ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಕುಸ್ತಿ: ನಾಗರಾಜ್‌ಗೆ ಸಂಗೊಳ್ಳಿ ಪ್ರಶಸ್ತಿ

Lingaraj Badiger
Updated On : 26 Mar 2014, 12:36 pm

ಬೀರೂರು: ವೀರಭದ್ರಸ್ವಾಮಿ ರಥೋತ್ಸವದ ಅಂಗವಾಗಿ ಶಿವಾಜಿ ವ್ಯಾಯಾಮ ಶಾಲೆ ಮತ್ತು ಪುರಸಭೆ ಆಶ್ರಯದಲ್ಲಿ ಕಳೆದ ಮೂರು ದಿನಗಳಿಂದ ನಡೆಯುತ್ತಿದ್ದ ರಾಜ್ಯ ಮಟ್ಟದ ಹೊನಲು ಬೆಳಕಿನ ಕುಸ್ತಿ ಪಂದ್ಯಾವಳಿಯಲ್ಲಿ ಬೆಳ್ಳಿಗದೆ ಕುಸ್ತಿಯಲ್ಲಿ ಬೆಳಗಾವಿಯ ಅಪ್ಪಸಾಬ್ ಹಾಗೂ ದಾವಣಗೆರೆಯ ಆನಂದ್ ಸಮವಾಗಿಸಿಕೊಂಡರು.
ಶಾಲಾ ಮತ್ತು ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಯುವ ಕುಸ್ತಿಪಟುಗಳು ಭಾಗವಹಿಸಿದ್ದು ವಿಶೇಷವಾಗಿತ್ತು. ಪ್ರಾಚೀನ ಕ್ರೀಡೆಗಳು ಮರೆಯಾಗುತ್ತಿದ್ದರೂ ಮಲ್ಲಯುದ್ಧದ ಒಂದು ಭಾಗವಾದ ಕುಸ್ತಿ ಕಲೆ ಇನ್ನೂ ಜೀವಂತವಾಗಿರುವುದಾಗಿ ಸಾರಿತು. ಮೈಸೂರು, ಭದ್ರಾವತಿ, ಶಿವಮೊಗ್ಗ, ಬಾಗಲಕೋಟೆ, ಬಿಜಾಪುರ, ಬೆಳಗಾವಿ ಸೇರಿದಂತೆ ರಾಜ್ಯದ ನಾನಾ ಭಾಗಗಳಿಂದ ನೂರಾರು ಕುಸ್ತಿ ಪಟುಗಳು ಆಗಮಿಸಿ ಅತ್ಯುತ್ತಮ ಪಟುಗಳ ಮೂಲಕ ತಮ್ಮ ಸಾಮರ್ಥ್ಯ ಮತ್ತು ಶಕ್ತಿ ಪ್ರದರ್ಶಿಸಿದರು.
ಪ್ರಬಲ ಸ್ಪರ್ಧೆ: ಪುರಸಭೆ ಸದಸ್ಯ ಎಸ್. ರಮೇಶ್ ನೀಡಿದ ಸಂಗೊಳ್ಳಿ ರಾಯಣ್ಣ ಪ್ರಶಸ್ತಿಯನ್ನು ದಾವಣಗೆರೆ ನಾಗರಾಜ್ ಹಾಗೂ ರಾಜು ಉತ್ತಮ ಪ್ರದರ್ಶನದ ಮೂಲಕ ಸಮವಾಗಿಸಿಕೊಂಡರು. ಸವಿತಾ ಸಮಾಜದ ಬಂಗಾರದ ಪದಕವು ಬೆಳಗಾವಿಯ ರಾಜು ಪಡೆದರೆ ಕನ್ನಡ ಸಂಘ ಪ್ರಶಸ್ತಿಯನ್ನು ಶ್ರೀನಿವಾಸ್ ಕಡೆಹಳ್ಳಿ ಪಡೆದರು. ಬೆಳ್ಳಿಗದೆ ಕುಸ್ತಿಯನ್ನು ಬೆಳಗಾವಿಯ ಅಪ್ಪಸಾಬ್ ಮತ್ತು ದಾವಣಗೆರೆ ಆನಂದ್ ಪ್ರಬಲ ಸ್ಪರ್ಧೆ ನೀಡಿ ಸಮವಾಗಿಸಿಕೊಂಡರು.
ಮಾಜಿ ಶಾಸಕರಾದ ಕೆ.ಬಿ. ಮಲ್ಲಿಕಾರ್ಜುನ್, ಮಾರ್ಗದ ಮಲ್ಲಿಕಾರ್ಜುನಪ್ಪ, ಕಾಂಗ್ರೆಸ್‌ನ ಬೀರೂರು ಬ್ಲಾಕ್ ಅಧ್ಯಕ್ಷ ಕೆ.ಎಂ. ವಿನಾಯಕ್, ಪುರಸಭೆ ಅಧ್ಯಕ್ಷರಾದ ಗೀತಾ ಹೇಮಂತ್, ಉಪಾಧ್ಯಕ್ಷ ಲೋಕೇಶಪ್ಪ, ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಮಹೇಶ್ ಒಡೆಯರ್, ಪುರಸಭೆ ಸದಸ್ಯರಾದ ಎಸ್.ಎಸ್. ದೇವರಾಜ್, ವಿಜಯೇಂದ್ರಬಾಬು, ಯತೀಶ್, ಈಶ್ವರಪ್ಪ, ಶಿವಾಜಿ ವ್ಯಾಯಾಮ ಶಾಲೆ ಅಧ್ಯಕ್ಷ ಮಂಜುನಾಥ್, ಕಾರ್ಯದರ್ಶಿ ಪೈಲ್ವಾನ್ ಕಲ್ಲಣ್ಣ, ಉಪಾಧ್ಯಕ್ಷ ಆನಂದ್ ಹಾಗೂ ಹಿರಿಯ ಕುಸ್ತಿ ಪಟುಗಳು ಸೇರಿದಂತೆ  ಗಣ್ಯರು ಇದ್ದರು.
ಕ್ರೀಡೆಗಳಿಗೆ ಸದಾ ಸ್ಫೂರ್ತಿ ನೀಡುತ್ತಾ ಬಂದಿರುವ ಪಟ್ಟಣದ ಕನ್ನಡ ಸಂಘ, ಸವಿತಾ ಸಮಾಜ, ಆಟೋ ಚಾಲಕರು, ಕನ್ನಡಸೇನೆ, ಕಟ್ಟಡ ಕಾರ್ಮಿಕರು, ಮುಸ್ಲಿಮರು, ಖಾಸಗಿ ಬಸ್ ಏಜೆಂಟರು ಸೇರಿದಂತೆ ಹಲವು ಸಂಘಗಳು ಬೆಳ್ಳಿಗದೆ, ಬಂಗಾರದ ಪದಕ, ಸಂಗೊಳ್ಳಿ ರಾಯಣ್ಣ, ಆಧಿಶಕ್ತಿ ಪ್ರಶಸ್ತಿಗಳನ್ನು ಒಳಗೊಂಡಂತೆ ಬಹುಮಾನ ಹಾಗೂ ಪಾರಿತೋಷಕ ನೀಡಿ ಕ್ರೀಡಾಸಕ್ತಿ ಮೆರೆದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement