ಬಲಿಷ್ಠ ರಾಷ್ಟ್ರಕ್ಕಾಗಿ ಮೋದಿ ಬೆಂಬಲಿಸಿ
ಕನ್ನಡಪ್ರಭ ವಾರ್ತೆ, ಕಡೂರು, ಮಾ.23
ಕಾಂಗ್ರೆಸ್ ಅಹಂಕಾರದ ಪಕ್ಷವಾಗಿದ್ದು, ಹಾಸನ ಕಾಂಗ್ರೆಸ್ ಲೋಕಸಭಾ ಅಭ್ಯರ್ಥಿ ಮಂಜು ಕೂಡ ಅಹಂಕಾರಿಯಾಗಿದ್ದು, ಜನರು ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಿದಲ್ಲಿ ಈ ದೇಶಕ್ಕೆ ಕಾಂಗ್ರೆಸ್ ಕ್ಯಾನ್ಸರ್ ಹರಡುತ್ತದೆ ಎಂದು ಮಾಜಿ ಸಂಸದೆ ಹಾಗೂ ಬಿಜೆಪಿ ಮುಖಂಡರಾದ ತೇಜಸ್ವಿನಿ ರಮೇಶ್ ಹೇಳಿದರು.
ಪಟ್ಟಣದ ನಂದಿ ಕ್ರೀಡಾ ಭವನದಲ್ಲಿ ನಡೆದ ಬಿಜೆಪಿ ಕಡೂರು ಮಂಡಲದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.
ಬಿಜೆಪಿಗೆ ಭವ್ಯ ಭಾರತದ ಕನಸಿದೆ. ಕಾಂಗ್ರೆಸ್ನಲ್ಲಿ ಕೇವಲ ಸ್ವಾರ್ಥವಿದೆ. ಕಾಂಗ್ರೆಸ್ನಲ್ಲಿ ಯಾರು ಅಹಂಕಾರಿಗಳು ಎಂದು ತಮಗೆ ಗೊತ್ತಿದೆ. ಹಾಸನ ಲೋಕಸಭಾ ಅಭ್ಯರ್ಥಿ ಮಂಜು ಅವರೂ ಜಾತಿ, ಹಣ ಹಾಗೂ ಅಧಿಕಾರದ ಮದದಿಂದ ಮೆರೆಯುತ್ತಿರುವ ಅಭ್ಯರ್ಥಿಯಾಗಿದ್ದಾರೆ. ಕಾಂಗ್ರೆಸ್ಸಿನ ಗಂಡಸಿ ಶಿವರಾಂ ಅವರಂಥ ಸರಳರನ್ನು ಕಾಂಗ್ರೆಸ್ ಪಕ್ಷ ಯಾವ ರೀತಿ ನಡೆಸಿಕೊಳ್ಳುತ್ತಿದೆ ಎಂಬುದನ್ನು ಜನ ಗಮನಿಸುತ್ತಿದ್ದಾರೆ. ಇಂತಹ ಅಹಂಕಾರಿಗಳನ್ನು ಅಡಗಿಸಬೇಕೆಂದರೆ ಸರಳ, ಸಜ್ಜನ ರಾಜಕಾರಣಿ ಮತ್ತು ಶಿಸ್ತನ್ನು ಕಾಪಾಡಿಕೊಂಡು ಬಂದಿರುವ ವಿಜಯಶಂಕರ್ ಅವರನ್ನು ಆಯ್ಕೆ ಮಾಡಬೇಕು ಎಂದರು.
ಸೊಪ್ಪು ಹಾಕಲ್ಲ: ಯುಪಿಎ ಸರ್ಕಾರ ದೇಶದ ಕೃಷಿಕರು, ರೈತರು, ವ್ಯಾಪಾರಸ್ಥರು ಬೀದಿಗೆ ಬರುವಂತೆ ಮಾಡಿದೆ. ಕ್ಯಾನ್ಸರ್ ಬರುತ್ತದೆ ಎಂಬ ಸುಳ್ಳು ಹೇಳುತ್ತಾ ಅಡಕೆ ನಿಷೇಧಕ್ಕೆ ಮುಂದಾಗಿ ರೈತರನ್ನು ಬೀದಿಪಾಲು ಮಾಡಲು ಹೊರಟಿದೆ. ಮೋದಿಯವರನ್ನು ಅಮೇರಿಕಾ ಕೂಡ ವಿರೋಧಿಸುವಂತೆ ಸಂಚು ಮಾಡಿದ್ದು, ಕಾರಣ ಮೋದಿ ಅಧಿಕಾರಕ್ಕೆ ಬಂದರೆ ಭಾರತದಲ್ಲಿ ಅಮೇರಿಕಾದ ವ್ಯಾಪಾರ ವಹಿವಾಟು ಬಂದ್ ಆಗುವ ಭೀತಿಯಿಂದ ಮೋದಿ ಅವರನ್ನು ವಿರೋಧಿಸುತ್ತಿದ್ದು, ಇದಕ್ಕೆ ಜನ ಸೊಪ್ಪು ಹಾಕುವುದಿಲ್ಲ ಎಂದರು.
