ಮಾನವ ಹಕ್ಕು ಆಂದೋಲನವಾಗಿ ರೂಪುಗೊಳ್ಳಲಿ
ಕ.ಪ್ರ.ವಾರ್ತೆ ತರೀಕೆರೆ ಮಾ. 19
ಮಾನವ ಹಕ್ಕುಗಳು ಒಂದು ಆಂದೋಲನವಾಗಿ ರೂಪುಗೊಳ್ಳಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ಹಿದಾಯತ್ ಉಲ್ಲಾ ಷರೀಫ್ ತಿಳಿಸಿದ್ದಾರೆ.
ಇಲ್ಲಿನ ಎಸ್ಜೆಎಂ ಪ್ರಥಮ ದರ್ಜೆ ಕಾಲೇಜು ರಾಜ್ಯಶಾಸ್ತ್ರ ವಿಭಾಗ, ಕರ್ನಾಟಕ ಕಾನೂನು ಮತ್ತು ಸಂಸದೀಯ ಸುಧಾರಣಾ ಸಂಸ್ಥೆ ಬೆಂಗಳೂರು ವತಿಯಿಂದ ಬುಧವಾರ ಕಾಲೇಜು ಸಭಾಂಗಣದಲ್ಲಿ ಮಾನವ ಹಕ್ಕುಗಳು ವಿಚಾರ ಸಂಕಿರಣ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಮಾನವ ಹಕ್ಕುಗಳು ಪಾಶ್ಚಾತ್ಯ ಎಂಬುದು ತಪ್ಪು ಕಲ್ಪನೆ. 3000 ಸಾವಿರ ವರ್ಷಗಳ ಹಿಂದೆಯ ವೇದಶಾಸ್ತ್ರ, ಆಗಮಗಳಲ್ಲಿ ಮಾನವ ಹಕ್ಕುಗಳ ಉಲ್ಲೇಖವಿದೆ. ಮಾನವ ಹಕ್ಕುಗಳು ಸದಾಚಾರದ ಅಡಿಗಲ್ಲಾಗಿದೆ. ದಯೆ ಧರ್ಮ ಇವುಗಳ ಮೂಲಾಧಾರವೇ ಮಾನವ ಹಕ್ಕಗಳು. ಸ್ವಾತಂತ್ರ್ಯ ಹೋರಾಟ ಮಾನವ ಹಕ್ಕುಗಳ ಹೋರಾಟವೇ ಆಗಿದೆ. ಸ್ವಾತಂತ್ರ್ಯ ಜನ್ಮಸಿದ್ಧ ಹಕ್ಕು ಎಂಬುದೇ ಪ್ರತಿಭಟನೆ. ವ್ಯಕ್ತಿ ಸ್ವಾತಂತ್ರ್ಯದ ಹಕ್ಕು ಮಾನವ ಹಕ್ಕು ಎಂದು ತಿಳಿಸಿದ ಅವರು, ಮಾನವ ಹಕ್ಕುಗಳ ಬಗ್ಗೆ ಜಾಗೃತಿ ಬರಬೇಕು. ಮಾನವ ಹಕ್ಕುಗಳನ್ನು ಕುರಿತು ಶಿಕ್ಷಣ ನೀಡಬೇಕು ಎಂದು ತಿಳಿಸಿದರು.
ಜಾಗೃತಿ ಬರಬೇಕು: ಘನತೆಯ ಜೊತೆ ಮನುಷ್ಯ ಜೀವಿಸುವ ಹಕ್ಕು, ವೈದ್ಯಕೀಯ ಹಕ್ಕು ಶೋಷಣೆಯ ವಿರುದ್ಧದ ಹಕ್ಕು ನೀಡಿದೆ. ಮಹಿಳೆಯರ ಮತ್ತು ಮಕ್ಕಳ ಹಕ್ಕುಗಳನ್ನು ಉಚ್ಚ ನ್ಯಾಯಾಲಯ, ವಿಶ್ವ ಸಂಸ್ಥೆ ಕೂಡ ಗುರುತಿಸಿದೆ. ದೇಶದ ಸಂವಿಧಾನದಲ್ಲಿ ಮಾನವ ಹಕ್ಕುಗಳನ್ನು ಗುರುತಿಸಿದೆ. ಇಂದಿನ ನಾಗರಿಕ ಸಮಾಜದಲ್ಲಿ ಮತ್ತೆ ಮತ್ತೆ ಮಾನವ ಹಕ್ಕುಗಳ ಉಲ್ಲಂಘನೆ ಆಗುತ್ತಿದೆ. ಅವುಗಳ ಬಗ್ಗೆ ಜಾಗೃತಿ ಬರಬೇಕು. ಮಾನವ ಹಕ್ಕುಗಳು ಒಂದು ಆಂದೋಲನವಾಗಿ ರೂಪುಗೊಳ್ಳಬೇಕು ಎಂದು ಅವರು ತಿಳಿಸಿದರು.
