ನೀರಿನ ಸಮಸ್ಯೆ ನಿವಾರಣೆಗೆ ರು. 2 ಕೋಟಿ
ಕೋಲಾರ: ನಗರದ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಸರ್ಕಾರದಿಂದ 2 ಕೋಟಿ ಬಿಡುಗಡೆ ಮಾಡಿಸಿರುವ ಜಿಲ್ಲಾಧಿಕಾರಿಗೆ ನಗರಸಭಾ ಸದಸ್ಯ ಎಸ್.ಆರ್. ಮುರಳಿಗೌಡ ಅಭಿನಂದನೆ ಸಲ್ಲಿಸಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಅವರು, ಕಳೆದ ತಿಂಗಳು ನಗರಸಭಾ ಸದಸ್ಯರು ನಗರದಲ್ಲಿನ ನೀರಿನ ಸಮಸ್ಯೆ ಪರಿಹರಿಸವಂತೆ ಆಗ್ರಹಿಸಿ ಮತ್ತು ಪ್ರತಿ ವಾರ್ಡ್‌ನಲ್ಲೂ ತಲಾ 4 ಕೊಳವೆ ಬಾವಿ ಕೊರಿಸುವಂತೆ ಒತ್ತಾಯಿಸಿ ನಗರಸಭೆ ಆವರಣದಲ್ಲಿ ಪ್ರತಿಭಟನೆ ನಡೆಸಿದ್ದರು. ಈ ಸಂದರ್ಭದಲ್ಲಿ ಪ್ರತಿಭಟನಾನಿರತ ಸದಸ್ಯರಿಂದ ಮನವಿ ಸ್ವೀಕರಿಸಿದ್ದ ಜಿಲ್ಲಾಧಿಕಾರಿ ಡಿ.ಕೆ.ರವಿ ಅವರು ಅಂದು ನೀಡಿದ ಭರವಸೆಯಂತೆ ರಾಜ್ಯ ಪೌರಾಡಳಿತ ನಿರ್ದೇಶನಾಲಯವನ್ನು ಸಂಪರ್ಕಿಸಿ, ಸಮಸ್ಯೆಯ ತೀವ್ರತೆ ಕುರಿತು ಮನವರಿಕೆ ಮಾಡಿ 2 ಕೋಟಿ ಬಿಡುಗಡೆ ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ತಿಳಿಸಿದ್ದಾರೆ.
ಸರ್ಕಾರ ಇಡೀ ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳಿಗೆ ಒಟ್ಟಾರೆ ರು. 57.40ಲಕ್ಷ ಬಿಡುಗಡೆ ಮಾಡಿದ್ದು, ಅದರಲ್ಲಿ ಹೆಚ್ಚಿನ ಪಾಲು ಅಂದರೆ ರು.200 ಲಕ್ಷ ರು.ಗಳನ್ನು ಕೋಲಾರ ನಗರಕ್ಕೆ ಮಾತ್ರವೇ ತರಲು ಕಾರಣರಾದ ಡಿಸಿಯವರಿಗೆ ಮುರಳಿಗೌಡ ಅಭಿನಂದನೆ ಸಲ್ಲಿಸಿದ್ದಾರೆ.
ನಗರಸಭೆ ಅಧಿಕಾರಿಗಳು ಕೂಡಲೇ ಕ್ರಿಯಾ ತಯಾರಿಸಿ ಅನುಮೋದನೆ ಪಡೆದು ಬಿಡುಗಡೆ ಮಾಡಿರುವ ಈ ಅನುದಾನವನ್ನು ಬಳಸಿಕೊಂಡು ಅತಿ ಶೀಘ್ರವಾಗಿ ಇರುವ ಕೊಳವೆ ಬಾವಿಗಳನ್ನು ಆಳಗೊಳಿಸುವುದು, ಸ್ವಚ್ಛಗೊಳಿಸುವುದು ಮತ್ತು ಅಗತ್ಯ ಇದ್ದೆಡೆಗಳಲ್ಲಿ ಹೊಸ ಕೊಳವೆ ಬಾವಿ ಕೊರೆಸಲು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.