ಚುನಾವಣೆ ಬಹಿಷ್ಕಾರ: ಗ್ರಾಮಸ್ಥರ ಬೆದರಿಕೆ
ಬಾಳೆಹೊನ್ನೂರು: ಮೇಗುಂದಾ ಹೋಬಳಿ ಅತ್ತಿಕೊಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಂಡೆಹಕ್ಲು ಗ್ರಾಮಕ್ಕೆ ಮೂಲ ಸೌಕರ್ಯ ಒದಗಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಕೊಪ್ಪ ತಾಲೂಕು ಆದಿವಾಸಿ ಬುಡಕಟ್ಟು ಕೃಷಿಕರ ಸಂಘದ ಅಧ್ಯಕ್ಷ ನಾರಾಯಣ ಆರೋಪಿಸಿದ್ದಾರೆ.
ಬೆಂಡೆಹಕ್ಲಿನಲ್ಲಿ ಇತ್ತೀಚೆಗೆ ನಡೆದ ಸಭೆಯಲ್ಲಿ ಮಾತನಾಡಿ, ಕಳೆದ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಗಿರಿಜನ ಕಾಲೋನಿಯನ್ನು ಅಭಿವೃದ್ಧಿಪಡಿಸುವುದು ಹಾಗೂ ಮೂಲ ಸೌಕರ್ಯ ಒದಗಿಸುವುದಾಗಿ ಜನಪ್ರತಿನಿಧಿಗಳು ಆಶ್ವಾಸನೆ ನೀಡಿದ್ದರು. ಆದರೆ, ಚುನಾವಣೆ ಬಳಿಕ ಕೇವಲ ಶೇ. 20ರಷ್ಟು ಮಾತ್ರ ಕಾಮಗಾರಿ ಮಾಡಲಾಗಿದೆ ಎಂದರು.
ಈ ಗ್ರಾಮದಲ್ಲಿ 20ಕ್ಕೂ ಹೆಚ್ಚು ಆದಿವಾಸಿ ಬುಡಕಟ್ಟು ಕುಟುಂಬದವರು ವಾಸವಾಗಿದ್ದಾರೆ. ತಾಲೂಕಿನ ಎಲ್ಲಾ ಆದಿವಾಸಿ ಬುಡಕಟ್ಟು ಜನಾಂಗದವರಿಗೆ ಮೂಲ ಸೌಕರ್ಯದ ಕೊರತೆಯಿದ್ದು, ಬೇಡಿಕೆ ಈಡೇರದಿದ್ದಲ್ಲಿ ತಾಲೂಕಿನಾದ್ಯಂತ ಚುನಾವಣೆ ಬಹಿಷ್ಕಾರಕ್ಕೆ ಕರೆ ನೀಡುವುದಾಗಿ ಎಚ್ಚರಿಕೆ ನೀಡಿದರು.
ಗಗನಕುಸುಮ: ಗ್ರಾಮಸ್ಥರಾದ ಅಚ್ಚುತ ಮಾತನಾಡಿ, ಎರಡು ತಲೆಮಾರಿನಿಂದ ಈ ಗ್ರಾಮದಲ್ಲೇ ವಾಸವಾಗಿದ್ದು, ರಾಜೀವ್ ಗಾಂಧಿ ವಿದ್ಯುತ್ತೀಕರಣ ಕೇವಲ ಗಗನಕುಸುಮವಾಗಿದೆ. ಈ ಹಿಂದೆ ಸೋಲಾರ್ ದೀಪ ಅಳವಡಿಸಿದ್ದು, ಅದು ದಿನದಲ್ಲಿ ಕೇವಲ ಒಂದು ಗಂಟೆ ಮಾತ್ರ ಉರಿಯುತ್ತದೆ. ಕಳಪೆ ಗುಣಮಟ್ಟದ ಸೋಲಾರ್ ದೀಪ ಪೂರೈಸಿದ್ದು, ಈ ಬಗ್ಗೆ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
ಸರ್ಕಾರ ವಿಫಲ: ಎಂ. ರಾಮಯ್ಯ ಮಾತನಾಡಿ, ವೈದ್ಯಕೀಯ ಸೇವೆಗಾಗಿ 20 ಕಿಮೀ ದೂರದ ಜಯಪುರಕ್ಕೆ ಹೋಗಬೇಕು. ಒಂದು ಬಾರಿ ಆಟೋ ಅಥವಾ ಕಾರಿನಲ್ಲಿ ಬರಬೇಕಾದರೆ 500 ಗಿಂತ ಹೆಚ್ಚು ಬಾಡಿಗೆ ತೆರಬೇಕಾಗಿದೆ. ಜನಪ್ರತಿನಿಧಿಗಳು, ಸರ್ಕಾರ ಸೂಕ್ತ ಸಾರಿಗೆ ವ್ಯವಸ್ಥೆ ಕಲ್ಪಿಸುವಲ್ಲಿ ವಿಫಲವಾಗಿದೆ ಎಂದರು.
ಗ್ರಾಮದ ಜಯಂತಿ ಮಾತನಾಡಿ, ಪ್ರಾಥಮಿಕ ಶಿಕ್ಷಣ ಪಡೆಯಲು 8 ಕಿಮೀ ದೂರದ ಕೊಗ್ರೆಗೆ ತೆರಳಬೇಕಾಗಿದೆ. ಗ್ರಾಮದಲ್ಲಿ ಇದ್ದ ಒಂದು ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇರುವ ಕಾರಣದಿಂದ ಮುಚ್ಚಲಾಗಿದೆ. ಈ ಶಾಲೆಯನ್ನು ಪುನಃ ತೆರೆಯಬೇಕು ಎಂದು ಒತ್ತಾಯಿಸಿದರು.
ಗ್ರಾಮಸ್ಥರಾದ ಕಮಲ ಮಾತನಾಡಿ, 2006 ರಲ್ಲಿ ಕೇಂದ್ರ ಸರ್ಕಾರ ಜಾರಿಗೊಳಿಸಿದ ಅರಣ್ಯ ಹಕ್ಕು ಕಾಯ್ದೆ ಈವರೆಗೂ ಜಾರಿಗೊಂಡಿಲ್ಲ. ನಮೂನೆ 53ರಲ್ಲಿ ಅರ್ಜಿ ಸಲ್ಲಿಸಿದ ಶ್ರೀಮಂತರಿಗೆ ಮಾತ್ರ ಹಕ್ಕು ಪತ್ರ ನೀಡಿದ್ದು, ಆದಿವಾಸಿಗಳನ್ನು ಕಡೆಗಣಿಸಲಾಗಿದೆ ಎಂದು ದೂರಿದರು.
ಅನುಷ್ಠಾನವಾಗಿಲ್ಲ: ಮತ್ತೊಬ್ಬ ಗ್ರಾಮಸ್ಥ ಸುರೇಶ್ ಮಾತನಾಡಿ, ಕುಡಿಯುವ ನೀರಿನ ವ್ಯವಸ್ಥೆಯಲ್ಲಿ ತಾರತಮ್ಯ ಮಾಡುತ್ತಿದ್ದು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹಾಗೂ ಅಧ್ಯಕ್ಷರು ದುರುದ್ದೇಶಪೂರ್ವಕವಾಗಿ ಸಂಪರ್ಕ ಕಲ್ಪಿಸುವಲ್ಲಿ ವಿಳಂಬ ಮಾಡುತ್ತಿದ್ದಾರೆ. ನಕ್ಸಲ್ಪೀಡಿತ ಪ್ರದೇಶವಾದ ಬೆಂಡೆಹಕ್ಲು ಗ್ರಾಮಕ್ಕೆ ಬಂದ ನಕ್ಸಲ್ ಪ್ಯಾಕೇಜ್ ಹಣ ಸಂಪೂರ್ಣ ಅನುಷ್ಠಾನವಾಗಿಲ್ಲ. ಬರೀ ಕಾಂಕ್ರಿಟ್ ರಸ್ತೆ ಅಭಿವೃದ್ಧಿ ಮಾತ್ರ ಮಾಡಲಾಗಿದೆ ಎಂದು ತಿಳಿಸಿದರು.