'ಸುಳ್ಳು ಹೇಳುವವರ ಕೈಬಿಡಿ'
ಕಡೂರು: ಸುಳ್ಳು ಭರವಸೆ ಕೊಡುವ ರಾಜಕಾರಣಿಗಳನ್ನು ಕೈಬಿಟ್ಟು ಬಿಜೆಪಿ ಮಹಾಶಕ್ತಿ ಉದಯವಾಗಿ ನರೇಂದ್ರ ಮೋದಿ ಪ್ರಧಾನಿಯಾಗಲು ಕಾರ್ಯಕರ್ತರು ಶ್ರಮಿಸಬೇಕು ಎಂದು ಶಾಸಕ ಹಾಗೂ ರಾಜ್ಯ ಬಿಜೆಪಿ ವಕ್ತಾರ ಸಿ.ಟಿ. ರವಿ ಕರೆ ನೀಡಿದರು.
ಪಟ್ಟಣದ ನಂದಿ ಕ್ರೀಡಾ ಭವನದಲ್ಲಿ ನಡೆದ ಕಡೂರು ಮಂಡಲದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ಇಡೀ ದೇಶಕ್ಕೆ ದೇಶವೇ ಮೋದಿ ಅವರನ್ನು ಪ್ರಧಾನಿ ಮಾಡಲು ಸಿದ್ಧವಾಗಿದೆ. ರಾಷ್ಟ್ರೀಯ ಪಕ್ಷಗಳ ಸಹವಾಸ ಬೇಡ ಎನ್ನುತ್ತಿದ್ದ ಆಂಧ್ರಪ್ರದೇಶ, ತಮಿಳುನಾಡಿನಲ್ಲಿ 5 ಪ್ರಾದೇಶಿಕ ಪಕ್ಷಗಳು ಮೋದಿಗೆ ಬೆಂಬಲಿಸಲು ಒಟ್ಟಾಗಿರುವುದು ಭವಿಷ್ಯದ ಶುಭ ಸೂಚಕ ಎಂದರು.
ಈ ಹಿನ್ನೆಲೆ ಭಾರತದಲ್ಲಿ ಪ್ರತಿಯೊಂದು ಮತವೂ ಮುಖ್ಯ. ಕರ್ನಾಟಕದಲ್ಲೂ 20ಕ್ಕಿಂತ ಹೆಚ್ಚು ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲುವ ವಿಶ್ವಾಸವಿದೆ. ಯಾವ ಅನುಮಾನ ಬೇಡ. ಸರಳ, ಸಜ್ಜನ ರಾಜಕಾರಣಿಯಾದ ವಿಜಯಶಂಕರ್ ಅವರಿಗೆ ಧೈರ್ಯವಾಗಿ ಮತ ಕೇಳಿ ಗೆಲ್ಲಿಸಬೇಕು. ಆ ಮೂಲಕ ಹಾಸನ ಲೋಕಸಭಾ ಕ್ಷೇತ್ರದಲ್ಲಿ ಹೊಸ ಇತಿಹಾಸ ಬರೆಯುವ ಮೂಲಕ ಕಡೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಗೆ ಹೆಚ್ಚಿನ ಮತ ಕೊಡಿಸಬೇಕು ಎಂದರು.
ಮಂಡಲದ ಅಧ್ಯಕ್ಷ ಕೆ.ಎಚ್.ಶಂಕರ್ ಮಾತನಾಡಿ, ಎಮ್ಮೇದೊಡ್ಡಿ ಪ್ರದೇಶದ ರೈತರನ್ನು ಒಕ್ಕಲೆಬ್ಬಿಸಲಾಗುತ್ತಿದೆ ಎಂದು ಸುಳ್ಳು ಹೇಳಿ ಮಾಜಿ ಪ್ರಧಾನಿ ದೇವೇಗೌಡರು ಡಿಸಿ ಕಚೇರಿ ಎದುರು ಪ್ರತಿಭಟಿಸಿದರು. ಕಡೂರು ಕ್ಷೇತ್ರದಲ್ಲಿ ಸುಳ್ಳಿನ ರಾಜಕಾರಣ ಬಹಳ ದಿನ ನಡೆಯುವುದಿಲ್ಲ. ಉತ್ತಮ ಚಾರಿತ್ರ್ಯದ ವಿಜಯಶಂಕರ್ ಅವರನ್ನು ಪಕ್ಷ ಕಣಕ್ಕಿಳಿಸಿದ್ದು, ಎಲ್ಲ ಕಾರ್ಯಕರ್ತರೊಡನೆ ಕೈಜೋಡಿಸಿ ಅವರ ಗೆಲವಿಗೆ ಶ್ರಮಿಸುತ್ತೇವೆ ಎಂದರು.