ಸಿಪಿಐ 8 ಕ್ಷೇತ್ರಗಳಲ್ಲಿ ಸ್ಪರ್ಧೆ
ಚಿಕ್ಕಮಗಳೂರು: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ 8 ಲೋಕಸಭಾ ಕ್ಷೇತ್ರಗಳಲ್ಲಿ ಸಿಪಿಐ(ಎಂಎಲ್) ಪಕ್ಷ ಕಣಕ್ಕೆ ಇಳಿಯಲು ತೀರ್ಮಾನ ಕೈಗೊಂಡಿದೆ ಎಂದು ಪಕ್ಷದ ಜಿಲ್ಲಾ ಕಾರ್ಯದರ್ಶಿ ಜಿ. ಸುರೇಶ್ ತಿಳಿಸಿದ್ದಾರೆ.
ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಸಿ.ಜೆ. ಜಗದೀಶ್ ಅವರು ಸ್ಪರ್ಧೆ ಮಾಡಲು ಪಕ್ಷ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯಲ್ಲಿ ಕ್ಷೇತ್ರವಾರು ಪ್ರಚಾರ ಸಮಿತಿ ರಚನೆ ಮಾಡಲಾಗಿದ್ದು, ಚುನಾವಣಾ ನಿರ್ವಹಣಾ ಸಮಿತಿ ಅಧ್ಯಕ್ಷರಾಗಿ ಸುರೇಶ್, ಚಿಕ್ಕಮಗಳೂರು ಕ್ಷೇತ್ರ ಪ್ರಚಾರ ಸಮಿತಿ ಅಧ್ಯಕ್ಷರಾಗಿ ಬಸವರಾಜ್, ಮೂಡಿಗೆರೆ ಕ್ಷೇತ್ರ ಪ್ರಚಾರ ಸಮಿತಿ ಅಧ್ಯಕ್ಷರಾಗಿ ಗೋಪಾಲ್, ಶೃಂಗೇರಿ ಕ್ಷೇತ್ರಕ್ಕೆ ನಾಗೇಶ್ ಬೊಗಸೆ, ಮಹಿಳಾ ಚುನಾವಣಾ ಸಮಿತಿ ಅಧ್ಯಕ್ಷರಾಗಿ ಲಲಿತಾ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಹೇಳಿದ್ದಾರೆ.
ಕಳೆದ 15 ಚುನಾವಣೆಯಲ್ಲಿ ಗೆದ್ದು ಅಧಿಕಾರ ಗದ್ದುಗೆ ಹಿಡಿದ ಸರ್ಕಾರಗಳು ಜನರ ಸಮಸ್ಯೆ ಬಗೆಹರಿಸುವಲ್ಲಿ ವಿಫಲವಾಗಿವೆ. ಚುನಾವಣೆಗಳು ಕೇವಲ ಕಾರ್ಪೋರೇಟ್ ಶಕ್ತಿಗಳ ಅಭಿವೃದ್ಧಿಗಾಗಿ ನಡೆಯುತ್ತಿವೆ. ಸಾಮಾನ್ಯ ಜನಕ್ಕೆ ಯಾವುದೇ ರೀತಿ ಅನುಕೂಲವಾಗಿಲ್ಲ. ಆದ್ದರಿಂದ ಸಾಮಾನ್ಯ, ಮಧ್ಯಮ ವರ್ಗದ ಜನ ಈ ಚುನಾವಣೆಯನ್ನು ಸವಾಲಾಗಿ ತೆಗೆದುಕೊಂಡಿದ್ದಾರೆ. ಭ್ರಷ್ಟಾಚಾರದ ವಿರುದ್ಧ ಮತ ಚಲಾಯಿಸಲು ನಿರ್ಧರಿಸಿದ್ದಾರೆ ಎಂದಿದ್ದಾರೆ.
ಕಳೆದ ಬಾರಿ ಆರಿಸಿ ಹೋದ ಜಯಪ್ರಕಾಶ್ ಹೆಗ್ಡೆ ಅವರು ಈ ಕ್ಷೇತ್ರಕ್ಕೆ ಯಾವ ಕೆಲಸವನ್ನೂ ಮಾಡಿಲ್ಲ. ಶೋಭಾ ಕರಂದ್ಲಾಜೆ ಅವರು ಈ ಕ್ಷೇತ್ರದವರಲ್ಲ. ಹೀಗಾಗಿ ಜನ ಇವರನ್ನು ಈ ಬಾರಿ ತಿರಸ್ಕರಿಸಿ, ಜನಪರವಾಗಿ ನಿರಂತರವಾಗಿ ರಾಜಿ ರಹಿತವಾಗಿ ಹೋರಾಡುವ ಸಿಪಿಐ(ಎಂಎಲ್) ಪಕ್ಷವನ್ನು ಬೆಂಬಲಿಸಲಿದ್ದಾರೆ ಎಂದು ಹೇಳಿದ್ದಾರೆ.