ವೀರಯ್ಯ ಮನವೊಲಿಕೆಗೆ ಕಸರತ್ತು
ಕೋಲಾರ: ಟಿಕೆಟ್ ಸಿಗದಿರುವುದರಿಂದ ಮುನಿಸಿಕೊಂಡಿರುವ ವಿಧಾನಪರಿಷತ್ ಸದಸ್ಯ ಡಿ.ಎಸ್. ವೀರಯ್ಯನವರ ಮನವೊಲಿಸಲು ನೂರು ಬಾರಿಯಾದರೂ ಪ್ರಯತ್ನಿಸುತ್ತೇನೆ, ನನಗೆ ಯಾರನ್ನೂ ವಿರೋಧ ಕಟ್ಟಿಕೊಳ್ಳಲು ಇಲ್ಲವೇ ಬದಿಗಿಟ್ಟು ಪ್ರಚಾರ ಮಾಡುವ ಉದ್ದೇಶವಿಲ್ಲವೆಂದು ಬಿಜೆಪಿ ಅಭ್ಯರ್ಥಿ ಎಂ.ನಾರಾಯಣಸ್ವಾಮಿ ಹೇಳಿಕೊಂಡಿದ್ದಾರೆ.
ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಚುನಾವಣಾ ನಿರ್ವಹಣಾ ಸಮಿತಿ ರಚನೆ ಸಂಬಂಧ ಕರೆದಿದ್ದ ಸಭೆಯಲ್ಲಿ ಡಿ.ಎಸ್. ವೀರಯ್ಯ ವಿಚಾರವನ್ನು ಕೆಲ ಕಾರ್ಯಕರ್ತರು ಪ್ರಸ್ತಾಪಿಸಿದಾಗ, ವೀರಯ್ಯನವರಿಗೆ ಟಿಕೆಟ್ ಸಿಗದಿರುವುದಕ್ಕೆ ಬೇಸರವಾಗಿರುವುದು ಸಹಜ. ಪಕ್ಷದ ಹಿರಿಯ ಮುಖಂಡರಾಗಿರುವ ವೀರಯ್ಯ ಮೋದಿಯವರನ್ನು ಪ್ರಧಾನಿ ಮಾಡುವ ಆಶಯಗಳಿಗೆ ಬೆಂಬಲ ನೀಡುತ್ತಾರೆಂಬ ವಿಶ್ವಾಸವಿದೆ, ಈ ಚುನಾವಣೆಯಲ್ಲಿ ಬಿಜೆಪಿಯ ಗೆಲುವಿಗೆ ಶ್ರಮಿಸಿದರೆ ಖಂಡಿತ ಮುಂದಿನ ದಿನಗಳಲ್ಲಿ ಅವರಿಗೆ ಕೇಂದ್ರ ಮತ್ತು ರಾಜ್ಯದಲ್ಲಿ ಉತ್ತಮ ಅವಕಾಶಗಳು ಸಿಗುವುದು ಖಚಿತವೆಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಈಗಾಗಲೇ ಐದು ಬಾರಿ ದೂರವಾಣಿ ಮೂಲಕ ವೀರಯ್ಯನವರೊಂದಿಗೆ ಮಾತನಾಡಿ, ಸಹಾಯ ಮಾಡುವಂತೆ ಕೋರಿದ್ದೇನೆ, ಇನ್ನೂ ನೂರು ಬಾರಿ ಬೇಕಾದರೂ ಅವರ ಬಳಿ ಮಾತನಾಡಲು ಸಿದ್ಧನಿದ್ದೇನೆ, ಕೋಲಾರ ಕ್ಷೇತ್ರದಲ್ಲಿ ಈ ಬಾರಿ ಬದಲಾವಣೆಯ ಗಾಳಿ ಬೀಸುತ್ತಿರುವುದರಿಂದ ವೀರಯ್ಯ ಸೇರಿದಂತೆ ಪಕ್ಷದ ಎಲ್ಲಾ ಮುಖಂಡರು, ಕಾರ್ಯಕರ್ತರು ಒಗ್ಗಟ್ಟಿನಿಂದ ಕೆಲಸ ಮಾಡಿದಲ್ಲಿ ಗೆಲುವು ಕಷ್ಟವೇನಿಲ್ಲವೆಂದು ತಿಳಿಸಿದ್ದಾರೆ.
ವೀರಯ್ಯ ನನ್ನ ಪರವಾಗಿ ಪ್ರಚಾರಕ್ಕೆ ಬರುವುದು ಗ್ಯಾರೆಂಟಿ, ಕಾರ್ಯಕರ್ತರಿಗೆ ಈ ಬಗ್ಗೆ ಯಾವುದೇ ಅನುಮಾನ ಬೇಡ, ಯಾವುದೇ ಗೊಂದಲ, ವದಂತಿಗಳಿಗೆ ಅವಕಾಶ ನೀಡದೆ ಪ್ರತಿಯೂಬ್ಬರು ಪಕ್ಷಕ್ಕಾಗಿ ಕೆಲಸ ಮಾಡಬೇಕೆಂದು ಮನವಿ ಮಾಡಿದ್ದಾರೆ.
