ಶೃಂಗೇರಿಯಲ್ಲಿ ರಂಗಿನ ರಾಜಕೀಯ ಕಸರತ್ತು
ಶೃಂಗೇರಿ: ಲೋಕಸಭಾ ಚುನಾವಣೆ ರಂಗೇರುತ್ತಿದ್ದಂತೆ ಪಟ್ಟಣದಲ್ಲಿಯೂ ರಾಜಕೀಯ ಪಕ್ಷಗಳಲ್ಲಿ ರಾಜಕೀಯ ಚಟುವಟಿಕೆ ಚುರುಕುಗೊಂಡಿದೆ.
ಈಗಾಗಲೇ ಕಾಂಗ್ರೆಸ್ ಅಭ್ಯರ್ಥಿ ಘೋಷಣೆ ಆಗಿರುವುದರಿಂದ ಪಕ್ಷ ಜಾಥಾ ನಡೆಸಿದೆ. ಮತಕ್ಷೇತ್ರಗಳ ಭೇಟಿ ಆರಂಭವಾಗಿದೆ. ಬಿಜೆಪಿಯೂ ಅಭ್ಯರ್ಥಿ ಖಚಿತ ಪಡಿಸಿರುವುದರಿಂದ ಪ್ರಚಾರ ವೇಳೆ ಕಾರ್ಯಕರ್ತರ ಶಕ್ತಿ ಪ್ರದರ್ಶನ, ಸಭೆಗಳನ್ನು ನಡೆಸುವುದರ ಮೂಲಕ ಮತದಾರರ ಬಳಿ ತೆರಳಲು ಸಜ್ಜಾಗುತ್ತಿದೆ.
ಆದರೆ, ಜೆಡಿಎಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಆಗದಿರುವುದರಿಂದ ಅಭ್ಯರ್ಥಿ ಘೋಷಣೆ ಯಾಗಿಲ್ಲ. ಒಟ್ಟಾರೆಯಾಗಿ ರಾಜಕೀಯ ಪಕ್ಷಗಳಲ್ಲಿ ಚಟುವಟಿಕೆ ಚರುಕುಗೊಂಡಿದೆ. ಈಗಾಗಲೇ ಮಲೆನಾಡು ಭಾಗದಲ್ಲಿ ಜನರ ನಿದ್ದೆಗೆಡಿಸಿರುವ ಡಾ.ಕಸ್ತೂರಿ ರಂಗನ್ ವರದಿ, ಹುಲಿ ಯೋಜನೆ, ಕುದುರೆಮುಖ ರಾಷ್ಟ್ರೀಯ ಉದ್ಯನವನ ಸಮಸ್ಯೆ, ಅಡಕೆ ಬೆಳೆಗಾರರ ಸಮಸ್ಯೆ, ಗೋರಕ್‌ಸಿಂಗ್ ವರದಿ, ಹಳದಿ ಎಲೆರೋಗ ಪ್ಯಾಕೇಜ್, ನಕ್ಸಲ್ ಸಮಸ್ಯೆ ಪ್ರಮುಖವಾಗಿ ಪಕ್ಷದ ಅಭ್ಯರ್ಥಿಗಳಿಗೆ ಸವಾಲಾಗಿ ಕಾಡಲಿದೆ. ಈಗಾಗಲೇ ಭರವಸೆಗಳನ್ನು ನಂಬಿದ್ದ ಮತದಾರರು ಯಾವ ರೀತಿ ಪ್ರತಿಕ್ರಿಯೆ ನೀಡುತ್ತಾರೆ ಎಂಬುದೇ ಕುತೂಹಲವಾಗಿದೆ.