ಆಚಾರ, ವಿಚಾರ ಮುಂದಿನ ಪೀಳಿಗೆಗೂ ತಲುಪಲಿ
ತರೀಕೆರೆ: ಹಿರಿಯರು ಪಾಲಿಸಿದ ಕ್ರಮಬದ್ಧ ಆಚಾರ- ವಿಚಾರಗಳನ್ನು ಕಿರಿಯರು ಮುಂದಿನ ಪೀಳಿಗೆಗೂ ಮುಂದುವರಿಯುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಮಾತಾ ಗಾಯತ್ರಿ ಪ್ರತಿಷ್ಠಾನದ ಗೌರವಾಧ್ಯಕ್ಷ ವೇದ ವಿದ್ವಾನ್ ಕೆ.ಟಿ.ಲಕ್ಷ್ಮೀನಾರಾಯಣ ಭಟ್ ತಿಳಿಸಿದ್ದಾರೆ.
ತಾ. ಕಸಾಪ , ಮಮತಾ ಮಹಿಳಾ ಸಮಾಜ ವತಿಯಿಂದ ಸಮಾಜದ ಆವರಣದಲ್ಲಿ ವನಜಾಕ್ಷಮ್ಮ ಎಂ.ಎನ್. ಚೆನ್ನವೀರಪ್ಪ ದತ್ತಿ ಉಪನ್ಯಾಸ ಸಮಾರಂಭದಲ್ಲಿ 'ಭಾರತೀಯ ಹಬ್ಬ ಹರಿದಿನಗಳು ಮತ್ತು ಅದರ ಮಹತ್ವ' ಕುರಿತು ಮಾತನಾಡಿದರು.
ವರ್ಷಪೂರ್ತಿ ಆಚರಿಸುವ ಎಲ್ಲ ಹಬ್ಬ-ಹರಿದಿನಗಳು ತನ್ನದೇ ಆದ ಮಹತ್ವ ಮತ್ತು ವೈಶಿಷ್ಟ್ಯಪೂರ್ಣತೆ ಪಡೆದಿದೆ. ಆಚರಣೆಗಳು ನಮ್ಮ ಮಾನವೀಯ ಸಂಸ್ಕೃತಿ ಸಾರುತ್ತವೆ. ಯುಗಾದಿ ಹಬ್ಬ ಎಲ್ಲ ಹಬ್ಬಗಳ ಆಚರಣೆಗೆ ನಾಂದಿಯಾಗಿದೆ. ಉಪವಾಸ ಪರಮಾತ್ಮನ ಧ್ಯಾನವನ್ನು ಕೇಂದ್ರೀಕೃತಗೊಳಿಸುತ್ತದೆ ಎಂದ ಅವರು ಪ್ರತಿಯೊಂದು ಹಬ್ಬದ ಆಚರಣೆಯೂ ಉತ್ತಮ ಹಿನ್ನಲೆಯಿಂದ ಕೂಡಿದೆ ಎಂದು ಹೇಳಿದರು.
ಮಹಿಳಾ ಕಾನೂನು ಅರಿಯಿರಿ: ನ್ಯಾಯವಾದಿ ಮಮತಾ ಮಾತನಾಡಿ, ಕಾನೂನಿನ ಮುಂದೆ ಎಲ್ಲರೂ ಸರಿಸಮಾನರು. ಸಾಮಾಜಿಕವಾಗಿ ಶೈಕ್ಷಣಿಕವಾಗಿ ಮಹಿಳೆಯರು ಮುಂದೆ ಬರಬೇಕು. ಮಹಿಳೆಯರಿಗೆ ಆಸ್ತಿಯಲ್ಲಿ ಸಮಾನ ಹಕ್ಕಿದ್ದು, ಉಚಿತ ಕಾನೂನು ಪ್ರಾಧಿಕಾರದ ನೆರವು ಪಡೆಯಬೇಕು. ಉಚಿತವಾಗಿ ವಕೀಲರ ನೇಮಕ ಮಾಡಿಕೊಳ್ಳಬಹುದು. ಮಹಿಳೆಯರು ಆರ್ಥಿಕವಾಗಿ ಸಬಲರಾಗಬೇಕು ಎಂದು ತಿಳಿಸಿದರು.
ತಾ. ಕಸಾಪ ಅಧ್ಯಕ್ಷ ಜಿ.ಸುಬ್ರಹ್ಮಣ್ಯ ಮಾತನಾಡಿ ಮಕ್ಕಳನ್ನು ಕೇವಲ ವಿದ್ಯಾವಂತರನ್ನಾಗಿ ಮಾಡಿದರೆ ಮಾತ್ರ ಸಾಲದು. ಮಕ್ಕಳು ಇತರರೊಡನೆ ಸಾಮಾಜಿಕವಾಗಿ ಹೇಗೆ ಬೆರೆಯಬೇಕು ಎಂಬುದರ ಬಗ್ಗೆ ಮಕ್ಕಳಿಗೆ ಪೋಷಕರು ತಿಳಿವಳಿಕೆ, ಮಾರ್ಗದರ್ಶನ ನೀಡಬೇಕು ಎಂದರು.
ಸೌಭಾಗ್ಯಮ್ಮ ಶ್ರೀರಂಗಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಲಕ್ಷ್ಮಿ ವಿಶ್ವನಾಥ್, ಶಾರದಾ ಅಶೋಕ್, ಮಂಜುಳಾ ವಿಜಯಕುಮಾರ್, ಸಮಾಜದ ಸದಸ್ಯೆಯರು ಮತ್ತಿತರರು ಭಾಗವಹಿಸಿದ್ದರು.