ಒತ್ತುವರಿ ವಿರುದ್ಧ ಹೋರಾಟ
ಬಾಳೆಹೊನ್ನೂರು: ಮಾಜಿ ಮುಖ್ಯಮಂತ್ರಿ, ಕೇಂದ್ರದ ಮಾಜಿ ಸಚಿವರ ಅಳಿಯ ವಿ.ಜಿ. ಸಿದ್ಧಾರ್ಥ ಹೆಗ್ಡೆ ಸೀಗೋಡು ಸಮೀಪದಲ್ಲಿ ಅರಣ್ಯ ಒತ್ತುವರಿ ಮಾಡಿದ್ದರೂ ಸಹ ಸಂಬಂಧಪಟ್ಟ ಇಲಾಖೆ ಇದುವರೆಗೂ ಅವರಿಗೆ ತೆರವುಗೊಳಿಸುವಂತೆ ನೋಟಿಸ್ ನೀಡುವ ಧೈರ್ಯ ಏಕೆ ತೋರಿಲ್ಲ ಎಂದು ಧಾರವಾಡದ ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್.ಆರ್. ಹಿರೇಮಠ್ ಪ್ರಶ್ನಿಸಿದ್ದಾರೆ.
ಪಟ್ಟಣದಲ್ಲಿ ಬುಧವಾರ ಸಂಜೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊಪ್ಪ ತಾಲೂಕು ಸೀಗೋಡು ಸಮೀಪದಲ್ಲಿ ವಿ.ಜಿ. ಸಿದ್ಧಾರ್ಥ ಹೆಗ್ಡೆ ಅವರಿಗೆ ಸೇರಿದ ಕಾಫಿ ತೋಟವಿದೆ. ಅರಣ್ಯ ಇಲಾಖೆಗೆ ಸೇರಿದ ಸರ್ವೆ ನಂ. 38 ರಲ್ಲಿ 31.08 ಎಕರೆ ಮತ್ತು ಸರ್ವೆ ನಂ.52ರಲ್ಲಿ 33.31 ಎಕರೆ ಒತ್ತುವರಿ ಮಾಡಿದ ಬಗ್ಗೆ ದಾಖಲೆಗಳು ಲಭ್ಯ ಇವೆ. ಕಂದಾಯ ಇಲಾಖೆಗೆ ಸೇರಿದ 55 ಎಕರೆ ಜಾಗವನ್ನೂ ಒತ್ತುವರಿ ಮಾಡಲಾಗಿದೆ. ಇಲ್ಲಿ ಒಟ್ಟು 119.39 ಎಕರೆ ಒತ್ತುವರಿ ನಡೆದಿದ್ದರೂ ಅಧಿಕಾರಿಗಳು ಇದುವರೆವಿಗೂ ಅವರಿಗೆ ಯಾವುದೇ ನೋಟಿಸ್ ನೀಡಿಲ್ಲ ಎಂದು ಹೇಳಿದರು.
ರಹಸ್ಯವೇನು?: ಇದೇ ರೀತಿ ಖಾಂಡ್ಯ ಹೋಬಳಿಯ ಕಡಬಗೆರೆ ಸಮೀಪದಲ್ಲಿ ಬೃಹತ್ ಪ್ರಮಾಣದ ಒತ್ತುವರಿ ಮಾಡಿರುವ ಬೆಳೆಗಾರರೊಬ್ಬರಿಗೂ ನೋಟಿಸ್ ನೀಡಿಲ್ಲ. ಸಣ್ಣ ಒತ್ತುವರಿದಾರರಿಗೆ ನೋಟಿಸ್ ನೀಡಲಾಗುತ್ತಿದೆ. ಆದರೆ, ಹೆಚ್ಚಿನ ಪ್ರಮಾಣದಲ್ಲಿ ಒತ್ತುವರಿ ಮಾಡಿರುವವರಿಗೆ ನೋಟಿಸ್ ನೀಡದ ರಹಸ್ಯ ಏನು ಎಂದು ಪ್ರಶ್ನಿಸಿದರು.
ಒತ್ತುವರಿ ವಿರುದ್ಧ ಹೋರಾಟ: ಸಿದ್ಧಾರ್ಥ ಹೆಗ್ಡೆ ಸ್ವಯಂ ಪ್ರೇರಿತರಾಗಿ ಒತ್ತುವರಿ ತೆರವುಗೊಳಿಸಿದ್ದಾರೆ ಎಂಬ ಅಧಿಕಾರಿಗಳ ಮಾತಿನ ಕುರಿತು ಉತ್ತರಿಸಿದ ಅವರು, ಸರ್ಕಾರಿ ಜಮೀನು ಒತ್ತುವರಿ ಮಾಡಿ ಬಿಟ್ಟುಕೊಟ್ಟಿದ್ದೇವೆ ಎಂದರೆ, ಅದಕ್ಕೆ ಇಲಾಖೆ ಯಾವ ಕ್ರಮ ಕೈಗೊಂಡಿವೆ. ಪರಿಸರ ನಾಶದ ಕುರಿತು ಯಾರು ಹೊಣೆಗಾರರು? ದುರಾಸೆಗಾಗಿ ಒತ್ತುವರಿ ಮಾಡಿದವರ ವಿರುದ್ಧ ಮಾತ್ರ ನಮ್ಮ ಹೋರಾಟ ಹೊರತು ಸಾಮಾನ್ಯ ವ್ಯಕ್ತಿಗಳ ವಿರುದ್ಧವಲ್ಲ ಎಂದರು.
10 ಎಕರೆಗೂ ಮೇಲ್ಪಟ್ಟು ಒತ್ತುವರಿ ಮಾಡಿದವರನ್ನು ಮಾತ್ರ ತೆರವುಗೊಳಿಸುವಂತೆ ಅರ್ಜಿ ಸಲ್ಲಿಸಲಾಗಿದೆ ಎಂದು ಅವರು ದಾಖಲೆ ಪ್ರದರ್ಶಿಸಿದರು. ಜಯಪುರ ಕಂದಾಯ ಇಲಾಖೆಯ ನಿರೀಕ್ಷಕ ಶೇಷಮೂರ್ತಿ, ಕಂದಾಯ ನಿರೀಕ್ಷಕ ವಿನಯ್ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳದಲ್ಲಿ ಹಾಜರಿದ್ದರು.