350 ರೌಡಿಗಳ ಮೇಲೆ ಕಣ್ಣು
ಕೋಲಾರ: ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂದು ಕೋಲಾರ ಮತ್ತು ಕೆಜಿಎಫ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಜಯ್ ಹಿಲೋರಿ ತಿಳಿಸಿದರು.
ವಾರ್ತಾ ಇಲಾಖೆಯ ಮಾಧ್ಯಮ ಕೇಂದ್ರದಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣಾ ಕಾರ್ಯಕ್ಕಾಗಿ ಹೆಚ್ಚುವರಿ ಪೊಲೀಸರು ಹೊರಗಡೆಯಿಂದ ಬರಲಿದ್ದಾರೆ, ಕೇಂದ್ರ ಚುನಾವಣಾ ಆಯೋಗ ಅಗತ್ಯವಿದ್ದಲ್ಲಿ ಕೇಂದ್ರದಿಂದ ಭದ್ರತಾ ಪಡೆಗಳನ್ನು ಕಳುಹಿಸಲಿರುವುದರಿಂದ ಕೋಲಾರ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಎಲ್ಲಾ ವಿಧಾನಸಭಾ ಕ್ಷೇತ್ರಗಳಿಗೂ ಅಗತ್ಯ ಭದ್ರತಾ ವ್ಯವಸ್ಥೆ ಕೈಗೊಳ್ಳಲಾಗಿದೆ ಎಂದರು.
ಮುಂಜಾಗ್ರತಾ ಕ್ರಮವಾಗಿ ಈಗಾಗಲೇ ಜಿಲ್ಲೆಯಲ್ಲಿ 350 ರೌಡಿ ಹಿನ್ನಲೆಯ ವ್ಯಕ್ತಿಗಳನ್ನು ಗುರುತಿಸಲಾಗಿದ್ದು, ಅವರ ಮೇಲೆ ನಿಗಾ ವಹಿಸಲಾಗಿದೆ, ಜೊತೆಗೆ ಸಾಮಾಜಘಾತುಕ ಶಕ್ತಿಗಳ ನಿಗ್ರಹಕ್ಕೆ ಇಲಾಖೆ ಸಜ್ಜಾಗಿದೆ ಎಂದು ಹೇಳಿದರು. ಚುನಾವಣಾ ಅಕ್ರಮಗಳನ್ನು ತಡೆಯಲು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಗಡಿ ಪ್ರದೇಶದ ಗ್ರಾಮಗಳಲ್ಲಿ ಹಾಗೂ ಹೆದ್ದಾರಿಗಳಲ್ಲಿ ವಿಶೇಷ ಗಸ್ತಿನ ವ್ಯವಸ್ಥೆ ಮಾಡಲಾಗಿದೆ, ಮತಗಟ್ಟೆಗಳಿಗೆ ಅಗತ್ಯ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗುವುದೆಂದು ತಿಳಿಸಿದರು.