ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಹೆಬ್ಬೆ ತಿರುವು ಯೋಜನೆ ಜಾರಿಗೆ ಹೋರಾಟ: ದತ್ತ

Rashmi Kasaragodu
Updated On : 19 Mar 2014, 12:10 pm

ಕ.ಪ್ರ.ವಾರ್ತೆ   ಕಡೂರು   ಮಾ. 18
ತಾಲೂಕಿನ ರೈತರ ಎಲ್ಲ ಸಮಸ್ಯೆಗಳ ಅರಿವು ತಮಗಿದ್ದು ಮದಗದಕೆರೆ ಹಾಗು ತಾಲೂಕಿನ ಹಲವು ಕೆರೆಗಳಿಗೆ ನೀರು ಹರಿಸಿ  ರೈತರಿಗೆ ನೀರು ಕೊಡುವ ದೂರದೃಷ್ಟಿಯ 298 ಕೋಟಿ ರು.ನ ಹೆಬ್ಬೆ ತಿರುವು ಯೋಜನೆ ಜಾರಿಗೆ ಮಾಜಿ ಶಾಸಕರಾದ ಕೆ.ಬಿ.ಮಲ್ಲಿಕಾರ್ಜುನ್ ಸೇರಿದಂತೆ ಪಕ್ಷಾತೀತವಾಗಿ ಹೋರಾಟ ಮಾಡಲಾಗುವುದು ಎಂದು ಶಾಸಕ ವೈ.ಎಸ್.ವಿ. ದತ್ತ ಹೇಳಿದರು.
ಪಟ್ಟಣದ ವೀರಭದ್ರಸ್ವಾಮಿ ಕಲ್ಯಾಣ ಮಂಟಪದಲ್ಲಿ ನಡೆದ ಮದಗದಕೆರೆ ಅಚ್ಚುಕಟ್ಟು ಪ್ರದೇಶದ ರೈತರ ಶಾಂತಿಸಭೆ ಯಲ್ಲಿ ಭಾಗವಹಿಸಿ ಮಾತನಾಡಿದರು.
ಉತ್ತರ ಸಿಗಲಿಲ್ಲ: ಮದಗದಕೆರೆ ಪ್ರದೇಶದ ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿ ಎಷ್ಟಿದೆ ಎನ್ನುವುದು ಸರ್ಕಾರಕ್ಕೇ ತಿಳಿದಿಲ್ಲ. ಈ ಕುರಿತು ತಾವು ಸದನದಲ್ಲಿ ಪ್ರಶ್ನಿಸಿದರೂ ಉತ್ತರ ಸಿಗಲಿಲ್ಲ. ಅಡಿಕೆ ಬೆಳೆಗಾರರ ಸಂಘ ಹೊಂದಿರುವ 1941ರ ಕೆರೆ ವ್ಯಾಪ್ತಿ ಚಿತ್ರಣಕ್ಕೂ ಈಗಿನ ಚಿತ್ರಣಕ್ಕೂ ಸಾಕಷ್ಟು ಬದಲಾವಣೆ ಆಗಿದೆ ಎಂದರು.
