ಪರೀಕ್ಷಾಂಗ ವ್ಯವಸ್ಥೆ ಸುಧಾರಣೆಗೆ ಕುವೆಂಪು ವಿವಿ ತೀರ್ಮಾನ
ಕ.ಪ್ರ.ವಾರ್ತೆ ಶಿವಮೊಗ್ಗ ಮಾ. 18
ಕೆಟ್ಟ ಮೇಲೆ ಬುದ್ಧಿ ಬಂತೆಂಬಂತೆ ಕುವೆಂಪು ವಿಶ್ವವಿದ್ಯಾಲಯ ಇದೀಗ ತನ್ನ ಪರೀಕ್ಷಾಂಗ ವ್ಯವಸ್ಥೆಯನ್ನು ಆಮೂಲಾಗ್ರವಾಗಿ ಬದಲಿಸಿಕೊಳ್ಳುವತ್ತ ಹೆಜ್ಜೆ ಇಟ್ಟಿದೆ.
ವಿರೂಪ ಅಥವಾ ತಿದ್ದುಪಡಿ ಮಾಡಲಾಗದಂತಹ ಅಂಕಪಟ್ಟಿ, ಪ್ರಮಾಣಪತ್ರ ವಿತರಣೆ ಸೇರಿದಂತೆ ಪರೀಕ್ಷಾಂಗದಲ್ಲಿ ಮಾನವ ಶಕ್ತಿ ಬಳಕೆ ದೂರ ಮಾಡಿ ಸಂಪೂರ್ಣ ಯಾಂತ್ರಿಕರಣಗೊಳಿಸಲು ವಿಶ್ವವಿದ್ಯಾಲಯ ಕ್ರಮ ಕೈಗೊಂಡಿದೆ.
ಮಂಗಳವಾರ ಸುದ್ದಿಗಾರರಿಗೆ ವಿಷಯ ತಿಳಿಸಿದ ಕುಲಪತಿ ಎಸ್.ಎ. ಬಾರಿ, ಪ್ರತಿ ವಿದ್ಯಾರ್ಥಿ ಕಾಲೇಜಿಗೆ ಸೇರಿದಾಗಿನಿಂದ ಅಂತಿಮ ಪದವಿ ಪೂರೈಸುವವರೆಗೆ ಸಂಪೂರ್ಣ ಮಾಹಿತಿಯು ಆನ್ಲೈನ್ನಲ್ಲಿ ದಾಖಲಾಗುತ್ತದೆ. ಪರೀಕ್ಷೆ ಹಾಲ್ ಟಿಕೆಟ್, ಅಂಕ ಪಟ್ಟಿ, ಪದವಿಪ್ರಮಾಣ ಪತ್ರ ಎಲ್ಲವೂ ಸಹಿತ ತಂತ್ರಜ್ಞಾನ ಆಧಾರಿತವಾಗಿ ನಡೆಯುತ್ತದೆ ಎಂದು ತಿಳಿಸಿದರು.
ಇಂಟರ್ನಲ್ ಅಸಸ್ಮೆಂಟ್ ಅಂಕಗಳ ದಾಖಲೀಕರಣ ಸಹ ಕಾಲೇಜಿನಿಂದ ನೇರವಾಗಿ ಸಂಬಂಧಪಟ್ಟ ವೆಬ್ಸೈಟ್ ಮುಖಾಂತರ ಆನ್ಲೈನ್ನಲ್ಲಿ ದಾಖಲಾಗುತ್ತದೆ. ದಾಖಲೆಗಳು ಐಬಿಎಂ ಕ್ಲೌಡ್ನಲ್ಲಿ ಕ್ರೋಢಿಕರಣವಾಗುವ ಕಾರಣ ಯಾವುದೇ ಸಂದರ್ಭದಲ್ಲೂ ಉದ್ದೇಶಪೂರ್ವಕ ತಿದ್ದುಪಡಿ ಮಾಡಲು ಅವಕಾಶವೇ ಇರುವುದಿಲ್ಲ ಎಂದು ಹೇಳಿದರು.
