ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಬಿಜೆಪಿಗೆ ನೀತಿಗಿಂತ ಜಾತಿ ಮುಖ್ಯ: ವಿಶ್ವನಾಥ್

Rashmi Kasaragodu
Updated On : 21 Mar 2014, 12:08 pm

ಕ.ಪ್ರ.ವಾರ್ತೆ   ಬೀರೂರು   ಮಾ. 20
ಕಾಂಗ್ರೆಸ್ ಜಾತಿಗಿಂತ ನೀತಿ ಮುಖ್ಯ ಎಂದು ಪ್ರತಿಪಾದಿಸುವ ಕೆಲಸ ಮಾಡಿದರೆ, ಬಿಜೆಪಿ, ನೀತಿಗಿಂತ ಜಾತಿ ಮುಖ್ಯವೆಂಬಂತೆ ಜನರಲ್ಲಿ ಭೇದಭಾವ ಮೂಡಿಸುತ್ತಿದೆ ಎಂದು ಸಂಸದ ಎಚ್. ವಿಶ್ವನಾಥ್ ಆರೋಪಿಸಿದ್ದಾರೆ.
ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದಿಂದ ಪುನರಾಯ್ಕೆ ಬಯಸಿ ಚುನಾವಣಾ ಕಣಕ್ಕೆ ಇಳಿಯುವ ಮುನ್ನ ಬುಧವಾರ ಕಾಗಿನೆಲೆಯ ಕುಲದೇವರಿಗೆ ಪೂಜೆ ಸಲ್ಲಿಸಿ ವಾಪಸ್ಸಾಗುವ ಮಾರ್ಗ ಮಧ್ಯೆ ಪಟ್ಟಣದ ಕಾಂಗ್ರೆಸ್ ಮುಖಂಡರ ಮನೆಗೆ ಭೇಟಿ ನೀಡಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಕಳೆದ ಹತ್ತು ವರ್ಷಗಳಲ್ಲಿ ದೇಶವನ್ನು ಎಲ್ಲಾ ಕ್ಷೇತ್ರದಲ್ಲಿ ಅಭಿವೃದ್ಧಿ ಪಥದತ್ತ ಕೊಂಡೊಯ್ದಿದೆ. ವಿಜ್ಞಾನ, ತಂತ್ರಜ್ಞಾನ, ಮಾಹಿತಿ ತಂತ್ರಜ್ಞಾನ, ಕೃಷಿ, ಕೈಗಾರಿಕೆ, ಗ್ರಾಮೀಣಾಭಿವೃದ್ಧಿ, ಶಿಕ್ಷಣ, ವಿದೇಶಾಂಗ ನೀತಿ ಸೇರಿದಂತೆ ಎಲ್ಲಾ ರಂಗಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿದೆ.
ಮಿತ್ರ ಪಕ್ಷಗಳ ಜತೆ ಸರ್ಕಾರ ನಡೆಸುವ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ಅನೇಕ ಅಪವಾದ ಹೊರಬೇಕಾಗಿ ಬಂದಿದ್ದು, ಕಾಂಗ್ರೆಸ್ ಮಿತ್ರ ಪಕ್ಷಗಳ ಕೆಲ ಪಾಪದ ಹೊರೆ ಹೊರಬೇಕಾಗಿರುವುದು ದುರದೃಷ್ಟಕರ ಎಂದರು.
ಸುಳ್ಳು ಹೇಳಿಕೆ: ಭ್ರಷ್ಟಾಚಾರದ ಬಗ್ಗೆ ಯಾರೇ ಸತ್ಯ ಹರಿಚ್ಚಂದ್ರರಂತೆ ಮಾತನಾಡಿದರು ಅದು ಆತ್ಮವಂಚನೆ ಮಾಡಿಕೊಂಡಂತೆ ಎಂದ ಅವರು, ನಾನು ಭ್ರಷ್ಟಾಚಾರವನ್ನು ಸಮರ್ಥಿಸಿಕೊಳ್ಳುತ್ತಿಲ್ಲ. ಇದು ಇಂದಿನ ಪರಿಸ್ಥಿತಿ ಉತ್ತಮ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ ಬಸವೇಶ್ವರರ ಕಾಲದಲ್ಲೂ ಆಪಾದನೆಗಳಾಗಿದ್ದವು. ಸಮಾಜದಲ್ಲಿ ಭ್ರಷ್ಟಾಚಾರ ವ್ಯವಸ್ಥೆಯನ್ನು ಒಮ್ಮೆಲೆ ಸರ್ವನಾಶ ಮಾಡಲು ಯಾರಿಂದಲೂ ಸಾಧ್ಯವಿಲ್ಲ. ನರೇಂದ್ರ ಮೋದಿಯಾಗಲಿ, ಅರವಿಂದ್ ಕೇಜ್ರಿವಾಲ್ ಆಗಲಿ ಬರಿ ಬಾಯಿಮಾತಿನ ಬಡಾಯಿ ಮೂಲಕ ಸುಳ್ಳು ಹೇಳಿಕೆಗಳ ಮೂಲಕ ಜನರನ್ನು ತಮ್ಮತ್ತ ಸೆಳೆಯಲು ತಂತ್ರ ನಡೆಸುತ್ತಿದ್ದಾರೆ ಎಂದು ಟೀಕಿಸಿದರು.
ಸುಲಭ ಕೆಲಸವಲ್ಲ: ಕಾಂಗ್ರೆಸ್ ಭ್ರಷ್ಟಾಚಾರವನ್ನು ನಿಗ್ರಹಿಸಲು ಮಾಹಿತಿ ಹಕ್ಕು ಕಾಯ್ದೆಯ ಸಹಿತ ಅನೇಕ ಕಾನೂನು ಜಾರಿಗೆ ತಂದಿದೆ. ಪ್ರಜಾಪ್ರಭುತ್ವದಲ್ಲಿ ಎಲ್ಲವನ್ನು ಒಂದೆ ಹಂತದಲ್ಲಿ ಪೂರೈಸಿ ಸುಧಾರಣೆ ತರುತ್ತೇವೆನ್ನುವುದು ಅಷ್ಟು ಸುಲಭ ಸಾಧ್ಯವಾದ ಕೆಲಸವಲ್ಲ ಎಂದರು.
ಸಿದ್ದರಾಮಯ್ಯನವರ ಸರ್ಕಾರ ಬಡವರ್ಗದವರ ಪರವಾಗಿ ಕೆಲಸ ನಿರ್ವಹಿಸುತ್ತಿದ್ದು, 1ಗೆ ಅಕ್ಕಿ ನೀಡಿದೆ. ಹಿಂದುಳಿದ ವರ್ಗದವರ 4200 ಕೋಟಿಗೂ ಹೆಚ್ಚಿನ ಸಾಲ ಮನ್ನಾ ಮಾಡಿ ಅವರಿಗೆ ಉತ್ತಮ ರೀತಿಯಲ್ಲಿ ಜೀವನ ರೂಪಿಸಿಕೊಳ್ಳಲು ಅವಕಾಶ ಕಲ್ಪಿಸಿರುವುದು, ವಸತಿಗಾಗಿ ಕ್ರಮ ಕೈಗೊಳ್ಳುತ್ತಿರುವುದು, ಬಿಸಿಯೂಟ ಯೋಜನೆಯನ್ನು ಸಮರ್ಪಕವಾಗಿ ನಿರ್ವಹಿಸುತ್ತಿರುವುದು ಗಮನಕ್ಕೆ ಬರುತ್ತಿಲ್ಲವೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement