ಸ್ಪರ್ಧಾತ್ಮಕ ಮನೋಭಾವದಿಂದ ಯಶಸ್ಸು
ಚಿಕ್ಕಮಗಳೂರು: ಯಶಸ್ಸು ಪಡೆಯಬೇಕಾದರೆ ಯುವಕರು ಸ್ಪರ್ಧಾತ್ಮಕ ಮನೋಭಾವ ಬೆಳೆಸಿಕೊಳ್ಳುವುದು ಅಗತ್ಯ ಎಂದು ಡಿವೈಎಸ್ಪಿ ಕೆ. ರಮೇಶ್ ಕುಮಾರ್ ಹೇಳಿದ್ದಾರೆ.
ನಗರದ ಕುವೆಂಪು ಕಲಾಮಂದಿರದಲ್ಲಿ ಸ್ಪರ್ಧಾ ಸ್ಫೂರ್ತಿ ಮಾಸಪತ್ರಿಕೆ ಹಾಗೂ ಕ್ಲಾಸಿಕ್ ಐಎಎಸ್ ಮತ್ತು ಕೆಎಎಸ್ ಸ್ಟಡಿ ಸರ್ಕಲ್ನ ಸಹಯೋಗದಲ್ಲಿ ಭಾನುವಾರ ಆಯೋಜಿಸಲಾಗಿದ್ದ ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತ ಕಾರ್ಯಾಗಾರದಲ್ಲಿ ಮಾತನಾಡಿ, ಗ್ರಾಮೀಣ ಯುವಜನರಲ್ಲಿ ವಿಶೇಷ ಪ್ರತಿಭೆಯಿದೆ. ಅದನ್ನು ಹೊರತರುವ ಕೆಲಸವಾಗಬೇಕಿದೆ ಎಂದರು.
ಸಮರ್ಥ ಮಾರ್ಗದರ್ಶನವಿದ್ದರೆ ಹಾಗೂ ಶಿಸ್ತುಬದ್ಧ ಯೋಜನೆಯ ಮೂಲಕ ತಯಾರಿ ಮಾಡಿದರೆ ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ಸು ಪಡೆಯುವುದು ಕಷ್ಟವಲ್ಲ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಸ್ಪರ್ಧಾ ಸ್ಫೂರ್ತಿ ಮಾಸಪತ್ರಿಕೆಯ ಪ್ರಧಾನ ಸಂಪಾದಕರಾದ ಲಕ್ಷ್ಮಣ ಉಪ್ಪಾರ ಮಾತನಾಡಿ, ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸನ್ನು ಪಡೆಯಬೇಕಾದರೆ ಅಭ್ಯರ್ಥಿಗಳು ಆತ್ಮವಿಶ್ವಾಸದಿಂದ ಅಧ್ಯಯನ ಮಾಡಬೇಕು.
ಜತೆಗೆ ಯಾವುದೇ ಪರೀಕ್ಷೆಗೆ ತಯಾರಿ ಆರಂಭಿಸುವ ಮುನ್ನ ಆಯಾ ಪರೀಕ್ಷೆಗೆ ನಿಗದಿಪಡಿಸಲಾಗಿರುವ ಪಠ್ಯಕ್ರಮ, ಕೇಳಲಾಗುವ ಪ್ರಶ್ನೆಗಳ ಬಗ್ಗೆ ಸ್ಪಷ್ಟ ತಿಳಿವಳಿಕೆ ಹೊಂದಿರಬೇಕೆಂದು ಸಲಹೆ ನೀಡಿದರು.
ಸಂಪನ್ಮೂಲ ವ್ಯಕ್ತಿಗಳಾಗಿ ಸಂಸ್ಥೆಯ ಹಿರಿಯ ಉಪನ್ಯಾಸಕ ಸುರೇಶ ಕುಲಕರ್ಣಿ, ವಿಜಯೇಂದ್ರ ಮಹಿಷಿ, ಐ.ಜಿ. ಚೌಗಲಾ, ರವಿ ಹುಚ್ಚನ್ನವರ ಭಾಗವಹಿಸಿದ್ದರು.
ಕೆಎಎಸ್ ಅಧಿಕಾರಿ ಯೋಗೇಶ ಅವರು ತಮ್ಮ ಯಶಸ್ಸಿನ ಅನುಭವವನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡರು. ಮಂಜುನಾಥ ಮಠಪತಿ, ಬಸವರಾಜ ಬಂಗಾರಿ, ರಾಜು ಲೋಂಡೆ, ರಾಘವೇಂದ್ರ ರೆಡ್ಡಿ ಇದ್ದರು.