ಉತ್ತರ ಪತ್ರಿಕೆ ಮೌಲ್ಯಮಾಪನಕ್ಕೆ ಮುನ್ನ ನಡೆಯುವ ಕೋಡಿಂಗ್ ನಂತರ ನಡೆವ ಡಿಕೋಡಿಂಗ್ ಕಾರ್ಯ ಸಹ ಬಾರ್ಕೋಡಿಂಗ್ ಬಳಕೆ ಮಾಡಿಕೊಂಡು ಯಾಂತ್ರಿಕವಾಗಿ ನಡೆಯುತ್ತದೆ. ಹೀಗಾಗಿ ಹಿಂದೆ ನಡೆದಿದೆ ಎನ್ನಲಾದ ಅವ್ಯವಹಾರಕ್ಕೆ ಈ ಸಂದರ್ಭದಲ್ಲಿ ಅವಕಾಶವೇ ಇರುವುದಿಲ್ಲ ಎಂದು ಹೇಳಿದ ಅವರು, ಮೌಲ್ಯಮಾಪನ ಕಾರ್ಯ ನಡೆದ ಕೆಲವೇ ದಿನಗಳಲ್ಲಿ ಫಲಿತಾಂಶ ಕೊಡುವ ವ್ಯವಸ್ಥೆ ಜಾರಿಗೆ ಬರಲಿದೆ. ಪ್ರಾಯೋಗಿಕವಾಗಿ ಎರಡು ಪರೀಕ್ಷೆ ಫಲಿತಾಂಶವನ್ನು ಎರಡೇ ದಿನದಲ್ಲಿ ನೀಡಲಾಗಿದೆ. ಹಾಗೆಯೇ ಪದವಿ ಪ್ರಮಾಣ ಪತ್ರವು ಪಾಲಿಫೈಬರ್ ಹಾಳೆಯಲ್ಲಿರುತ್ತದೆ. ಹೀಗಾಗಿ ತಿರುಚುವುದಕ್ಕೂ ಅವಕಾಶ ಇರುವುದಿಲ್ಲ. ಟಾಟಾ ಕನ್ಸಲ್ಟೆನ್ಸಿ ಈ ಕಾರ್ಯ ನಡೆಸುತ್ತಿದ್ದು ದೇಶದಲ್ಲಿ ಮೊದಲು ಎಂದರು.
ಅಂಕ ಪಟ್ಟಿ, ಪದವಿ ಪ್ರಮಾಣಪತ್ರಕ್ಕೆ ಆನ್ಲೈನ್ ಅಥವಾ ಮುದ್ದಾಂ ಸಲ್ಲಿಸಿದರೆ ನಂತರ ಅರ್ಜಿದಾರರಿಗೆ ಅರ್ಜಿಯು ಯಾವ ಹಂತದಲ್ಲಿದೆ, ಎಂದು ಪ್ರಮಾಣಪತ್ರ ಲಭ್ಯವಾಗಲಿದೆ ಎಂದು ಖಚಿತ ಮಾಹಿತಿಯನ್ನು ಎಸ್ಎಂಎಸ್ ಅಥವಾ ಇ- ಮೇಲ್ ಮುಖಾಂತರ ನೀಡಲಾಗುತ್ತದೆ ಎಂದರು.