ಜೆಡಿಎಸ್ ಸೇರಲ್ಲ: ವೀರಯ್ಯ ಜೆಡಿಎಸ್ ಸೇರುತ್ತಾರೆಂಬುದು ಕೇವಲ ವಂದತಿ, ಪಕ್ಷದ ಶಿಸ್ತಿನ ಸಿಪಾಯಿ ಆಗಿರುವ ಅವರು ಪಕ್ಷಾಂತರ ಮಾಡಲಾರರು, ಬಿಜೆಪಿಯ ಶಕ್ತಿಯಿಂದ ವಿಚಲಿತರಾಗಿರುವವರು ಗಾಳಿ ಸುದ್ದಿ ಹಬ್ಬಿಸುತ್ತಿದ್ದಾರೆಂದು ಹೇಳಿದ್ದಾರೆ.
ನಾಮಪತ್ರವನ್ನು ಗುರುವಾರ ಇಲ್ಲವೇ ಶುಕ್ರವಾರ ಸಲ್ಲಿಸುತ್ತೇನೆ, ಅನೇಕರು ಶುಕ್ರವಾರ ನಾಮಪತ್ರ ಸಲ್ಲಿಕೆ ಮಾಡುವಂತೆ ಸಲಹೆ ನೀಡಿದ್ದಾರೆ. ಅಂದು ಕೋಲಾರಮ್ಮ ದೇವಿಗೆ ಪೂಜೆ ಸಲ್ಲಿಸಿದ ಬಳಿಕ ನಾಮಪತ್ರ ಸಲ್ಲಿಸುವುದಾಗಿ ತಿಳಿಸಿದ್ದಾರೆ. ಇದಕ್ಕೆ ಪೂರಕವಾಗಿ ಮಂಗಳವಾರ ಮುಳಬಾಗಿಲು ತಾಲೂಕಿನ ಪ್ರಸಿದ್ಧ ಕುರುಡುಮಲೆ ಗಣಪತಿ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ.
ಇತ್ತೀಚೆಗೆ ವೀರಯ್ಯ ಕರೆದಿದ್ದ ಸಭೆಯಲ್ಲಿ ಭಾಗವಹಿಸಿದ್ದ ಮುಖಂಡರಾದ ವಿಜಯಕುಮಾರ್, ಜಯಂತಿಲಾಲ್ ಮತ್ತಿತರರು ನಾವು ಸಭೆಗೆ ಹೋಗಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿಲ್ಲ, ವೀರಯ್ಯನವರಿಗೆ ಪಕ್ಷ ತೊರೆಯಬಾರದೆಂದು ಮನವಿ ಮಾಡಲು ಹೋಗಿದ್ದೇವೆಂದು ಸ್ಪಷ್ಟನೆ ನೀಡಿದ್ದಾರೆ.
ಚುನಾವಣಾ ನಿರ್ವಹಣಾ ಸಮಿತಿ ರಚನೆಗಾಗಿ ಕರೆದಿಗಿದ್ದ ಸಭೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಕೃಷ್ಣಾರೆಡ್ಡಿ, ಬಿಬಿಎಂಪಿ ಸದಸ್ಯ ಶಿವಕುಮಾರ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಚಿಂತಾಮಣಿಯ ಸತ್ಯನಾರಾಯಣ ಮಹೇಶ್, ನಿವೃತ್ತ ಪೊಲೀಸ್ ಅಧಿಕಾರಿ ರಂಗಪ್ಪ, ತಲಗುಂದ ನರಸಿಂಹರಾಜು, ಮಾಗೇರಿ ನಾರಾಯಣಸ್ವಾಮಿ, ಮೋಹನ್ರೆಡ್ಡಿ, ಪಿ.ಎಸ್. ಸತ್ಯನಾರಾಯಣರಾವ್, ನೀಲಿ ಜಯಶಂಕರ್, ವಿಜಯಕುಮಾರ್, ಶಿಳ್ಳಂಗೆರೆ ಮಹೇಶ್ ಇದ್ದರು.
ರಹಸ್ಯ ಸಭೆ: ವೀರಯ್ಯನವರಿಗೆ ಟಿಕೆಟ್ ಕೊಡಿಸಲು ಪ್ರಯತ್ನಿಸಿದ್ದ ಕೋಲಾರ ಶಾಸಕ ವರ್ತೂರ್ ಆರ್.ಪ್ರಕಾಶ್ ಜೊತೆ ಬಿಜೆಪಿ ಅಭ್ಯರ್ಥಿ ಎಂ.ನಾರಾಯಣಸ್ವಾಮಿ ಕೋಲಾರ-ಮುಳಬಾಗಿಲು ರಸ್ತೆಯ ಅಡಿಗ ಹೋಟೆಲಿನಲ್ಲಿ ಸುಮಾರು 20 ನಿಮಿಷಗಳ ಕಾಲ ರಹಸ್ಯವಾಗಿ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.