ಹಾಸನ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಸಿ.ಎಚ್. ವಿಜಯಶಂಕರ್ ಮಾತನಾಡಿ, ರಾಷ್ಟ್ರವನ್ನು ರಕ್ಷಿಸುವ ಹಾಗು ಪ್ರಬಲ ನಾಯಕತ್ವದ ಅವಶ್ಯಕತೆಗಾಗಿ ಪಕ್ಷಕ್ಕಿಂತ ನರೇಂದ್ರ ಮೋದಿಯವರ ನಾಯಕತ್ವಕ್ಕಾಗಿ ಮತ ನೀಡುವ ಮೂಲಕ ದೇಶವನ್ನು ಬಲಿಷ್ಟ ರಾಷ್ಟ್ರವನ್ನಾಗಿ ಮಾಡಬೇಕಿದೆ. ಬಿಜೆಪಿ ತತ್ವ ಹಾಗು ಸಿದ್ಧಾಂತದಡಿಯಲ್ಲಿ 1994ರಿಂದ ನನ್ನ ರಾಜಕೀಯ ಜೀವನ ಆರಂಭಿಸಿ ವಿಧಾನಸಭೆ, ಲೋಕಸಭೆ ಕ್ಷೇತ್ರಗಳಿಂದ ಆಯ್ಕೆಯಾಗಿ ಸೇವೆ ಸಲ್ಲಿಸುತ್ತಿದ್ದೇನೆ. ಪಕ್ಷವು ತಮಗೆ ಹಾಸನದಿಂದ ಸ್ಪರ್ಧಿಸುವಂತೆ ಸೂಚನೆ ನೀಡಿದ ಮೇರೆಗೆ ನಾನು ಅಭ್ಯರ್ಥಿಯಾಗಿದ್ದೇನೆ. ಇಲ್ಲಿನ ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರು ತಮಗೆ ನೀಡಿದ ಸ್ವಾಗತಕ್ಕೆ ತಾವು ಋುಣಿಯಾಗಿದ್ದೇನೆ ಎಂದರು.
ಪಾಳೇಗಾರಿಕೆ ರಾಜಕಾರಣ: ಮುಖಂಡ ನವಿಲೆ ಅಣ್ಣಪ್ಪ ಮಾತನಾಡಿ, ಹಾಸನದಲ್ಲಿ ಪಾಳೇಗಾರಿಕೆ ರಾಜಕಾರಣ ವಿರೋಧಿಸಿ ಮಾಜಿ ಪ್ರಧಾನಿ ದೇವೇಗೌಡರನ್ನು ಸೋಲಿಸಿ ಕಳುಹಿಸಿದ್ದೇವೆ. ಮೋದಿಯವರ ಕೈಬಲಪಡಿಸಲು ಕಾರ್ಯಕರ್ತರು ಕೆಲಸ ಮಾಡಬೇಕು ಎಂದರು.
ಮುಖಂಡರಾದ ಮಾಜಿ ಶಾಸಕ ಗುರುದೇವ್, ಜಿಪಂ ಅಧ್ಯಕ್ಷೆ ಪದ್ಮಾ ಚಂದ್ರಪ್ಪ, ತಾಪಂ ಅಧ್ಯಕ್ಷ ಬಸವರಾಜಪ್ಪ, ಬಿಜೆಪಿ ಮುಖಂಡರಾದ ಎಂ.ಕೆ.ಪ್ರಾಣೇಶ್, ಶಿವರಾಂ, ಬೆಳ್ಳಿ ಪ್ರಕಾಶ್, ಅರೇಕಲ್ ಪ್ರಕಾಶ್ ಕೆ.ಎಚ್. ಶಂಕರ್, ಎ. ಮಣಿ, ಆರ್. ಶಿವಕುಮಾರ್, ಪ್ರಸನ್ನ, ಎಸ್.ವಿ.ಉಮಾಪತಿ, ಶಿವಶಂಕರ್ ಮತ್ತಿತರರು ಇದ್ದರು.