ಸಿಸಿ ಟಿವಿ: ವಿಶ್ವವಿದ್ಯಾಲಯದ ಪರೀಕ್ಷಾಂಗವನ್ನು ಸಿಸಿ ಟಿವಿ ಅಡಿಯಲ್ಲಿ ಕಾರ್ಯನಿರ್ವಹಿಸುವಂತೆ ವ್ಯವಸ್ಥೆ ಮಾಡಲಾಗಿದೆ. ಕುಲಪತಿ, ಕುಲಸಚಿವರ ಕಣ್ಗಾವಲಿನಲ್ಲಿ ಪರೀಕ್ಷಾಂಗ ಕಾರ್ಯ ನಿರ್ವಹಿಸುವುದು. ಪರೀಕ್ಷಾಂಗದ ವಾಹನಗಳಿಗೆ ಜಿಪಿಎಸ್ ಅಳವಡಿಸಲಾಗಿದ್ದು, ವಾಹನ ಸಂಚಾರದ ಮೇಲೆ ಹದ್ದಿನ ಕಣ್ಣಿಡಲಾಗುತ್ತದೆ ಎಂದು ತಿಳಿಸಿದರು.
ಪರೀಕ್ಷಾ ಅವ್ಯವಹಾರ ತನಿಖೆ ತಿಂಗಳಲ್ಲಿ ಪೂರ್ಣ
2012- 13ನೇ ಸಾಲಿನಲ್ಲಿ ಬೆಳಕಿಗೆ ಬಂದ ಕುವೆಂಪು ವಿಶ್ವವಿದ್ಯಾಲಯ ಅಂಕಪಟ್ಟಿ, ಉತ್ತರ ಪತ್ರಿಕೆ ಹಗರಣಕ್ಕೆ ಸಂಬಂಧಪಟ್ಟಂತೆ ವಿಶ್ವವಿದ್ಯಾಲಯ ನಡೆಸಿದ ಆಂತರಿಕ ತನಿಖೆ ವರದಿ ಇನ್ನೊಂದು ತಿಂಗಳಲ್ಲಿ ಸಲ್ಲಿಕೆಯಾಗುತ್ತಿದೆ.
ತನಿಖೆ ಕುರಿತಂತೆ ಮಾಹಿತಿ ನೀಡಿದ ಕುಲಪತಿ ಬಾರಿ, ನ್ಯಾ. ಎಸ್.ಬಿ. ತೋಟದ್ ಅವರು ಪ್ರಕರಣದ ಪ್ರಾಥಮಿಕ ಮಾಹಿತಿ ಕಲೆ ಹಾಕಿದ್ದು, ನ್ಯಾ. ಬಸವರಾಜ್ ತಡಾಲ್ ತನಿಖೆ ನಡೆಸಿದ್ದಾರೆ. ಈಗಾಗಲೇ ಮಧ್ಯಂತರ ವರದಿ ವಿಶ್ವವಿದ್ಯಾಲಯಕ್ಕೆ ಸಲ್ಲಿಕೆಯಾಗಿದೆ. ಅಂತಿಮ ವರದಿ ಇನ್ನೊಂದು ತಿಂಗಳಲ್ಲಿ ಸಲ್ಲಿಕೆಯಾಗುತ್ತಿದೆ. ವರದಿ ಬಂದ ನಂತರ ವಿಶ್ವವಿದ್ಯಾಲಯ ಸೂಕ್ತ ನಿರ್ಧಾರ ಕೈಗೊಳ್ಳಲಿದೆ ಎಂದರು. ಪರೀಕ್ಷಾ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಒಂಭತ್ತು ಸಿಬ್ಬಂದಿಯನ್ನು ಸೇವೆಯಿಂದ ಅಮಾನತು ಮಾಡಲಾಗಿದೆ. ಈ ಪೈಕಿ ಅನೇಕರು ಸಾಕಷ್ಟು ಒತ್ತಡ ಹೇರಿ ಸೇವೆಗೆ ಮರು ಸೇರ್ಪಡೆಗೆ ದುಂಬಾಲು ಬಿದ್ದರು. ಆದರೆ, ಅದಕ್ಕೆ ಅವಕಾಶ ಮಾಡಿಕೊಡಲಿಲ್ಲ ಎಂದು ಸ್ಪಷ್ಟಪಡಿಸಿದರು.