ಜನರ ಕಷ್ಟಕ್ಕೆ ಸ್ಪಂದಿಸುವ ಹೆಗ್ಡೆ ಗೆಲ್ಲಿಸಿ: ಶ್ರೀನಿವಾಸ್
ಕ.ಪ್ರ.ವಾರ್ತೆ, ತರೀಕೆರೆ. ಮಾ. 18 ಸಂಸದ ಜಯಪ್ರಕಾಶ್ ಹೆಗ್ಡೆ ಅವರು ಕ್ಷೇತ್ರದ ಸಾಮಾನ್ಯ ಜನರ ಆಶೋತ್ತರಗಳಿಗೆ ಉತ್ತಮವಾಗಿ ಸ್ಪಂದಿಸಿದ್ದಾರೆ ಎಂದು ಶಾಸಕ ಜಿ.ಎಚ್. ಶ್ರೀನಿವಾಸ್ ತಿಳಿಸಿದ್ದಾರೆ.
ಅವರು, ಮಂಗಳವಾರ ಸಮೀಪದ ಲಿಂಗದಹಳ್ಳಿಯಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ವತಿಯಿಂದ ಏರ್ಪಡಿಸಲಾಗಿದ್ದ ಭಾರತ ನಿರ್ಮಾಣ ಯಾತ್ರೆ ಜಾಥಾ ಉದ್ಘಾಟಿಸಿ ಮಾತನಾಡಿದರು.
ಸಂಸದರು ಕ್ಷೇತ್ರದಲ್ಲಿ ಹಲವು ಅಭಿವೃದ್ಧಿ ಕಾರ್ಯ ಮಾಡಿದ್ದು, ಸರಳ ಸಜ್ಜನಿಕೆಯಿಂದ ಕೂಡಿದ ವ್ಯಕ್ತಿಯಾಗಿದ್ದಾರೆ. ಹೆಗ್ಡೆ ಅವರ ಗೆಲುವಿನಿಂದ ಅಲ್ಪಸಂಖ್ಯಾತರಿಗೆ, ಹಿಂದುಳಿದವರಿಗೆ, ದಲಿತರಿಗೆ ಹಾಗೂ ಎಲ್ಲರಿಗೂ ಹೆಚ್ಚಿನ ಬಲ ಬರುತ್ತದೆ, ಅವರಿಗೆ ಹೆಚ್ಚಿನ ಮತ ನೀಡಿ ಗೆಲ್ಲಿಸಿಕೊಡಬೇಕು ಎಂದು ಅವರು ಮನವಿ ಮಾಡಿದರು.
ಇತಿಹಾಸ ಮರೆತ ಬಿಜೆಪಿ: ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಾ. ವಿಜಯಕುಮಾರ್ ಮಾತನಾಡಿ, ಬಿಜೆಪಿಯವರು ಇತಿಹಾಸ ಮರೆತಂತೆ ಕಾಣುತ್ತದೆ, ಲಾಲ್ಬಹುದ್ದೂರ್ ಶಾಸ್ತ್ರಿಯವರು ಜೈ ಜವಾನ್, ಜೈ ಕಿಸಾನ್ ಜಾರಿಗೆ ತಂದರು, ಇಂದಿರಾ ಗಾಂಧಿಯವರು ಗರೀಬಿ ಹಠಾವ್ ಘೋಷಣೆ ಮಾಡಿದರು ಎಂದರು.
ರಾಜ್ಯ ಸರ್ಕಾರ ಅಲ್ಪ ಅವಧಿಯಲ್ಲೇ ಅನ್ನಭಾಗ್ಯ, ಕ್ಷೀರಭಾಗ್ಯ ಇತ್ಯಾದಿ ಹಲವು ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ. ಸಂಸದ ಜಯಪ್ರಕಾಶ್ ಹೆಗ್ಡೆ ಸಂಸದರ ನಿಧಿಯನ್ನು ಎಲ್ಲಾ ಕಡೆ ಸಮನಾಗಿ ಹಂಚಿದ್ದಾರೆ. ಮತ್ತೆ ಅವರನ್ನು ಲೋಕಸಭೆಗೆ ಚುನಾಯಿಸಿ ಕಳುಹಿಸಿಕೊಡೋಣ ಎಂದು ತಿಳಿಸಿದರು.
ಜಿಲ್ಲಾ ಕಾಂಗ್ರೆಸ್ ವಕ್ತಾರ ಎ.ಎನ್.ಮಹೇಶ್, ಜಯರಾಂ, ಗುಳ್ಳದಮನೆ ರಾಮಚಂದ್ರಪ್ಪ ಮತ್ತಿತರರು ಮಾತನಾಡಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ್ ಘನಿ ಅನ್ವರ್, ಕೆ.ಆರ್. ಧೃವಕುಮಾರ್, ಜಿಲ್ಲಾ ಕಾಂಗ್ರೆಸ್ ಸಮಿತಿ ಖಚಾಂಚಿ ಬಿ.ಎಸ್.ಆರ್. ಮಂಜುನಾಥ್, ಎಚ್. ವಿಶ್ವನಾಥ್, ದೋರನಾಳ್ ಪರಮೇಶ್, ಪುರಸಭಾಧ್ಯಕ್ಷ ಸುನೀಲ್ ದತ್, ಸದಸ್ಯ ಪ್ರಕಾಶ್ ವರ್ಮ, ಧರ್ಮರಾಜ್, ಟಿ.ಜಿ. ಅಶೋಕ್ ಕುಮಾರ್, ಪದ್ಮರಾಜ್, ನಾಗರಾಜ್, ಮೋಹನ್ಕುಮಾರ್, ಕೆ.ಪಿ. ಕುಮಾರ್, ಮಹೇಶ್ವರಪ್ಪ, ರವಿಶಾನುಭೋಗ್, ಪಕ್ಷದ ಕಾರ್ಯಕರ್ತರು ಮತ್ತಿತರರು ಯಾತ್ರಾ ಜಾಥದಲ್ಲಿ ಭಾಗವಹಿಸಿದ್ದರು.
ಭಾರತ ನಿರ್ಮಾಣ ಯಾತ್ರೆಯನ್ನು ಕಲ್ಲತ್ತಿಪುರ ಮತ್ತಿತರರ ಕಡೆಗಳಲ್ಲೂ ಆಯೋಜಿಸಲಾಗಿತ್ತು.