ಮತಯಂತ್ರ ಪೂಜೆ ನಿಷೇಧ: ಚನ್ನಬಸಪ್ಪ
ಮೂಡಿಗೆರೆ: ಚುನಾವಣೆ ನಡೆಸಬೇಕಾದರೆ ಪ್ರತಿಯೊಬ್ಬರೂ ಪಾರದರ್ಶಕ, ಸಮರ್ಥವಾಗಿ ಕಾರ್ಯನಿರ್ವಹಿಸಬೇಕು. ಪ್ರತಿಯೊಂದಕ್ಕೂ ಸರಿಯಾದ ಲೆಕ್ಕಾಚಾರ ಇರಬೇಕು ಎಂದು ಚುನಾವಣಾಧಿಕಾರಿ ಕೆ.ಚನ್ನಬಸಪ್ಪ ಸಲಹೆ ನೀಡಿದರು.
ತಾಲೂಕು ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಸೆಕ್ಟರ್ ಅಧಿಕಾರಿಗಳಿಗೆ ಚುನಾವಣೆ ಕುರಿತು ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಚುನಾವಣೆಗೆ ಸಂಬಂಧಿಸಿದ ಯಾವುದೇ ಅಧಿಕಾರಿಗಳು ರಾಜಕೀಯ ಪ್ರಭಾವಕ್ಕೆ ಒಳಗಾಗದೆ ಕಾರ್ಯನಿರ್ವಹಿಸಬೇಕು. ಮತಗಟ್ಟೆಯಲ್ಲಿ ಮತಯಂತ್ರಗಳ ಪೂಜೆ ಕಡ್ಡಾಯವಾಗಿ ನಿಷೇಧಿಸಲಾಗಿದೆ. ಎಲ್ಲ ಮತದಾರರನ್ನು ಒಂದೇ ರೀತಿಯಾಗಿ ಕಾಣಬೇಕು. ಮತದಾನ ದಿನದಂದು ಬೆಳಗ್ಗೆ 7 ಗಂಟೆಯೊಳಗೆ ಮತಯಂತ್ರಗಳನ್ನು ಸಜ್ಜುಗೊಳಿಸಬೇಕು ಎಂದರು.
ಪೊಲೀಸರಿಗೆ ತಿಳಿಸಿ: ನಿಗದಿತ 7 ಗಂಟೆಗೆ ಸರಿಯಾಗಿ ಮತಯಂತ್ರ ಚಾಲನೆಗೊಳಿಸಬೇಕು. ಸಂಜೆ 6 ಗಂಟೆಗೆ ಸರಿಯಾಗಿ ಮತಯಂತ್ರ ಮುಕ್ತಾಯಗೊಳಿಸಬೇಕು. ಮತದಾನ ಸಂಪೂರ್ಣಗೊಂಡಿದ್ದರೂ ಮತಯಂತ್ರವನ್ನು ಸಮಯಕ್ಕೆ ಸರಿಯಾಗಿಯೇ ಆಫ್ ಮಾಡಬೇಕು. ಮತಗಟ್ಟೆ ಒಳಗೆ ತೊಂದರೆ ಕೊಡುವ ವ್ಯಕ್ತಿಗಳು ಹಾಗೂ ನಕಲಿ ಮತಚಲಾವಣೆ ಮಾಡುವ ಬಗ್ಗೆ ಕಂಡುಬಂದರೆ ಪೊಲೀಸರಿಗೆ ತಿಳಿಸಬೇಕು ಎಂದರು.
ಮಾಹಿತಿ: ಇದಕ್ಕೂ ಮುನ್ನ ಜಿಲ್ಲಾ ಮಾಸ್ಟರ್ ಟ್ರೈನರ್ ಸಲೀಂ ಪಾಶ ಮಾತನಾಡಿ, ಮತದಾನ ಮಾಡಲು ಬೆಳಗ್ಗೆ 7 ರಿಂದ ಸಂಜೆ 6 ಗಂಟೆವರೆಗೆ ಅವಕಾಶವಿರುತ್ತದೆ. ಒಂದುವೇಳೆ ಸಮಯ ಅಂತ್ಯಗೊಂಡರೂ ಮತದಾನ ಮಾಡುವ ಸಾಲು ಮುಕ್ತಾಯಗೊಳ್ಳದಿದ್ದರೆ ಅವರಿಗೂ ಕೂಡ ಮತದಾನ ಮಾಡುವ ಅವಕಾಶ ನಿಯಮದ ಪ್ರಕಾರ ಕಲ್ಪಿಸಿಕೊಡಬೇಕು. ಮತಗಟ್ಟೆಗಳಲ್ಲಿ ಕೆಲಸ ಮಾಡುವ ಅಧಿಕಾರಿಗಳಿಗೆ ಚುನಾವಣೆ ಬಗ್ಗೆ ಎಷ್ಟೇ ಅರಿವಿದ್ದರೂ ಸೆಕ್ಟರ್ ಅಧಿಕಾರಿಗಳು ಅವರ ಜತೆ ನಿರಂತರ ಸಂಪರ್ಕದೊಂದಿಗೆ ವಿಚಾರಣೆ ನಡೆಸುತ್ತಿರಬೇಕು ಎಂದು ಚುನಾವಣೆ ಕುರಿತಾಗಿ ಸಂಪೂರ್ಣ ಮಾಹಿತಿ ನೀಡಿದರು.
ಈ ವೇಳೆ ಚುನಾವಣೆ ಕುರಿತು ವೀಡಿಯೋ ಕ್ಲಿಪ್‌ಗಳನ್ನು ಪ್ರದರ್ಶಿಸುವ ಮೂಲಕ ಮಾಹಿತಿ ಒದಗಿಸಲಾಯಿತು. ತಹಸೀಲ್ದಾರ್ ಶಿವರಂಗಪ್ಪ ಮತ್ತು ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.