ಸರ್ಕಾರಗಳು ಗಿಮಿಕ್ ರಾಜಕಾರಣ ಮಾಡುತ್ತಿವೆ
ಗುಡಿಬಂಡೆ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜನಪರ ಕಾರ್ಯಕ್ರಮ ಹಮ್ಮಿಕೊಳ್ಳುವುದರ ಬದಲು ಗಿಮಿಕ್ ಯೋಜನೆಗಳ ಮೂಲಕ ಜನರಿಗೆ ಮಂಕುಬೂದಿ ಎರಚುತ್ತಿವೆ ಎಂದು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಸಿಪಿಎಂ ನಿಯೋಜಿತ ಅಭ್ಯರ್ಥಿ ಜಿ.ವಿ. ಶ್ರೀರಾಮರೆಡ್ಡಿ ತಿಳಿಸಿದ್ದಾರೆ.
ಪಟ್ಟಣದ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ನಡೆದ ಸಿಪಿಎಂ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ಸರ್ಕಾರಗಳು ಜನ ವಿರೋಧಿ ಆಡಳಿತ, ಸ್ವಜನ ಪಕ್ಷಪಾತ, ಭ್ರಷ್ಟಾಚಾರ ಮುಂತಾದವುಗಳಿಂದ ರಾಜ್ಯದ ಜನತೆ ಬೇಸತ್ತಿದ್ದಾರೆ ಎಂದರು.
ಈ ಹಿಂದೆ ಕ್ಷೇತ್ರದಿಂದ ಗೆಲುವು ಸಾಧಿಸಿದ್ದ ಕೇಂದ್ರ ಮಂತ್ರಿ ವೀರಪ್ಪ ಮೊಯ್ಲಿ, ತಾವು ಜನತೆಗೆ ನೀಡಿದ್ದ ಭರವಸೆ ಮತ್ತು ಆಶ್ವಾಸನೆಗಳನ್ನು ನೆರವೇರಿಸುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ.
ಯುಪಿಎ ಸರ್ಕಾರದ ಆಡಳಿತದಲ್ಲಿ ದಿನಬಳಕೆ ವಸ್ತುಗಳ ಬೆಲೆ ಗಗನಕ್ಕೇರಿ ಜನ ಸಾಮಾನ್ಯರು ತೀವ್ರ ತೊಂದರೆ ಅನುಭವಿಸಿದ್ದಾರೆ. ಜಿಲ್ಲೆಗೆ ಶಾಶ್ವತ ನೀರಾವರಿ ಸೌಲಭ್ಯ ಒದಗಿಸುವುದಾಗಿ ಹೇಳಿದ್ದ ಮೊಯ್ಲಿ, ಪ್ರಯೋಜನಕ್ಕೆ ಬಾರದ ಎತ್ತಿನ ಹೊಳೆ ಯೋಜನೆ ಜಾರಿಗೆ ಚಾಲನೆ ನೀಡುವ ಮೂಲಕ ಜಿಲ್ಲೆಯ ರೈತರು ಮತ್ತು ಜನತೆಗೆ ನಿರಾಸೆ ಮೂಡಿಸಿದರು.
ಉದ್ಯೋಗ ಸೃಷ್ಟಿ ಮಾಡುವ ಮೂಲಕ ನಿರುದ್ಯೋಗಿ ಯುವಕ, ಯುವತಿಯರಿಗೆ ಆಸರೆ ಕಲ್ಪಿಸುವುದಾಗಿ ಹೇಳಿದ್ದ ಅವರು ಕ್ಷೇತ್ರಕ್ಕೆ ಯಾವುದೇ ಕೈಗಾರಿಕೆಗಳನ್ನು ತರುವ ಪ್ರಯತ್ನ ಮಾಡಲಿಲ್ಲ ಎಂದು ಕಿಡಿಕಾರಿದರು.
ನಂತರ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಪಿಎಂ ಜಿಲ್ಲಾ ಸಮಿತಿ ಸದಸ್ಯ ಲಕ್ಷ್ಮೀನಾರಾಯಣ, ಪ್ರತಿ ಕಾರ್ಯಕ್ರಮದಲ್ಲೂ ಮಣ್ಣಿನ ಮಕ್ಕಳು ಎಂದು ಹೇಳಿಕೊಳ್ಳುವ ಜೆಡಿಎಸ್ ನಾಯಕರು ವಿದೇಶಿ ರೇಷ್ಮೆ ಆಮದಿನಿಂದ ರೇಷ್ಮೆ ರೈತರು ದಿವಾಳಿಯಾಗಿದ್ದಾಗ ಲೋಕಸಭೆಯಲ್ಲಿ ದನಿ ಎತ್ತದೇ ಮೌನ ವಹಿಸಿದ್ದು ಮಣ್ಣಿನ ಮಕ್ಕಳ ಸಾಧನೆ.
ಅವರಿಗೆ ರೈತರ ಬಗ್ಗೆ ಕಾಳಜಿ ಇದ್ದಿದ್ದರೇ ರೈತರ ಪರ ಮಾತನಾಡುತ್ತಿದ್ದರು. ಕುಮಾರಸ್ವಾಮಿ ಅಧಿಕಾರದಲ್ಲಿದ್ದಾಗ ಶಾಶ್ವತ ನೀರಾವರಿ ಯೋಜನೆ ಜಾರಿಗೆ ತರದೇ ನಿರ್ಲಕ್ಷ್ಯ ವಹಿಸಿ ಈಗ ಅದರ ಜಾರಿಯ ಬಗ್ಗೆ ಮಾತನಾಡುತ್ತಿರುವುದು ಜನರಿಗೆ ಟೋಪಿ ಹಾಕುವ ಕಾರ್ಯ ಮಾಡುತ್ತಿದ್ದಾರೆ ಎಂದರು.
ಪಕ್ಷದ ತಾಲೂಕು ಕಾರ್ಯದರ್ಶಿ ಜಯರಾಮರೆಡ್ಡಿ ಮಾತನಾಡಿದರು. ಮಾ.22 ರಂದು ನಾಮಪತ್ರ ಸಲ್ಲಿಸಲು ಸಾವಿರ ಸಂಖ್ಯೆಯಲ್ಲಿ ಕೆಂಪು ವಸ್ತ್ರದಾರರಾಗಿ ಭಾಗವಹಿಸಬೇಕೆಂದು ಮನವಿ ಮಾಡಿದರು.
ಈ ವೇಳೆ ತಾಪಂ ಉಪಾಧ್ಯಕ್ಷ ಆದಿನಾರಾಯಣರೆಡ್ಡಿ, ಸದಸ್ಯ ಮುನಿರೆಡ್ಡಿ, ಪಕ್ಷದ ಮುಖಂಡರಾದ ಬೈರಪ್ಪ, ಪವಿತ್ರ, ಶಿವಪ್ಪ, ಹನುಮಂತರೆಡ್ಡಿ, ವೆಂಕಟಶಿವಾರೆಡ್ಡಿ, ಅಶ್ವತ್ಥಪ್ಪ, ಅಶೋಕ್, ಭಾಗ್ಯಮ್ಮ ಇದ್ದರು.