ಹೀಚಾಗುವ ಮುನ್ನವೇ ಉದುರಿದ ಮಾವಿನ ಹೂವು
ಅನಂತ ನಾಡಿಗ್
ತರೀಕೆರೆ: ಸಾಂಪ್ರದಾಯಿಕ ವೈಶಿಷ್ಟ್ಯಪೂರ್ಣವಾದ ಮಾವು ಬೆಳೆಯಿಂದ ರಾಜ್ಯದ ಮಾವಿನ ಮಾರುಕಟ್ಟೆಯಲ್ಲಿ ತನ್ನದೇ ಆದ ಪ್ರಮುಖ ಸ್ಥಾನ ಕಾಪಾಡಿಕೊಂಡು ಬಂದಿದ್ದ ತರೀಕೆರೆ ತಾಲೂಕಿನ ಸಾವಿರಾರು ಎಕರೆ ಮಾವಿನ ಬೆಳೆ ನಿರೀಕ್ಷಿಸಿದಷ್ಟು ಫಲ ತಾರದೆ, ಈ ಸಾರಿ ರೈತರ ಲೆಕ್ಕಾಚಾರವನ್ನು ಬುಡಮೇಲುಗೊಳಿಸಿದೆ, ಬೆಳೆಗಾರರು ವರ್ತಕರು ಮಾವಿನ ಬೆಳೆ ಫಲಿತಾಂಶ ಕಂಡು ನಿರಾಶೆ ಪಡುವಂತಾಗಿದೆ.
ಗುಣಮಟ್ಟದ ಮಾವಿನ ಕಾಯಿಯನ್ನು ಗಣನೀಯ ಪ್ರಮಾಣದಲ್ಲಿ ಸರಬರಾಜು ಮಾಡುತ್ತಿದ್ದ ವರ್ತಕರು ತಲೆ ಮೇಲೆ ಕೈಹೊತ್ತು ಕೂರುವಂತಾಗಿದೆ.
ತಾಲೂಕಿನ ಕಸಬಾ ಅಜ್ಜಂಪುರ, ಅಮೃತಾಪುರ, ಶಿವನಿ, ಲಿಂಗದಹಳ್ಳಿ ಹೋಬಳಿಗಳ ಸಾವಿರಾರು ಎಕರೆ ಪ್ರದೇಶದಲ್ಲಿ ಇನ್ನು ಜನವರಿ ತಿಂಗಳಿನಲ್ಲಿ ರೆಂಬೇ ಎಲೆಗಳೇ ಕಾಣದಷ್ಟು ಮರದ ತುಂಬಾ ಮಾವಿನ ಹೂಗಳಿಂದಲೇ ತುಂಬಿ ನಳ ನಳಿಸುತ್ತಿದ್ದ ಮಾವಿನ ಮರಗಳು ಇದೀಗ ಕೇವಲ ಮುವ್ವತ್ತು ದಿವಸಗಳ ಅಂತರದಲ್ಲಿ ವಾತಾವರಣದ ಏರು ಪೇರಿನಿಂದಾಗಿ ಹೂವುಗಳೆಲ್ಲಾ ಉದುರುತ್ತಿವೆ. ವಿಪರೀತ ಬಿಸಿಲಿನ ಧಗೆ, ಹೆಚ್ಚಾದ ಭೂಮಿಯ ಉಷ್ಣಾಂಶ ಮತ್ತು ತೇವಾಂಶದ ಕೊರತೆ ಇದಕ್ಕೆ ಕಾರಣ.
