ವಿದ್ಯುತ್ ಪರಿವರ್ತಕಕ್ಕೆ ನೂತನ ಕಂಬ ಅಳವಡಿಸಲು ಒತ್ತಾಯ
ತರೀಕೆರೆ: ಸಮೀಪದ ಗೊಣಗಿಲಕಟ್ಟೆಯ ಮುಖ್ಯ ದ್ವಾರದ ರಸ್ತೆ ಬಳಿ ಇರುವ ವಿದ್ಯುತ್ ಪರಿವರ್ತಕವಿರುವ ಎರಡು ಕಂಬಗಳೂ ಸಂಪೂರ್ಣ ಹಾಳಾಗಿದ್ದು, ಬೇರೆ ಕಂಬ ಅಳವಡಿಸುವಂತೆ ತಾಪಂ ಮಾಜಿ ಸದಸ್ಯ ಎಸ್.ಎ. ಕೃಷ್ಣಪ್ಪ ಮೆಸ್ಕಾಂ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.
ಮುಖ್ಯರಸ್ತೆಯಲ್ಲಿರುವ ಈ ವಿದ್ಯುತ್ ಪರಿವರ್ತಕದ ಎರಡೂ ಕಂಬಗಳು ತುಂಬಾ ಹಳೆಯದಾಗಿದ್ದು, ಕಂಬದ ಸೀಮೆಂಟು ಉದುರಿಹೋಗಿದೆ. ಕಬ್ಬಿಣದ ತಂತಿಗಳು ಮಾತ್ರ ಉಳಿದಿದ್ದು, ವಿದ್ಯುತ್ ಪರಿವರ್ತಕಕ್ಕೆ ಇವೇ ಆಸರೆಯಾಗಿದೆ. ಯಾವ ಕ್ಷಣದಲ್ಲಾದರೂ ಇದು ಬೀಳುವ ಸಂಭವ ಇರುತ್ತದೆ ಹಾಗೂ ತೊಟ್ಟಿಗೆ ನೀರು ಕುಡಿಯಲು ಬರುವ ದನಗಳು ಈ ಕಂಬಗಳನ್ನು ಉಜ್ಜಿದರೂ ಬೀಳುವ ಸಂಭವವಿರುವುದರಿಂದ ಮೆಸ್ಕಾಂ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಿ, ವಿದ್ಯುತ್ ಪರಿವರ್ತಕಕ್ಕೆ ನೂತನ ಕಂಬ ಅಳವಡಿಸುವ ಮೂಲಕ ಮುಂದಾಗಬಹುದಾದ ಅಪಘಾತ ತಪ್ಪಿಸಲು ಮುಂದಾಗಬೇಕು ಎಂದು ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.