ತಾಲೂಕಿನ ಜೀವನದಿಗಳಾದ ಮದಗದಕೆರೆ, ಅಯ್ಯನಕೆರೆ ಸೇರಿದಂತೆ ಹಲವು ಕೆರೆಗಳಿಗೆ ಶಾಶ್ವತ ನೀರೊದಗಿಸುವ ಹೆಬ್ಬೆ ತಿರುವು ಯೋಜನೆಗೆ ಸರ್ಕಾರವು ಆಡಳಿತಾತ್ಮಕ ಅನುಮೋದನೆ ನೀಡಿ 298 ಕೋಟಿ ರು. ಅಂದಾಜು ವೆಚ್ಚ ನಿಗದಿಪಡಿಸಿದೆ. ಆದರೆ ಟೆಂಡರ್ ಸಮಯದಲ್ಲಿ ಯೋಜನೆ ಜಾರಿಗೆ ಅರಣ್ಯ, ಪರಿಸರ ಇಲಾಖೆ ಆಕ್ಷೇಪಣೆ ಮತ್ತು ಭೂಸ್ವಾಧೀನ ಕುರಿತು ಸ್ಥಳೀಯ ರೈತರ ವಿರೋಧಗಳನ್ನು ಶಮನ ಮಾಡುವ ಪಕ್ಷಾತೀತ ಪ್ರಯತ್ನ ಮಾಡಲು ವೇದಿಕೆ ಅಗತ್ಯವಿದೆ. ಇದಕ್ಕೆ ಮಾಜಿ ಶಾಸಕರಾದ ಕೆ.ಬಿ. ಮಲ್ಲಿಕಾರ್ಜುನ್ ನೇತೃತ್ವದಲ್ಲಿ ವೇದಿಕೆ ರಚಿಸಿ ಯೋಜನೆ ಜಾರಿಗೆ ಹೋರಾಟ ಮಾಡೋಣ ಎಂದು ಅವರು ಹೇಳಿದರು.
ಅಧಿಕಾರಿಗಳ ನಿರ್ಲಕ್ಷ: ಮಾಜಿ ಶಾಸಕ ಕೆ.ಬಿ.ಮಲ್ಲಿಕಾರ್ಜುನ್ ಮಾತನಾಡಿ,ಕೆರೆಯ ಅಚ್ಚುಕಟ್ಟು ಪ್ರದೇಶ 7586 ಎಕರೆ ಮಾತ್ರ. ಆದರೆ ಬಗರ್‌ಹುಕುಂ ಸಾಗುವಳಿದಾರು ಸೇರಿ 25ಸಾವಿರ ಎಕರೆ ಭೂಮಿಗೆ ಮದಗದಕೆರೆಗೆ ನೀರುಣಿಸುತ್ತಿದೆ. ಇಲ್ಲಿ ಸಣ್ಣ ನೀರಾವರಿ ಮತ್ತು ಬಳಕೆದಾರರ ಸಂಘದ ನಡುವೆ ಸಮನ್ವಯ ಸಾಧಿಸಿಯೇ ಅಡಿಕೆ ಬೆಳೆಗಾರರ ಸಂಘ ಕಟ್ಟಿದ್ದು, ಹಿಂದೆ ತೂಬುಗಳಿಂದ ನೀರಿನ ನಿರ್ವಹಣೆ ಮಾಡಲಾಗುತ್ತಿತ್ತು. ಅಧಿಕಾರಿಗಳ ನಿರ್ಲಕ್ಷದಿಂದಾಗಿ ಈ ವ್ಯವಸ್ಥೆ ಹಾಳಾಗಿದೆ ಎಂದರು.
ಅಚ್ಚುಕಟ್ಟು ಪ್ರದೇಶದ ನೂರಾರು ರೈತರು ಸೇರಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಕಡೂರು ಹಾಗು ಬೀರೂರಿನ ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷರಾದ ಶಿವಶಂಕರಪ್ಪ,ಅರೇಕಲ್ ಕಾಂತರಾಜು, ಮುಖಂಡರಾದ ಮಹೇಶ್ ಒಡೆಯರ್, ಕೆ.ಎಂ. ಮಹೇಶ್ವರಪ್ಪ,ಅರೇಕಲ್ ಪ್ರಕಾಶ್, ಕೆ.ಎಂ.ವಿನಾಯಕ, ಕುಮಾರಸ್ವಾಮಿ, ಹೆಚ್.ಎಂ.ಲೋಕೇಶ್, ಸುರತಾಳ್ ಮಂಜುನಾಥ್, ಕೆ.ಹೆಚ್.ಶಂಕರ್, ಮಲ್ಲಿಕಾರ್ಜುನಪ್ಪ, ಹೆಚ್.ವಿ.ಗಿರೀಶ್ ಮತ್ತಿತರರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement