಲ್ ಹಚ್ಚಲು, ಹೂವುಗಳನ್ನು ಹಾಕಲು ಅವಕಾಶ ನೀಡಬೇಕೆಂದು ಕೇಳಿಕೊಂಡಾಗ ಪೊಲೀಸರು ನಿರಾಕರಿಸಿದರು. ಆಗ ಮಾತಿನ ಚಕಮಕಿ ನಡೆಯಿತು.
ವಿರೋಧ: ಮುಸ್ಲಿಂ ಸಮುದಾಯದವರು ತೀವ್ರ ವಿರೋಧ ವ್ಯಕ್ತಪಡಿಸಿದರು. ಆಗ ಶಾಖಾದ್ರಿ ಅವರ ನೇತೃತ್ವದಲ್ಲಿ ಉರುಸ್‌ಗೆ ಬಂದಿದ್ದ ಮುಸ್ಲಿಂ ಭಕ್ತರು, ಗುಹೆಯ ಪ್ರವೇಶ ದ್ವಾರದ ಬಳಿ ನಿಂತು ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸಿ ವಾಪಸ್ ತೆರಳಿದರು. ದೇಶದ ವಿವಿಧೆಡೆಗಳಿಂದ ಬಂದಿದ್ದ ಭಕ್ತರು ವಾರ್ಷಿಕ ಉರುಸ್‌ನಲ್ಲಿ ಪಾಲ್ಗೊಂಡಿದ್ದರು. ಪ್ರಥಮ ದಿನದಂದು ಸುಮಾರು 5 ಸಾವಿರ ಮಂದಿ ಭಕ್ತರು ಗಿರಿಗೆ ಆಗಮಿಸಿದ್ದರು. ಜಿಲ್ಲಾಡಳಿತ ಮುಜಾವರ್ ಅವರಿಂದ ಗಂಧ ಲೇಪನ ಮಾಡಿಸಿ, ಉರುಸ್‌ಗೆ ಚಾಲನೆ ನೀಡಿತು.
ಸ್ಥಳಕ್ಕೆ ಜಿಲ್ಲಾಧಿಕಾರಿ ಬಿ.ಎಸ್. ಶೇಖರಪ್ಪ, ಜಿಲ್ಲಾ ರಕ್ಷಣಾಧಿಕಾರಿ ಚೇತನ್ ಭೇಟಿ ನೀಡಿದ್ದರು. ಉರುಸ್ ಹಿನ್ನೆಲೆಯಲ್ಲಿ ಗಿರಿಯಲ್ಲಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.
ಖಂಡನೆ: ಇದೇ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸೈಯದ್ ಗೌಸ್ ಮೊಹಿಯುದ್ದೀನ್ ಶಾಖಾದ್ರಿ, 1975ರ ಹಿಂದಿನ ಪೂಜಾ ವಿಧಾನವನ್ನು ಅನುಸರಿಸುವಂತೆ ಸುಪ್ರೀಂಕೋರ್ಟ್ ಹೇಳಿದೆ. ಅದರಂತೆ ಸಂದಲ್ ಹಚ್ಚಲು ತಮಗೆ ಜಿಲ್ಲಾಡಳಿತ ಅವಕಾಶ ನೀಡಬೇಕಾಗಿತ್ತು. ಆದರೆ, ಅವಕಾಶ ನೀಡದೆ ಜಿಲ್ಲಾಡಳಿತ ನ್ಯಾಯಾಲಯದ ಆದೇಶವನ್ನು ಉಲ್ಲಂಘನೆ ಮಾಡಿದೆ ಎಂದು ಹೇಳಿದರು.
ಕಳೆದ ಮೂರು ವರ್ಷಗಳಿಂದ ಜಿಲ್ಲಾಡಳಿತ ಉರುಸ್ ವೇಳೆಯಲ್ಲಿ ಅನಗತ್ಯವಾಗಿ ಗೊಂದಲ ಹುಟ್ಟು ಹಾಕುತ್ತಿದೆ. 2011 ಹಾಗೂ 2013ರಲ್ಲಿ ತಮ್ಮನ್ನು ಬಂಧಿಸುವ ಕೆಲಸವನ್ನು ಸಹ ಮಾಡಲಾಗಿತ್ತು. ಆಗ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿತ್ತು. ಈಗ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದೆ.
ಸಾಂಪ್ರದಾಯದ ಪ್ರಕಾರ ಉರುಸ್ ನಡೆಸಲು ಅನುಮತಿ ನೀಡುತ್ತದೆ ಎಂದು ಭಾವಿಸಲಾಗಿತ್ತು. ಜಿಲ್ಲಾಡಳಿತ ಕರೆದಿದ್ದ ಪೂರ್ವಭಾವಿ ಸಭೆಯಲ್ಲಿ ಆಗ್ರಹಿಸಲಾಗಿತ್ತು. ಆದರೆ, ಇಂದು ಉರುಸ್ ನಡೆಸಲು ಸ್ಪಂದಿಸಿಲ್ಲ, ಮಾ.27ರಂದು ಮುಸ್ಲಿಂ ಮುಖಂಡರ ಸಭೆಯನ್ನು ಕರೆದು ಮುಂದಿನ ಹೋರಾಟದ ಬಗ್ಗೆ ಚರ್ಚಿಸಲಾಗುವುದು ಎಂದರು.