ಶಿಕ್ಷಣ ಜತೆ ನೈತಿಕ ಮೌಲ್ಯ ಬೆಳೆಯಲಿ ಡಾ. ಉಡುಪ
ಶೃಂಗೇರಿ: ಮಾನವೀಯ, ನೈತಿಕ ಮೌಲ್ಯಗಳು ಅಧಃಪತನವಾಗುತ್ತಿರುವ ಇತ್ತೀಟಿನ ದಿನಗಳಲ್ಲಿ ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ನೈತಿಕ, ಸಾಂಸ್ಕೃತಿಕ ಮೌಲ್ಯಗಳನ್ನು ಬೆಳೆಸಬೇಕು ಎಂದು ಮೆಣಸೆ ರಾಜೀವ ಗಾಂಧಿ ಸಂಸ್ಕೃತ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಸಚ್ಚಿದಾನಂದ ಉಡುಪ ಹೇಳಿದರು.
ಅವರು ಕಾಲೇಜು ವಾರ್ಷಿಕೋತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿ ಜೀವನ ಅತ್ಯಮೂಲ್ಯವಾದುದು, ಸಮಾಜ, ದೇಶದ ಭವಿಷ್ಯ ನಿರ್ಧರಿಸುವಲ್ಲಿ ವಿದ್ಯಾರ್ಥಿಗಳ ಪಾತ್ರ ಮಹತ್ತರವಾಗಿದೆ ಎಂದರು.
ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡುವುದರ ಜೊತೆಗೆ ಕಲಿತ ಶಿಕ್ಷಣ ಸಂಸ್ಥೆಗೆ, ದೇಶಕ್ಕೆ, ಸಮಾಜಕ್ಕೆ ಮಹತ್ತರ ಕೊಡುಗೆ ನೀಡಬೇಕು. ನಮ್ಮ ಕಾಲೇಜಿನ ವಿದ್ಯಾರ್ಥಿಗಳು ರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಪಾಲ್ಗೊಂಡು ಸಮಗ್ರ ಪ್ರಶಸ್ತಿಗಳನ್ನು ಗಳಿಸಿ, ಕಾಲೇಜಿಗೆ ಉತ್ತಮ ಹೆಸರು ತಂದಿದ್ದಾರೆ. ಇದು ಸಂತಸದ ವಿಷಯವಾಗಿದೆ ಎಂದರು.
ಮಠದ ಸದ್ವಿದ್ಯಾ ಸಂಜೀವಿನಿ ಸಂಸ್ಕೃತ ಮಹಾಪಾಠಶಾಲೆ ಅಧ್ಯಕ್ಷ ನಾಗರಾಜ್ ಭಟ್, ದೆಹಲಿಯ ಚಾಂದ್ ಕಿರಣ ಸಲೂಜಾ ಮೊದಲಾದವರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಶಾಸ್ತ್ರಿ ತರಗತಿ ಸಾಹಿತ್ಯ ವಿಭಾಗದಲ್ಲಿ ಅತ್ಯಧಿಕ ಅಂಕಗಳಿಸಿದ್ದ ಕೆ.ಎನ್. ಮಾನಸರವರಿಗೆ ದಕ್ಷಿಣಾಮ್ನಾಯ ಶಾರದಾ ಪೀಠ ಜಗದ್ಗುರು ಭಾರತೀ ತೀರ್ಥ ಶ್ರೀ ಚಿನ್ನದ ಪದಕ ನೀಡಿ ಅಭಿನಂದಿಸಲಾಯಿತು.