ಗಾಯದ ಮೇಲೆ ಬರೆ: ಮಾವು ಬೆಳೆ ಹಾಳಾಗಲು ಒಂದು ಕಡೆ ವಾತಾವರಣ ಕೈಕೊಟ್ಟರೆ, ಗಾಯದ ಮೇಲೆ ಬರೆ ಎಂಬಂತೆ ಮಾವು ಹೂವಿಗೆ ಹೀಚಿಗೆ ಜಿಗಿ ಹುಳು (ಜೋನಿ ಹುಳು) ಹೂವಿನಲ್ಲಿದ್ದ ಮಕರಂದ ಹೀರುವ ನೆಪದಲ್ಲಿ ಎಲೆ ಚಿಗುರು ಹೂವು ಎಲ್ಲದರ ರಸ ಹೀರಿ ಹಿಪ್ಪೆ ಮಾಡಿ ಮುಂದೆ ಅವು ಒಂದು ರೀತಿ ಬೆಂಕಿಯಲ್ಲಿ ಬೆಂದು ಹೋದ ರೀತಿ ಕಾಣುತ್ತಿವೆ
ತಾಲೂಕಿನಲ್ಲಿ ಅಕ್ಟೋಬರ್ ನವೆಂಬರ್ ತಿಂಗಳಿನಲ್ಲಿ ಬರಬೇಕಾದ ವಾಡಿಕೆ ಮಳೆ ಬರಲಿಲ್ಲ. ಭೂಮಿಯಲ್ಲಿ ತೇವಾಂಶವೂ ಉಳಿಯಲಿಲ್ಲ.
ಮಾವಿನ ಮರದಲ್ಲಿ ಯಥೇಚ್ಚವಾಗಿ ಹೂವು ಕಾಣಿಸಿಕಂಡರೂ, ಜನವರಿ ಮತ್ತು ಫೆಬ್ರವರಿಯಲ್ಲಿ ಬದಲಾದ ವಾತಾವರಣದಿಂದಾಗಿ ಈ ಸಾರಿ ಅರ್ಧದಷ್ಟು ಮಾವು ಇಳುವರಿ ಕಡಿಮೆಯಾಗಿದೆ.
ಜೋನಿ ಹುಳುಗಳ ಕಾಟ: ಬಹುತೇಕ ಎಲ್ಲ ಮಾವಿನ ಮರಗಳಿಗೆ ಜೋನಿ ಹುಳುಗಳ ಕಾಟ ಈರಂಭವಾಗಿದೆ. ಮೇಲಾಗಿ ಮಾವಿನ ಮರದಲ್ಲಿ ಅಕಾಲಿಕ ಚಿಗುರು ಮೂಡಿ ಮೂಲ ಮಾವಿನ ಹೂವಿಗೆ ಮತ್ತು ಹೀಚಾಗುತ್ತಿದ್ದ ಕಾಯಿಗಳಿಗೆ ಇದೊಂದು ಬಹು ದೊಡ್‌ಡ ಶಾಪ, ಇದರಿಂದಾಗಿ ಮಾವು ಬೆಳೆಯಲ್ಲಿ ಗಣನೀಯವಾಗಿ ಇಳುವರಿ ಕಡಿಮೆಯಾಗಿದೆ ಎಂದು ಮಾವು ಬೆಳೆಗಾರರಾದ ದೋರನಾಳು ಅಸ್ಲಾಂಖಾನ್ ಅಭಿಪ್ರಾಯ ಪಟ್ಟಿದ್ದಾರೆ.
ವಿಶೇಷವಾಗಿ ಕಳೆದೆರಡು ವಾರಗಳಿಂದ ತಾಲೂಕಿನಲ್ಲಿ ವಾತಾವರಣದಲ್ಲಿ ಏರಿದ ವಿಪರೀತ ಉಷ್ಣಾಂಶದಿಂದ ಮರಗಳಲ್ಲಿ ಮಿಡಿ ಹೀಚು ಕಾಯಿಗಳು ಹಳದಿ ಬಣ್ಣಕ್ಕೆ ತಿರುಗಿ ನೆಲಕ್ಕುರುಳುತ್ತಿದೆ ಎಂದು ತೋಟಗಾರಿಕೆ ಅಧಿಕಾರಿಗಳು ತಿಳಿಸಿದ್ದಾರೆ.