ಮಹಿಳಾ ಮೀಸಲು ಎಲ್ಲ ಕ್ಷೇತ್ರದಲ್ಲೂ ಜಾರಿಯಾಗಲಿ: ಗೌರಮ್ಮ ಸಲಹೆ
ಚಿಕ್ಕಮಗಳೂರು: ನೊಂದ ಮಹಿಳೆಗೆ ನ್ಯಾಯ ಪಡೆಯುವ ಭರವಸೆ ಮೂಡಿಸುವಲ್ಲಿ ದೇಶದ ನ್ಯಾಯಾಂಗ ವ್ಯವಸ್ಥೆ ಸುಧಾರಣೆಗೊಳ್ಳಬೇಕು. ಮಹಿಳಾ ಮೀಸಲು ಎಲ್ಲ ಹಂತಗಳಲ್ಲೂ ಶೀಘ್ರ ಜಾರಿಗೊಳ್ಳಬೇಕು ಎಂದು ಅಕ್ಕಮಹಾದೇವಿ ಮಹಿಳಾ ಸಂಘದ ಅಧ್ಯಕ್ಷೆ ಗೌರಮ್ಮ ಬಸವೇಗೌಡ ಕರೆ ನೀಡಿದ್ದಾರೆ.
ನಗರದ ಶ್ರೀ ಜಗದ್ಗುರು ರೇಣುಕಾಚಾರ್ಯ ಸಮುದಾಯಭವನದಲ್ಲಿ ಅಕ್ಕಮಹಾದೇವಿ ಮಹಿಳಾ ಸಂಘದ ಕಲ್ಯಾಣನಗರ ಬಡಾವಣೆಯ ಶರಣೆ ಮಾದಲಾಂಬಿಕೆ ತಂಡ ಭಾನುವಾರ ಹೋಳಿ ಹುಣ್ಣಿಮೆಯಂದು ಆಯೋಜಿಸಿದ್ದ ಮಹಿಳಾ ದಿನಾಚರಣೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮಹಿಳೆಯ ಕಡೆಗಣನೆ: ಎಲ್ಲ ರಂಗಗಳಲ್ಲೂ ಇಂದು ಮಹಿಳೆ ಸಶಕ್ತವಾಗಿ ಕಾರ್ಯನಿರ್ವಹಿಸುತ್ತಿದ್ದಾಳೆ. ಕುಟುಂಬ ಹಾಗೂ ಸಮಾಜದ ಕೆಲಸ ಕಾರ್ಯಗಳಲ್ಲೂ ಸಮರ್ಥವಾಗಿ ತೊಡಗಿಸಿಕೊಂಡಿದ್ದಾಳೆ. ಆದರೂ ಇಂದು ಮಹಿಳೆಯರನ್ನು ಕಡೆಗಣಿಸಲಾಗಿದೆ. ಆಡಳಿತದಲ್ಲಿ ಪಾಲು ನೀಡುವ ಮಹಿಳಾ ಮೀಸಲಾತಿ ಪರಿಪೂರ್ಣವಾಗಿ ಜಾರಿಗೊಂಡಿಲ್ಲ ಎಂದವರು ವಿಷಾದಿಸಿದರು.
ಮಹಿಳೆಯರ ಮೇಲೆ ದೌರ್ಜನ್ಯ- ಶೋಷಣೆ ಅವ್ಯಾಹತವಾಗಿ ನಡೆಯುತ್ತಲೇ ಇದೆ. ದೇಶದ ಕಾನೂನಿನ ಬಗ್ಗೆ ಮಹಿಳೆಯರಲ್ಲಿ ನಂಬಿಕೆ ಇಲ್ಲದಂತಾಗಿರುವ ಸಂದರ್ಭದಲ್ಲಿ ದೌರ್ಜನ್ಯವನ್ನು ಎದುರಿಸಲು ಮಹಿಳೆಯರು ಮನೆಯಿಂದಲೇ ಸಜ್ಜಾಗಬೇಕು, ಸಂಘಟಿತರಾಗಬೇಕು. ತಪ್ಪು ಯಾರೆ ಮಾಡಿರಲಿ ಅವರಿಗೆ ಶಿಕ್ಷೆಯಾಗುವವರೆಗೂ ಬಿಡಬಾರದು ಎಂದರು.
ಆತ್ಮಾವಲೋಕನ ಅಗತ್ಯ: ಎಐಟಿ ಉಪನ್ಯಾಸಕಿ ರಶ್ಮಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಹಿಳೆ ಇಂದು ಸಮಾಜದಲ್ಲಿ ಸಬಲೆಯೋ, ಅಬಲೆಯೋ, ಪ್ರಬಲೆಯೋ ಎಂಬುದು ಗೊಂದಲಮಯವಾಗಿದೆ. ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ ಹೆಣ್ಣಿನ ಉನ್ನತಿ, ಶಕ್ತಿ, ಒಳಿತು, ಕೆಡುಕುಗಳು, ಸ್ಥಾನಮಾನ, ಶಿಕ್ಷಣ, ವೇತನ, ಜವಾಬ್ದಾರಿ ಕುರಿತಂತೆ ಆತ್ಮಾವಲೋಕನ ಅಗತ್ಯ ಎಂದು ಹೇಳಿದರು.
ಮಾಹಿತಿ ತಂತ್ರಜ್ಞಾನದ ಪ್ರಗತಿಯ ಉದಾರ ಕೊಡುಗೆಯೂ ಇದೆ ಎಂದ ರಶ್ಮಿ, ಕಂಪ್ಯೂಟರ್ ಕ್ಷೇತ್ರದಲ್ಲಿ ಮಹಿಳೆಯರ ಸಾಧನೆ ಅದ್ಭುತ. ಕುಳಿತಲ್ಲಿಂದಲೇ ಎಲ್ಲ ಮಾಹಿತಿಗಳನ್ನು ಪಡೆದುಕೊಂಡು ಪುರುಷರಿಗಿಂತ ಹೆಚ್ಚು ಅಚ್ಚುಕಟ್ಟಾಗಿ ಹೊರಗಿನ ವ್ಯವಹಾರಗಳನ್ನು ನಿಭಾಯಿಸುವ ಸಾಮರ್ಥ್ಯವನ್ನು ಪಡೆದಿದ್ದಾಳೆ ಎಂದರು.
ಸ್ಪಂದನೆ: ಸಂಘದ ಸಹ ಕಾರ್ಯದರ್ಶಿ ಭಾರತೀ ಶಿವರುದ್ರಪ್ಪ ಮಾತನಾಡಿ, ಮಹಿಳೆ ನಾಲ್ಕು ಗೋಡೆಗೆ ಸೀಮಿತವಾಗದೆ ಸಮಾಜದ ಆಗು-ಹೋಗುಗಳಿಗೆ ಸ್ಪಂದಿಸಬೇಕು. ತಾಳ್ಮೆ- ಸಹನೆ ಪ್ರತೀಕವಾದ ಮಹಿಳೆ ಮನೆ- ಊರು- ದೇಶ ಅಭಿವೃದ್ಧಿ ಹೊಂದಲು ಕಾರಣೀಭೂತಳು ಎಂದು ಹೇಳಿದರು.
ಸಂಘದ ಉಪಾಧ್ಯಕ್ಷೆ ಕಾತ್ಯಾಯಿನಿ ಚಂದ್ರಶೇಖರ್, ಖಜಾಂಚಿ ಯಮುನಾ ಸಿ.ಶೆಟ್ಟಿ, ಸಹ ಕಾರ್ಯದರ್ಶಿ ಭಾರತಿ, ಮಧುಮತಿ ಉಪಸ್ಥಿತರಿದ್ದರು. ಶರಣೆ ಮಾದಲಾಂಬಕೆ ತಂಡದ ಉಪಾಧ್ಯಕ್ಷೆ ಮಧುಮತಿ ಶಿವಕುಮಾರ್ ಪ್ರಾಸ್ತಾವಿಸಿ, ಅನುಸೂಯ ಜಗದೀಶ್ ನಿರೂಪಿಸಿದರು. ಉಷಾ ಬಸವರಾಜ್ ಸ್ವಾಗತಿಸಿ, ಮಮತಾ ವಂದಿಸಿದರು.