ಅರಿವು: ಬೆಂಗಳೂರು, ಕಾಸಂಸು ಸಂಸ್ಥೆ ಸಂಶೋಧನಾ ಮುಖ್ಯಸ್ಥ ಡಾ.ರೇವಯ್ಯ ಒಡೆಯರ್ ಮಾತನಾಡಿ, ಪ್ರತಿ ವ್ಯಕ್ತಿ ಮಾನವೀಯ ನೆಲೆಯಲ್ಲಿ ಜೀವಿಸಬೇಕು. ಇಂದಿನ ಸಂದರ್ಭ ಮಾನವ ಹಕ್ಕುಗಳನ್ನು ಕುರಿತು ಜನ ಸಾಮಾನ್ಯರಲ್ಲಿ ಮತ್ತು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ನಮ್ಮ ಸಂಸ್ಥೆಯು ರಾಜ್ಯದ ನಾನಾ ಭಾಗಗಳಲ್ಲಿ, ವಿವಿಧ ಕಾಲೇಜು, ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಮಾನವ ಹಕ್ಕುಗಳ ಕುರಿತಾದ ಅರಿವು ಮೂಡಿಸುವ ಕಾರ್ಯವನ್ನು ಮಾಡುತ್ತಿದೆ ಎಂದು ತಿಳಿಸಿದರು.
ಎಸ್ಜೆಎಂ ಕಾಲೇಜು ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ಕೆ.ಆರ್. ವೀರೇಶ್ ಮಾತನಾಡಿ, ಹಕ್ಕುಗಳು ಸಂವಿಧಾನಬದ್ಧವಾಗಿದೆ. ಸಮಾನತೆಯನ್ನು ನಿರಾಕರಿಸುವಂತಿಲ್ಲ. ಮಾನವ ಹಕ್ಕುಗಳಿಗೆ ಐತಿಹಾಸಿಕ ಹಿನ್ನೆಲೆ ಇದೆ, ಅಸಮಾನತೆ ಹೋಗಲಾಡಿಸಬೇಕು. ಸ್ವಾಭಿಮಾನದಿಂದ ಬದುಕಬೇಕು ಎಂದು ತಿಳಿಸಿದರು.
ಪ್ರಾಚಾರ್ಯ ಪ್ರೊ. ಬಿ.ಇ. ಕುಮಾರಪ್ಪ ಅಧ್ಯಕ್ಷತೆ ವಹಿಸಿ ಮಾನತನಾಡಿದರು. ಕಡೂರು ಸ್ನಾತಕೋತ್ತರ ರಾಜ್ಯ ಶಾಸ್ತ್ರ ಅಧ್ಯಯನ ವಿಭಾಗದ ಮುಖ್ಯಸ್ಥ ಪ್ರೊ. ಎ.ಬಿ. ಶ್ರೀಧರರಾಜು, ವಕೀಲರ ಸಂಘದ ಅಧ್ಯಕ್ಷ ಸಿ.ಎಸ್. ಶಿವಪ್ರಸಾದ್ ಅವರು ಮಾತನಾಡಿದರು.
ಉಪನ್ಯಾಸಕರಾದ ಡಾ.ಜಗದೀಶ್, ಪ್ರೊ. ಬಸವರಾಜಪ್ಪ, ಆಶಾ, ಶೃತಿ, ವಿದ್ಯಾರ್ಥಿಗಳು ಸಮಾರಂಭದಲ್ಲಿ ಭಾಗವಹಿಸಿದ್ದರು.
ಕಾರ್ಯನಿರ್ವಹಣಾಧಿಕಾರಿ ಪ್ರೊ. ಈ. ಚಿತ್ರಶೇಖರ್, ವಕೀಲರಾದ ಎಂ.ಕೆ. ತೇಜಮೂರ್ತಿ ವಿಚಾರ ಗೋಷ್ಠಿಯಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು.